ಬೆಳಗಾವಿ:ಶೇ.95ರಷ್ಟು ವಕ್ಫ್ ಆಸ್ತಿಯಲ್ಲಿ ಒತ್ತುವರಿ ಮಾಡಿರುವುದು ಮುಸ್ಲಿಮರೇ ಎಂದು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಹಾಗೂ ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಸ್ಪಷ್ಟಪಡಿಸಿದರು.
ವಿಧಾನಸಭೆಯಲ್ಲಿ ಇಂದು ನಿಯಮ 69 ಅಡಿಯಲ್ಲಿ ನಡೆದ ವಕ್ಫ್ ನೋಟಿಸ್ ಚರ್ಚೆಗೆ ಉತ್ತರಿಸಿದ ಸಚಿವ ಜಮೀರ್, ವಿಜಯಪುರದಲ್ಲಿ ನಡೆದ ವಕ್ಫ್ ಅದಾಲತ್ಗೆ ಯತ್ನಾಳ್ ಬರಲಿಲ್ಲ. ಬಳಿಕ ಗೊಂದಲ ಶುರು ಮಾಡಿದ್ರು. ರೈತರ ಜಮೀನು ವಕ್ಫ್ ಹೆಸರಲ್ಲಿ ಮಾಡಿ ಅಂತ ನಾನು ಸೂಚನೆ ಕೊಡಲಿಲ್ಲ. ರಾಜ್ಯದಲ್ಲಿ 1.28 ಲಕ್ಷ ಕೋಟಿ ವಕ್ಫ್ಗೆ ಸೇರಿದ ಆಸ್ತಿ ಇದೆ. ಇದು ದಾನಿಗಳು ಕೊಟ್ಟಿದ್ದು. 17,963 ಎಕರೆ ವಕ್ಫ್ ಆಸ್ತಿ ಖಾಸಗಿಯವರು ಕಬಳಿಸಿದ್ದಾರೆ, ಇದರಲ್ಲಿ ಶೇ.95ರಷ್ಟು ಮುಸ್ಲಿಮರೇ ಕಬಳಿಸಿದ್ದಾರೆ. ಈ ಕಬಳಿಕೆ ತೆರವಿಗೆ ನೋಟಿಸ್ ಕೊಟ್ಟಿದ್ದೇವೆಯೇ ಹೊರತು ರೈತರು, ಮಠ ಮಂದಿರಗಳ ಜಮೀನಿಗೆ ಕೊಟ್ಟಿಲ್ಲ ಎಂದರು.
ಯಾವುದೇ ಕಾರಣಕ್ಕೂ ದೇವಸ್ಥಾನ, ರೈತರ ಆಸ್ತಿ ವಾಪಸ್ ಪಡೆದುಕೊಳ್ಳುವ ಉದ್ದೇಶವೇ ಇಲ್ಲ. ವಕ್ಫ್ ಆಸ್ತಿ ಕಬಳಿಕೆ ವಿಚಾರವಾಗಿ ಎಲ್ಲಾ ಸರ್ಕಾರದ ಅವಧಿಯಲ್ಲಿ ನೋಟಿಸ್ ನೀಡಲಾಗಿದೆ. ಕೇವಲ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಾತ್ರ ಅಲ್ಲ, ಬಿಜೆಪಿ ಅವಧಿಯಲ್ಲಿ 2008ರಿಂದ 2013ರವರೆಗೆ 1,100, 2019-23ರವರೆಗೆ 4,567 ನೋಟಿಸ್ ಕೊಡಲಾಗಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 3,286 ನೋಟಿಸ್ ಕೊಡಲಾಗಿದೆ ಎಂದು ಮಾಹಿತಿ ನೀಡಿದರು.
1930ರಲ್ಲಿ ವಕ್ಫ್ ಕಾಯ್ದೆ ಆಗಿದೆ. ಸ್ವಾತಂತ್ರ್ಯದ ಬಳಿಕ 1954ರಲ್ಲಿ ವಕ್ಪ್ ತಿದ್ದುಪಡಿ ಕಾಯ್ದೆ ಆಗುತ್ತದೆ. 1995ರಲ್ಲಿ ಸುಪ್ರೀಂ ಕೋರ್ಟ್ ಆದೇಶ ಆಗಿದ್ದು, ಇದರಲ್ಲಿ ಒಮ್ಮೆ ವಕ್ಫ್ ಎಂದು ಘೋಷಣೆ ಆದ್ರೆ ಅದು ಅಂತಿಮವಾಗಿ ವಕ್ಫ್ ಆಸ್ತಿ ಆಗುತ್ತದೆ ಎಂದಿದೆ. ಇದಕ್ಕೆ ಸಂಬಂಧಿಸಿದಂತೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕಾನೂನು ಇಲಾಖೆಗೆ ಪತ್ರ ಬರೆದು ಸ್ಪಷ್ಟನೆ ಕೇಳಿದಾಗ ಇನಾಂ ರದ್ದತಿ ಕಾಯ್ದೆ, ಭೂ ಸುಧಾರಣಾ ಕಾಯ್ದೆ ಅನ್ವಯ ಆಗಲ್ಲ ಎಂದಿದೆ.
1974ರ ಆ್ಯಕ್ಟ್ ಇದ್ರೂ ಕೂಡ ನಾವು ರೈತರು, ದೇವಸ್ಥಾನದ ಜಾಗ ಮುಟ್ಟಲ್ಲ. ಆ ರೀತಿ ರೈತರ ಆಸ್ತಿ ಮುಟ್ಟಿದ್ರೆ ತೋರಿಸಿ ನಾನೇ ಬಂದು ತೆಗೆಸುತ್ತೇನೆ. ರೈತರು ನಮ್ಮ ಅನ್ನದಾತರು. ವಿಪಕ್ಷಗಳು ಈ ರೀತಿಯ ರಾಜಕೀಯ ಮಾಡಬಾರದು. ಉಪಚುನಾವಣೆ ಇಲ್ಲಾಂದ್ರೆ ವಿಪಕ್ಷ ವಕ್ಫ್ ವಿವಾದ ತರುತ್ತಿರಲಿಲ್ಲ. ಆದರೂ ಉಪಚುನಾವಣೆಯಲ್ಲಿ ನಮಗೆ ಗೆಲುವಾಯ್ತು. ನಾನು ಮುಸ್ಲಿಂ ಆಗಿರಬಹುದು, ಮೊದಲು ಹಿಂದೂಸ್ತಾನಿ, ನಂತರ ಕನ್ನಡಿಗ, ಬಳಿಕ ಮುಸ್ಲಿಂ ಎಂದು ತಿಳಿಸಿದರು.