ಕರ್ನಾಟಕ

karnataka

ETV Bharat / state

ಕರ್ನಾಟಕದಲ್ಲಿ 2 ಹೆಚ್‌ಎಂಪಿವಿ ಸೋಂಕಿತ ಪ್ರಕರಣ ಪತ್ತೆ; ಮಧ್ಯಾಹ್ನ ಆರೋಗ್ಯ ಇಲಾಖೆ ಸಭೆ - HMPV VIRUS

ಕರ್ನಾಟಕದಲ್ಲಿ ಎರಡು ಹೆಚ್‌ಎಂಪಿವಿ ಸೋಂಕಿತ ಪ್ರಕರಣಗಳು ಪತ್ತೆಯಾಗಿರುವುದಾಗಿ ICMR ತಿಳಿಸಿದೆ.

HMPV virus in bengaluru
ಸಾಂದರ್ಭಿಕ ಚಿತ್ರ (ETV Bharat)

By ETV Bharat Karnataka Team

Published : Jan 6, 2025, 10:59 AM IST

ಬೆಂಗಳೂರು:ಕರ್ನಾಟಕದಲ್ಲಿ ಎರಡು ಹೆಚ್‌ಎಂಪಿವಿ ಸೋಂಕಿತ ಪ್ರಕರಣಗಳು ಪತ್ತೆಯಾಗಿರುವುದಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ತಿಳಿಸಿದೆ.

ದೇಶಾದ್ಯಂತ ಉಸಿರಾಟದ ಕಾಯಿಲೆಗಳ ಮೇಲ್ವಿಚಾರಣೆಯನ್ನು ICMRನಲ್ಲಿ ನಿರಂತರವಾಗಿ ನಡೆಸಲಾಗುತ್ತಿದ್ದು, ಈ ಮೂಲಕ ಎರಡೂ ಪ್ರಕರಣಗಳನ್ನು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದೆ.

ಐಸಿಎಂಆರ್ ಮಾಹಿತಿ ವಿವರ:ಬೆಂಗಳೂರಿನಲ್ಲಿ ಪತ್ತೆಯಾದ ಮೊದಲ ಪ್ರಕರಣದಲ್ಲಿ, ಹೆಚ್‌ಎಂಪಿವಿ ಸೋಂಕಿನ ಹಿನ್ನೆಲೆಯಲ್ಲಿ ನಗರದ ಆಸ್ಪತ್ರೆಗೆ 3 ತಿಂಗಳ ಹೆಣ್ಣು ಶಿಶುವನ್ನು ದಾಖಲಿಸಲಾಗಿತ್ತು. ಮಗುವಿಗೆ ಬ್ರಾಂಕೋಪ್ನ್ಯುಮೋನಿಯಾ ಕಂಡುಬಂದಿತ್ತು. ಬಳಿಕ ಚೇತರಿಸಿಕೊಂಡಿದ್ದು ಡಿಸ್ಚಾರ್ಜ್ ಮಾಡಲಾಗಿದೆ.

ಎರಡನೇ ಪ್ರಕರಣದಲ್ಲಿ ಜನವರಿ 3ರಂದು 8 ತಿಂಗಳ ಗಂಡು ಶಿಶುವಿನಲ್ಲಿ ಹೆಚ್‌ಎಂಪಿವಿ ಪಾಸಿಟಿವ್​ ವರದಿಯಾಗಿತ್ತು. ಈ ಮಗುವೂ ಕೂಡ ಬ್ರಾಂಕೋಪ್ನ್ಯುಮೋನಿಯಾನಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿತ್ತು. ಸದ್ಯ ಮಗು ಚೇತರಿಸಿಕೊಳ್ಳುತ್ತಿದೆ. ಎರಡೂ ಶಿಶುಗಳೂ ಕೂಡ ಯಾವುದೇ ಅಂತಾರಾಷ್ಟ್ರೀಯ ಟ್ರಾವೆಲ್​ ಹಿಸ್ಟರಿಯನ್ನು ಹೊಂದಿಲ್ಲ ಎಂದು ಐಸಿಎಂಆರ್​ ಪ್ರಕಟಣೆ ತಿಳಿಸಿದೆ.

ಇಂದು ಮಧ್ಯಾಹ್ನ ಆರೋಗ್ಯ ಇಲಾಖೆ ಸಭೆ: ಈ ಬಗ್ಗೆ ಚರ್ಚೆ ನಡೆಸಲು ಇಂದು ಮಧ್ಯಾಹ್ನ 12.30ಕ್ಕೆ ರಾಜ್ಯ ಸರ್ಕಾರವು ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳ ಸಭೆ ಕರೆದಿದೆ.

ಏನಿದು HMPV ವೈರಸ್​? ಹೇಗೆ ಹರಡುತ್ತೆ?: ಹ್ಯೂಮನ್ ಮೆಟಾನ್ಯೂಮೋ ವೈರಸ್ (HMPV) ಎಂಬುದು ಉಸಿರಾಟಕ್ಕೆ ಸಂಬಂಧಿಸಿದ ವೈರಸ್. ಹೆಚ್ಚಿನ ಜನರಲ್ಲಿ ಕಡಿಮೆ ತೀವ್ರತೆಯ (ಶೀತ ತರಹದ ಲಕ್ಷಣ) ರೋಗಲಕ್ಷಣಗಳು ಕಂಡುಬರುತ್ತವೆ. ಅಲ್ಲದೆ ಮಕ್ಕಳು, ವೃದ್ಧರು ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಬ್ರಾಂಕೈಟಿಸ್ ಮತ್ತು ನ್ಯುಮೋನಿಯಾದಂತಹ ತೀವ್ರ ಲಕ್ಷಣಗಳು ಕಾಣಿಸುತ್ತವೆ.

ರೋಗ ಲಕ್ಷಣಗಳೇನು?:

  • ಅಮೆರಿಕದ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಷನ್ ತಿಳಿಸುವ ಪ್ರಕಾರ, HMPV ವೈರಸ್ ರೋಗಲಕ್ಷಣಗಳು ಚಳಿಗಾಲದಲ್ಲಿ ಸಾಮಾನ್ಯವಾದ ಇತರ ವೈರಲ್ ಸೋಂಕುಗಳಂತೆಯೇ ಇರುತ್ತವೆ.
  • ಜ್ವರ, ಕೆಮ್ಮು, ಮೂಗು ಕಟ್ಟುವಿಕೆ, ಉಸಿರಾಟದ ಸಮಸ್ಯೆಯಾಗುತ್ತದೆ.
  • ಸೋಂಕಿನ ಕ್ಲಿನಿಕಲ್ ರೋಗಲಕ್ಷಣಗಳು ಹೆಚ್ಚಾಗುತ್ತವೆ, ಬ್ರಾಂಕೈಟಿಸ್ ಅಥವಾ ನ್ಯುಮೋನಿಯಾದಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಈ ವೈರಸ್​ ಉಸಿರಾಟದ ಸೋಂಕುಗಳಿಗೂ ಕಾರಣವಾಗುವಂತಹ ಇತರ ವೈರಸ್‌ಗಳಂತೆ ಇದೆ.
  • ಸೋಂಕಿನ ತೀವ್ರತೆ 2ರಿಂದ 6 ದಿನಗಳವರೆಗೆ ಇರುತ್ತದೆ. ಸೋಂಕಿಗೆ ಒಳಗಾದವರಲ್ಲಿ ಮೂರರಿಂದ ಆರು ದಿನಗಳ ಬಳಿಕ ಈ ವೈರಸ್​ನ ರೋಗಲಕ್ಷಣಗಳು ಕಂಡುಬರುತ್ತವೆ.
  • ಅನಾರೋಗ್ಯದ ಸಮಯದಲ್ಲಿ ವೈರಸ್​ನ ಅದರ ತೀವ್ರತೆ ಅವಲಂಬಿಸಿ ಬದಲಾಗುವ ಸಾಧ್ಯತೆ ಇದೆ.

HMPV ವೈರಸ್​ ತಡೆಯುವುದು ಹೇಗೆ?:

  • ಹೊರಗಡೆ ಹೋಗಿ ಮನೆಗೆ ವಾಪಸ್​ ಬಂದಾಗ ಸೋಪು ಅಥವಾ ಸಾಬೂನಿನಿಂದ ಕೈ ತೊಳೆಯಿರಿ.
  • ನಿಮ್ಮ ಕೈಗಳಿಂದ ಆಗಾಗ ಕಣ್ಣು, ಮೂಗು, ಬಾಯಿಯನ್ನು ಮುಟ್ಟುವುದನ್ನು ತಪ್ಪಿಸಬೇಕು.
  • ಸೋಂಕಿಗೆ ಒಳಗಾದವರೊಂದಿಗೆ ಅಂತರ ಕಾಯ್ದುಕೊಳ್ಳುವುದು ಉತ್ತಮ. ನೀವು ವೈರಸ್‌ನ ಲಕ್ಷಣಗಳನ್ನು ಹೊಂದಿದ್ದರೆ, ಜನರ ಗುಂಪಿನಲ್ಲಿ ಬೆರೆಯಬೇಡಿ.
  • ಕೆಮ್ಮುವಾಗ ಹಾಗೂ ಸೀನುವಾಗ ಕೈ, ಬಾಯಿಯನ್ನು ಮುಚ್ಚಿಕೊಳ್ಳಿ.
  • ಈ ಸೋಂಕಿತರು ಬಳಸಿದ ಕಪ್‌, ತಟ್ಟೆ ಹಾಗೂ ಪಾತ್ರೆಗಳನ್ನು ಉಪಯೋಗಿಸಬೇಡಿ.
  • ಸೋಂಕಿತರು ಅನಾರೋಗ್ಯದ ವೇಳೆಯಲ್ಲಿ ಮನೆಯಲ್ಲೇ ಇರುವುದು ಒಳ್ಳೆಯದು.

ಇದನ್ನೂ ಓದಿ:ಚೀನಾದಲ್ಲಿ ವೇಗವಾಗಿ ಹರಡುತ್ತಿರುವ ಎಚ್​ಎಂಪಿವಿ ವೈರಸ್: ಈ ವೈರಸ್‌ನಿಂದ ರಕ್ಷಿಸಿಕೊಳ್ಳೋದು ಹೇಗೆ?

ABOUT THE AUTHOR

...view details