ದಾವಣಗೆರೆ: ರಾಜ್ಯಾದ್ಯಂತ ಸೋಮವಾರದಿಂದ (ಮಾರ್ಚ್ 25ರಂದು) 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭವಾಗಿದೆ. ಏಪ್ರಿಲ್ 6ರವರೆಗೆ ಪರೀಕ್ಷೆಗಳು ನಡೆಯಲಿವೆ. ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಲು ವಿದ್ಯಾರ್ಥಿಗಳು ಶ್ರಮಪಡುತ್ತಿದ್ದಾರೆ. ಈ ನಡುವೆ ಇಲ್ಲೋರ್ವ 'ಸೀನಿಯರ್ ವಿದ್ಯಾರ್ಥಿ' ತಮ್ಮ 52ನೇ ವಯಸ್ಸಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗಿ ವಿಶೇಷವಾಗಿ ಗಮನ ಸೆಳೆದಿದ್ದಾರೆ.
ಚನ್ನಗಿರಿ ತಾಲೂಕಿನ ಸಂತೇಬೆನ್ನೂರಿನ ಸಿದ್ದಲಿಂಗಪ್ಪ ತಮ್ಮ 52ನೇ ವಯಸ್ಸಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದರು. ತಾಲೂಕಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಕಳೆದ ಎರಡು ದಿನಗಳ ಹಿಂದೆ ಪರೀಕ್ಷೆ ಆರಂಭವಾಗಿದೆ. ಇವರು ವಿಶೇಷಚೇತನರಾಗಿದ್ದು ತಮ್ಮ ಮಕ್ಕಳ ವಯಸ್ಸಿನ ವಿದ್ಯಾರ್ಥಿಗಳೊಂದಿಗೆ ಕುಳಿತು ಪರೀಕ್ಷೆ ಬರೆದಿದ್ದು ವಿಶೇಷವಾಗಿತ್ತು.
ಈ ವಯಸ್ಸಲ್ಲಿ ಪರೀಕ್ಷೆ ಬರೆದಿದ್ದೇಕೆ ಗೊತ್ತಾ?: ಸಿದ್ದಲಿಂಗಪ್ಪ ಪರೀಕ್ಷಾ ಕೇಂದ್ರಕ್ಕೆ ಆಗಮಿಸುತ್ತಿದ್ದಂತೆ ಕೊಠಡಿ ಮೇಲ್ವಿಚಾರಕರು ಸೇರಿದಂತೆ ಮಕ್ಕಳು ಕೆಲಕಾಲ ಅಚ್ಚರಿಗೊಂಡರು. ವಿಶೇಷ ಮೀಸಲಾತಿಯಡಿಯಲ್ಲಿ ಪಡಿತರ ವಿತರಣಾ ಕೇಂದ್ರ ತೆರೆಯಲು ಸರ್ಕಾರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದನ್ನು ಕಡ್ಡಾಯಗೊಳಿಸಿದೆ. ಹೀಗಾಗಿ 35 ವರ್ಷಗಳ ನಂತರ ಸಿದ್ದಲಿಂಗಪ್ಪನವರು ಪಡಿತರ ಅಂಗಡಿ ತೆರೆಯಲು ಪುನಃ ಪರೀಕ್ಷೆ ಬರೆಯಲು ನಿರ್ಧರಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಸಿದ್ದಲಿಂಗಪ್ಪ, "ಮೊದಲ ಪರೀಕ್ಷೆ ಕನ್ನಡ ವಿಷಯ ಇತ್ತು. ಅದನ್ನು ಉತ್ತಮವಾಗಿ ಬರೆದಿದ್ದೇನೆ. ಪೂರ್ವತಯಾರಿ ವೇಳೆ ಕೆಲವು ಶಿಕ್ಷಕರಿಂದ ಮಾರ್ಗದರ್ಶನ ಪಡೆದಿದ್ದೇನೆ. ವಿದ್ಯಾರ್ಥಿಗಳಿಂದಲೂ ಬೇಕಿರುವ ನೋಟ್ಸ್ ಸಂಗ್ರಹಿಸಿದ್ದೆ. ಚೆನ್ನಾಗಿ ತಯಾರಿ ನಡೆಸಿ ಪರೀಕ್ಷೆಗೆ ಹಾಜರಾಗಿದ್ದೇನೆ" ಎಂದು ತಿಳಿಸಿದರು.
ಇದೇ ವೇಳೆ, ಇಂದಿನ ಮಕ್ಕಳು ಶಿಕ್ಷಣ ಪಡೆಯುವಲ್ಲಿ ನಿರ್ಲಕ್ಷ್ಯ ತೋರಬಾರದು ಎಂದು ಕಿವಿಮಾತು ಹೇಳಿದರು.
ಇದನ್ನೂ ಓದಿ:ಯಾದಗಿರಿ: ಮಗನೊಂದಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ತಾಯಿ - SSLC Exam