ಮೈಸೂರು :ಲೋಕಸಭಾ ಚುನಾವಣೆ ಹಿನ್ನೆಲೆ ಕೇಂದ್ರ ಚುನಾವಣಾ ಆಯೋಗದ ಬೇಡಿಕೆಯ ಮೇರೆಗೆ ಮೈಸೂರಿನ ಪೇಂಟ್ ಅಂಡ್ ವಾರ್ನಿಷ್ ಲಿಮಿಟೆಡ್ ಅಂದರೆ ಮೈಲ್ಯಾಕ್ ನಿಂದ 26.55 ಲಕ್ಷ ಅಳಿಸಲಾಗದ 10 ಎಂಎಲ್ ಶಾಯಿಯ ಬಾಟಲ್ ಗಳನ್ನು ಪೂರೈಸಲು ಕಾರ್ಯಪ್ರವೃತ್ತವಾಗಿದೆ. ಈಗಾಗಲೇ ಕೆಲವು ರಾಜ್ಯಗಳಿಗೆ ಅಳಿಸಲಾಗದ ಶಾಯಿಯನ್ನು ಪೂರೈಸಲಾಗಿದೆ ಎಂದು ಮೈಲ್ಯಾಕ್ನ ವ್ಯವಸ್ಥಾಪಕ ನಿರ್ದೇಶಕ ಕೆ. ಮಹಮ್ಮದ್ ಇರ್ಫಾನ್ ಈಟಿವಿ ಭಾರತ್ ಗೆ ಮಾಹಿತಿ ನೀಡಿದರು.
ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇದ್ದು, ಮತದಾನ ಮಾಡಿದ ಗುರುತಿಗಾಗಿ ಮತದಾರರ ಕೈಬೆರಳಿಗೆ ಅಳಿಸಲಾಗದ ಶಾಯಿಯ ಮಾರ್ಕ್ ಅನ್ನು ಹಾಕಲಾಗುತ್ತದೆ. ಇಂತಹ ಶಾಯಿಯನ್ನು ಮೈಸೂರು ಪೇಂಟ್ ಅಂಡ್ ವಾರ್ನಿಷ್ ಲಿಮಿಟೆಡ್ ಪೂರೈಸುತ್ತಿದೆ. ಮಾರ್ಚ್ 15 ರೊಳಗೆ ಎಲ್ಲಾ ರಾಜ್ಯಗಳಿಗೂ 10 ಎಂಎಲ್ ನ ಅಳಿಸಲಾಗದ ಶಾಯಿಯನ್ನು ಪೂರೈಕೆ ಮಾಡುವ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜೊತೆಗೆ ಕೇರಳ, ಆಂಧ್ರ ಪ್ರದೇಶ, ತಮಿಳುನಾಡು, ತೆಲಂಗಾಣ ಇವುಗಳನ್ನು ಕೊನೆಯ ಹಂತದಲ್ಲಿ ಮಾಡಿಕೊಳ್ಳುತ್ತೇವೆ. ಒಂದು 10 ಎಂಎಲ್ ಬಾಟಲಿನಿಂದ 700 ಮಂದಿ ಮತದಾರರ ಬೆರಳಿಗೆ ಶಾಯಿಯನ್ನು ಹಾಕಬಹುದಾಗಿದ್ದು, ಈ ಬಾರಿ 26.55 ಲಕ್ಷ ಅಳಿಸಲಾಗದ ಬಾಟಲ್ಗಳಿಂದ 55 ಕೋಟಿ ರೂ. ಆದಾಯ ಬಂದಿದೆ ಎಂದು ಮಹಮ್ಮದ್ ಇರ್ಫಾನ್ ತಿಳಿಸಿದರು.
ಮೈಲ್ಯಾಕ್ ಇತಿಹಾಸ :ಮೈಲ್ಯಾಕ್ ಅಂದರೆ ಮೈಸೂರು ಪೇಂಟ್ ಅಂಡ್ ವಾರ್ನಿಷ್ ಲಿಮಿಟೆಡ್. ಇದು ಕರ್ನಾಟಕ ಸರ್ಕಾರದ ಅಧೀನ ಉದ್ಯಮವಾಗಿದೆ. ಈಗ 75 ವರ್ಷಗಳ ಸಂಭ್ರಮಾಚರಣೆಯನ್ನು ಆಚರಿಸಿಕೊಂಡಿದೆ. 1937 ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರಿನ ಬನ್ನಿ ಮಂಟಪದಲ್ಲಿ ಸ್ಥಾಪಿಸಿದರು. 1947 ರ ನಂತರದಲ್ಲಿ ಮೈಲ್ಯಾಕ್ ಕರ್ನಾಟಕ ಸರ್ಕಾರದ ಸ್ವಾಧೀನಕ್ಕೆ ಬಂದು ಮೈಸೂರು ಲ್ಯಾಕ್ ಅಂಡ್ ಪೇಂಟ್ ಲಿಮಿಟೆಡ್ ಎಂದು ಮರುನಾಮಕರಣ ಮಾಡಲಾಯಿತು. ಬಳಿಕ 1989ರಲ್ಲಿ ವಾರ್ನಿಷ್ ಉತ್ಪಾದನೆ ಮಾಡಲು ಆರಂಭಿಸಿದ್ದರು. ಕಳೆದ 75 ವರ್ಷಗಳಿಂದಲೂ ಲಾಭದಲ್ಲೇ ನಡೆಯುತ್ತಿರುವ ಸರ್ಕಾರದ ಉದ್ಯಮ ಎಂಬುದು ಹೆಮ್ಮೆಯ ವಿಚಾರವಾಗಿದೆ.