ಬೆಂಗಳೂರು: ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಹತ್ಯೆಗೈದ ಬಿಹಾರದ ಯುವಕನನ್ನು ರಾಮಮೂರ್ತಿ ನಗರ ಠಾಣೆ ಪೊಲೀಸರು ತಡರಾತ್ರಿ ಬಂಧಿಸಿದ್ದಾರೆ. ಹೊಯ್ಸಳ ನಗರದಲ್ಲಿ ಸೋಮವಾರ ಸಂಜೆ ಘಟನೆ ನಡೆದಿದೆ. ದುಷ್ಕೃತ್ಯವೆಸಗಿದ ಅಭಿಷೇಕ್ ಕುಮಾರ್ (25) ಎಂಬಾತನನ್ನು ಸ್ಥಳೀಯರೇ ಹಿಡಿದು, ಥಳಿಸಿ ಪೊಲೀಸರಿಗೊಪ್ಪಿಸಿದ್ದರು.
ಕೊಲೆಯಾದ ಬಾಲಕಿಯ ಪೋಷಕರು ನೇಪಾಳ ಮೂಲದವರಾಗಿದ್ದು, ಬೆಂಗಳೂರಲ್ಲಿ ಕಟ್ಟಡ ಕಾಮಗಾರಿ ಕೆಲಸ ಮಾಡಿಕೊಂಡಿದ್ದರು. ಆರೋಪಿಯೂ ಕಟ್ಟಡ ಕಾಮಗಾರಿ ಕೆಲಸ ಮಾಡಿಕೊಂಡಿದ್ದ. ನಿನ್ನೆ ಸಂಜೆ 7:30ರ ಸುಮಾರಿಗೆ ಪೋಷಕರು ಇಲ್ಲದ ಸಂದರ್ಭದಲ್ಲಿ ಮನೆಗೆ ಬಂದಿದ್ದ ಆರೋಪಿ, ಬಾಲಕಿಯನ್ನು ಪುಸಲಾಯಿಸಿ ನಿರ್ಮಾಣ ಹಂತದ ಕಟ್ಟಡಕ್ಕೆ ಕರೆದೊಯ್ದಿದ್ದಾನೆ. ಬಳಿಕ ಅತ್ಯಾಚಾರ ಎಸಗಿದ್ದು, ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.