ಬೆಂಗಳೂರು:ನಗರದ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಗಣರಾಜ್ಯೋತ್ಸವ 2025ರ ಅಂಗವಾಗಿ ಆಯೋಜಿಸಿರುವ ಮಹರ್ಷಿ ವಾಲ್ಮೀಕಿ ಜೀವನಾಧಾರಿತ ಫಲಪುಷ್ಪ ಪ್ರದರ್ಶನವನ್ನು ಬೆಂಗಳೂರು ನಗರ ಮಾತ್ರವಲ್ಲದೇ ಸುತ್ತಮುತ್ತಲ ಜಿಲ್ಲೆಗಳ ಸಾವಿರಾರು ಮಂದಿ ಕಣ್ತುಂಬಿಕೊಂಡರು.
ಜನವರಿ 16 ರಿಂದ 217ನೇ ಫಲಪುಷ್ಪ ಪ್ರದರ್ಶನ ಆರಂಭವಾಗಿದೆ. ಶನಿವಾರ ಬೆಳಗ್ಗೆ 11 ಗಂಟೆಯಿಂದಲೂ ಹೆಚ್ಚಿನ ಪ್ರಮಾಣದಲ್ಲಿ ಜನ ಆಗಮಿಸಿ ಸಂಜೆ 6 ಗಂಟೆಯವರೆಗೂ ವೀಕ್ಷಣೆ ಮಾಡಿದರು.
ಶನಿವಾರ 62 ಸಾವಿರ ಜನ ವೀಕ್ಷಣೆ: ಶನಿವಾರ ಒಂದೇ ದಿನ 39 ಸಾವಿರ ಮಂದಿ ವಯಸ್ಕರು ಮತ್ತು 23 ಸಾವಿರ ಮಕ್ಕಳು ಸೇರಿ ಒಟ್ಟು 62 ಸಾವಿರಕ್ಕೂ ಅಧಿಕ ಮಂದಿ ಆಗಮಿಸಿದ್ದು 32 ಲಕ್ಷ ರೂ.ಗಳ ಶುಲ್ಕ ಸಂಗ್ರಹವಾಗಿದೆ. ಇನ್ನು ಇಂದು ಸರ್ಕಾರಿ ರಜೆಯಿದ್ದು, ನಿರೀಕ್ಷೆಗೂ ಮೀರಿ ಜನ ಆಗಮಿಸುವ ಸಾಧ್ಯತೆಯಿದೆ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜನ ದಟ್ಟಣೆಯಿಂದ ದ್ವಾರ ಮುಕ್ತ:ಈ ಹಿಂದೆ ನಡೆದ ಫಲಪುಷ್ಪ ಪ್ರದರ್ಶನಕ್ಕೆ ಆಫ್ಲೈನ್ನಲ್ಲಿ ಮಾತ್ರ ಟಿಕೆಟ್ ವಿತರಣೆ ಮಾಡಲಾಗುತ್ತಿತ್ತು. ಆದರೆ, ಪ್ರಸಕ್ತ ವರ್ಷದಿಂದ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ಆಗಮಿಸುವವರಿಗೆ ಆನ್ಲೈನ್ ಹಾಗೂ ಕ್ಯೂಆರ್ ಕೋಡ್ ಮೂಲಕ ಟಿಕೆಟ್ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಇದರಿಂದಾಗಿ ಜನ ಆನ್ಲೈನ್ ಮೂಲಕ ಟಿಕೆಟ್ ಖರೀದಿ ಮಾಡುತ್ತಿದ್ದು, ಯಾವುದೇ ದ್ವಾರದಲ್ಲಿಯೂ ಜನ ದಟ್ಟಣೆ ಉಂಟಾಗಿಲ್ಲ ಎಂದು ಅಧಿಕಾರಿಗಳು ವಿವರಿಸಿದರು.