ಮಂಗಳೂರು: "ತುಳು ಭಾಷೆಯನ್ನು ರಾಜ್ಯಭಾಷೆಯನ್ನಾಗಿ ಮಾಡುವ ಕುರಿತು ಈಗಾಗಲೇ ಮೂಡಬಿದಿರೆಯ ಡಾ. ಎಂ ಮೋಹನ್ ಆಳ್ವ ನೇತೃತ್ವದ ನಿಯೋಗದ ವರದಿ ಸೇರಿದಂತೆ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಲಾಗಿದೆ. ಬೇರೆ ರಾಜ್ಯಗಳು ಒಂದಕ್ಕಿಂತ ಅಧಿಕ ಭಾಷೆಗಳನ್ನು ಯಾವ ರೀತಿ ಅಧಿಕೃತ ಭಾಷೆಯನ್ನಾಗಿ ಮಾಡಿದವು ಎಂಬ ಸಂಪೂರ್ಣ ವರದಿಯನ್ನು ರಾಜ್ಯ ಸರ್ಕಾರ ಈಗಾಗಲೇ ಪಡೆದಿದೆ. ಇದೀಗ ಕನ್ನಡ ಮತ್ತು ಸಂಸ್ಕೃತಿಯ ಇಲಾಖೆಯ ಮೂಲಕ ಕ್ಯಾಬಿನೆಟ್ನಲ್ಲಿ ಆದೇಶಿಸಲು ಮಾತ್ರ ಬಾಕಿಯಿದೆ. 95 ಶೇಕಡಾ ಕೆಲಸಗಳು ಸಂಪೂರ್ಣಗೊಂಡಿದ್ದು, 5 ಶೇಕಡಾ ಕೆಲಸಗಳು ಮಾತ್ರ ಬಾಕಿಯಿದೆ. ಅದು ಕೂಡಾ ಆದಷ್ಟು ಶೀಘ್ರದಲ್ಲಿ ಆಗಬೇಕೆನ್ನುವುದು ನಮ್ಮ ಆಶಯ" ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.
ತುಳು ಭಾಷೆಗೆ ರಾಜ್ಯಭಾಷೆಯ ಸ್ಥಾನಮಾನ ದೊರಕಬೇಕು ಎನ್ನುವ ನಿಟ್ಟಿನಲ್ಲಿ ಮಂಗಳೂರು ಉರ್ವಸ್ಟೋರ್ನ ತುಳುಭವನದಲ್ಲಿ ಸಂವಾದ ಕಾರ್ಯಕ್ರಮ ನಡೆಯಿತು. ಈ ವೇಳೆ ಮಾಧ್ಯಮದವರ ಜೊತೆಗೆ ಮಾತನಾಡಿದ ಅವರು, "ತುಳುನಾಡಿನ ಎಲ್ಲಾ ಪಕ್ಷಗಳ ಮುಖಂಡರು ಪಕ್ಷ ಭೇದ ಮರೆತು ತುಳು ಭಾಷೆಯ ಸ್ಥಾನಮಾನಕ್ಕಾಗಿ ಹೋರಾಟ ಮಾಡಬೇಕು. ತುಳು ರಾಜ್ಯಭಾಷೆಯಾದರೆ ವಿಧಾನಸಭೆಯಲ್ಲಿ ನಾವು ತುಳುವಿನಲ್ಲಿ ಮಾತನಾಡಿದರೆ ಅದು ದಾಖಲೆಗೆ ಸೇರುತ್ತದೆ" ಎಂದು ಹೇಳಿದರು.