ಪ್ರವಾಹದ ಅಬ್ಬರಕ್ಕೆ ಬೆಳಗಾವಿ ಜಿಲ್ಲೆಯ 46 ಗ್ರಾಮಗಳು ಜಲಾವೃತ (ETV Bharat) ಬೆಳಗಾವಿ:ಪಶ್ಚಿಮ ಘಟ್ಟದಲ್ಲಿ ಧಾರಾಕಾರ ಮಳೆ ಆಗುತ್ತಿದ್ದು, ಸಪ್ತ ನದಿಗಳು ಹರಿಯುವ ಬೆಳಗಾವಿ ಜಿಲ್ಲೆ ಪ್ರವಾಹದಿಂದ ನಲುಗಿ ಹೋಗಿದೆ. ಹತ್ತಾರು ಗ್ರಾಮಗಳು, ಸಾವಿರಾರು ಎಕರೆ ಜಮೀನು ಜಲಾವೃತವಾಗಿದ್ದು, ಸಾವಿರಾರು ಸಂತ್ರಸ್ತರ ಬದುಕು ಬೀದಿಗೆ ಬಿದ್ದಿದೆ. ಜಿಲ್ಲೆಯಲ್ಲಿ ಕೃಷ್ಣಾ, ಘಟಪ್ರಭಾ, ಮಲಪ್ರಭಾ, ದೂಧಗಂಗಾ, ವೇದಗಂಗಾ, ಮಾರ್ಕಂಡೇಯ, ಹಿರಣ್ಯಕೇಶಿ ನದಿಗಳು ಉಕ್ಕಿ ಹರಿದು ಜಲಪ್ರಳಯ ಸೃಷ್ಟಿಸಿದೆ.
ಜಿಲ್ಲೆಯಲ್ಲಿ ಈವರೆಗೆ 46 ಗ್ರಾಮಗಳು ಜಲಾವೃತವಾಗಿದ್ದು, 3,684 ಕುಟುಂಬಗಳ 10,304 ಜನ ಪ್ರವಾಹ ಸಂತ್ರಸ್ತರಾಗಿದ್ದಾರೆ. ಹುಟ್ಟಿದ ಮನೆ, ಕಷ್ಟ ಪಟ್ಟು ಬೆಳೆ ಬೆಳೆದ ಜಮೀನು, ಮನೆ ಸಾಮಗ್ರಿಗಳನ್ನು ಇದ್ದಲ್ಲಿಯೇ ಬಿಟ್ಟು, ಉಟ್ಟ ಬಟ್ಟೆಯಲ್ಲೇ ಜನ, ಜಾನುವಾರು ಸೇರಿದಂತೆ ಇಡೀ ಕುಟುಂಬ ಸಮೇತ ಬಂದು ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ.
ಪ್ರವಾಹ ಪೀಡಿತ ಪ್ರದೇಶಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ (ETV Bharat) ಜಿಲ್ಲಾದ್ಯಂತ 54 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, 10,304 ಜನರು ಇಲ್ಲಿಯೇ ವಾಸ್ತವ್ಯ ಹೂಡಿದ್ದಾರೆ. ಇಡೀ ಬದುಕು ನೀರಲ್ಲಿ ಕೊಚ್ಚಿ ಹೋಗಿದ್ದರಿಂದ ಮುಂದೇನು ಎಂಬ ಚಿಂತೆಯಲ್ಲಿ ಮುಳುಗಿ ಹೋಗಿದ್ದಾರೆ. ಚಿಕ್ಕ ಮಕ್ಕಳು, ವೃದ್ಧರು, ಗರ್ಭಿಣಿಯರು, ಬಾಣಂತಿಯರು ಸೇರಿ ನಾಯಿ, ಬೆಕ್ಕುಗಳಿಗೂ ಕೂಡ ಈಗ ಕಾಳಜಿ ಕೇಂದ್ರಗಳೇ ಆಶ್ರಯ ತಾಣವಾಗಿವೆ.
ಜಿಲ್ಲೆಯಲ್ಲಿ ಪ್ರವಾಹದಿಂದ ಈವರೆಗೆ 12 ಮನೆಗಳು ಸಂಪೂರ್ಣವಾಗಿ ನೆಲಸಮವಾಗಿದ್ದರೆ, 535 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ವರುಣಾರ್ಭಟಕ್ಕೆ 5 ಜನರು ಜೀವ ಚೆಲ್ಲಿದ್ದು, 40 ಸೇತುವೆಗಳು ಮುಳುಗಡೆಯಾಗಿ ಸಂಪರ್ಕ ಕಡಿತವಾಗಿ ಜನ ಪರದಾಡುವಂತಾಗಿದೆ. ಪಶ್ಚಿಮ ಘಟ್ಟದಲ್ಲಿ ಇನ್ನು ಮಳೆಯ ಅಬ್ಬರ ಕಡಿಮೆ ಆಗಿಲ್ಲ. ಅಲ್ಲದೇ ಬೆಳಗಾವಿ ನಗರ ಸೇರಿ ವಿವಿಧ ತಾಲೂಕುಗಳಲ್ಲಿ ನಿರಂತರವಾಗಿ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಮತ್ತಷ್ಟು ಅವಾಂತರ ಉಂಟಾಗುವ ಸಾಧ್ಯತೆಯಿದೆ.
ಜಲಾಶಯಗಳ ನೀರಿನ ಮಟ್ಟ:ಘಟಪ್ರಭಾ ನದಿಗೆ ಅಡ್ಡಲಾಗಿ ಹುಕ್ಕೇರಿ ತಾಲೂಕಿನ ಹಿಡಕಲ್ ಬಳಿ ನಿರ್ಮಿಸಿರುವ ರಾಜಾಲಖಮಗೌಡ ಜಲಾಶಯ ಒಟ್ಟು 51 ಟಿಎಂಸಿ ಸಾಮರ್ಥ್ಯ ಹೊಂದಿದ್ದು, ಇಂದಿನ ನೀರಿನ ಮಟ್ಟ- 48.226 ಟಿಎಂಸಿ, 2171.416 ಅಡಿ ನೀರು ಸಂಗ್ರಹವಾಗಿದೆ. ಒಳಹರಿವು- 39,006 ಕ್ಯೂಸೆಕ್, ಹೊರ ಹರಿವು- 26,608 ಕ್ಯೂಸೆಕ್ ಇದೆ. ಒಟ್ಟು ಶೇ. 92.46 ರಷ್ಟು ಜಲಾಶಯ ಭರ್ತಿಯಾಗಿದೆ.
ಇನ್ನು ಮಲಪ್ರಭಾ ನದಿಗೆ ಅಡ್ಡಲಾಗಿ ಸವದತ್ತಿ ತಾಲ್ಲೂಕಿನ ಮುನವಳ್ಳಿ ಬಳಿ ನಿರ್ಮಿಸಿರುವ ರೇಣುಕಾ ಸಾಗರ (ನವೀಲು ತೀರ್ಥ) ಜಲಾಶಯದ ಗರಿಷ್ಠ ಮಟ್ಟ- 2079.50 ಅಡಿ, ಒಟ್ಟು ಸಾಮರ್ಥ್ಯ- 37.731 ಟಿಎಂಸಿ, ಇಂದಿನ ನೀರಿನ ಮಟ್ಟ- 32.083 ಟಿಎಂಸಿ, 2075.30 ಅಡಿ ನೀರು ಸಂಗ್ರಹವಾಗಿದೆ. ಒಳಹರಿವು- 21,222 ಕ್ಯೂಸೆಕ್ ಇದ್ದರೆ, ಹೊರ ಹರಿವು- 5,894 ಸಾವಿರ ಕ್ಯೂಸೆಕ್ ನಷ್ಟಿದ್ದು, ಒಟ್ಟು ಶೇ. 81.03ರಷ್ಟು ಜಲಾಶಯ ಭರ್ತಿಯಾಗಿದೆ. ಅದೇ ರೀತಿ ಹುಕ್ಕೇರಿ ತಾಲ್ಲೂಕಿನ ಶಿರೂರ ಬಳಿ ಮಾರ್ಕಂಡೇಯ ನದಿಗೆ ಅಡ್ಡಲಾಗಿ ಕಟ್ಟಿರುವ ಶಿರೂರ ಜಲಾಶಯದ ಒಟ್ಟು ಸಾಮರ್ಥ್ಯ- 3.69 ಟಿಎಂಸಿ, ಇಂದಿನ ಮಟ್ಟ- 3.02 ಟಿಎಂಸಿ, ಒಟ್ಟು ಶೇ.86.60ರಷ್ಟು ಜಲಾಶಯ ಭರ್ತಿಯಾಗಿದೆ.
ಮಳೆಯ ವಿವರ:ಜುಲೈ 30 ರವರೆಗೆ 6.3 ಮಿ.ಮೀ. ವಾಡಿಕೆ ಮಳೆ ಆಗಬೇಕಿತ್ತು. ಆದರ, 110 ಮಿ.ಮೀ. ಮಳೆ ಸುರಿದಿದೆ. ಶೇ.110ರಷ್ಟು ಮಳೆ ಹೆಚ್ಚಳವಾಗಿದೆ. ಇನ್ನು ಜುಲೈ ತಿಂಗಳಲ್ಲಿ 186 ಮಿ.ಮೀ. ವಾಡಿಕೆ ಮಳೆ ಆಗಬೇಕಿತ್ತು. ಆದರೆ, 345 ಮಿ.ಮೀ. ಮಳೆ ಆಗುವ ಮೂಲಕ ಶೇ. 86ರಷ್ಟು ವಾಡಿಕೆಗಿಂತ ಮಳೆ ಹೆಚ್ಚಾಗಿದೆ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 332 ಮಿ.ಮೀ. ವಾಡಿಕೆ ಮಳೆ ಸುರಿಯಬೇಕಿತ್ತು. ಆದರೆ, 533 ಮಿ.ಮೀ. ಮಳೆ ಆಗಿದ್ದು, ಶೇ. 60ರಷ್ಟು ವಾಡಿಕೆಗಿಂತ ಮಳೆ ಹೆಚ್ಚಾಗಿದೆ. ಮಳೆಯಿಂದ ಪ್ರತಿವರ್ಷ ಬದುಕು ಕಳೆದುಕೊಳ್ಳುವ ಸಾವಿರಾರು ಕುಟುಂಬಗಳಿಗೆ ಶಾಶ್ವರ ಪರಿಹಾರ ಕಲ್ಪಿಸಬೇಕು ಎಂದು ಸಂತ್ರಸ್ತರು ಆಗ್ರಹಿಸಿದ್ದಾರೆ.
ಕೃಷ್ಣಾ ನದಿ ಅಬ್ಬರಕ್ಕೆ ವ್ಯಕ್ತಿ ಸಾವು:ಮಹಾರಾಷ್ಟ್ರ ಜಲಾಯನ ಪ್ರದೇಶದಲ್ಲಿ ಸುರಿದ ಮಳೆಗೆ ಚಿಕ್ಕೋಡಿಯ ಭಾಗದಲ್ಲಿರುವ ಕೃಷ್ಣಾ ನದಿಯು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ. ನದಿ ಸೆಳೆತಕ್ಕೆ ಸಿಲುಕಿ ಓರ್ವ ರೈತ ನೀರು ಪಾಲಾಗಿರುವ ಘಟನೆ ಸಂಭವಿಸಿದೆ. ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿ ಪಟ್ಟಣದ ಸಂತೋಷ ಸಿದ್ದಪ್ಪ ಮೇತ್ರಿ (41) ಎಂಬುವರು ಕೃಷ್ಣಾ ನದಿಯಲ್ಲಿ ಕೊಚ್ಚಿಹೊಗಿದ್ದ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.
ಜುಲೈ 29 ರಂದು ಕೃಷ್ಣಾ ನದಿಯಲ್ಲಿ ನೀರು ಹೆಚ್ಚಾದ ಕಾರಣ ಕುಟುಂಬಸ್ಥರು ಜಾನುವಾರು ಜೊತೆಗೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಂಡಿದ್ದಾರೆ. ಆದರೆ, ಸಂಜೆ ಹೊತ್ತಿಗೆ ಮನೆಯಲ್ಲಿ ಉಳಿದ ಮೇವು ತರುವುದಕ್ಕೆ ಮರಳಿ ನಿವಾಸಕ್ಕೆ ಹೋದ ಸಮಯದಲ್ಲಿ ನೀರಿನ ಮಟ್ಟ ಏರಿಕೆಯಾಗಿತ್ತು. ಈ ವೇಳೆಯಲ್ಲಿ ಸಂತೋಷ ಸಿದ್ದಪ್ಪ ಮೇತ್ರಿ ನೀರಿನ ಸೆಳೆತಕ್ಕೆ ಸಿಲುಕಿ ನದಿಯಲ್ಲಿ ನಾಪತ್ತೆಯಾಗಿದ್ದರು. ಇಂದು ಬೆಳಿಗ್ಗೆ ಕುಡಚಿ ಪಟ್ಟಣದ ಕೃಷ್ಣಾ ನದಿ ಬಳಿ ಸಂತೋಷ ಮೇತ್ರಿ ಶವ ಪತ್ತೆಯಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿದರು. ಈ ಕುರಿತು ಕುಡಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಕಬಿನಿ-ಕೆಆರ್ಎಸ್ನಿಂದ ನದಿಗೆ ನೀರು ಬಿಡುಗಡೆ; ನಂಜುಂಡೇಶ್ವರನಿಗೆ ಮತ್ತೆ ಜಲದಿಗ್ಬಂಧನ - KRS AND KABINI WATER RELEASED