ಬೆಳಗಾವಿ :ಸಾಮಾನ್ಯವಾಗಿ ಲೋಕಸಭೆ, ವಿಧಾನಸಭೆ ಚುನಾವಣೆಗೆ ಅಬ್ಬಬ್ಬಾ ಎಂದರೆ 50ಕ್ಕೂ ಅಧಿಕ ಅಭ್ಯರ್ಥಿಗಳು ಸ್ಪರ್ಧಿಸಿರೋದನ್ನು ಎಲ್ಲರೂ ಕೇಳಿರುತ್ತಿರಿ. ಆದರೆ, ಈ ಕ್ಷೇತ್ರದಲ್ಲಿ ಒಮ್ಮೆ 301, ಮತ್ತೊಮ್ಮೆ ಬರೊಬ್ಬರಿ 456 ಅಭ್ಯರ್ಥಿಗಳು ಕಣಕ್ಕೆ ಇಳಿಯುವ ಮೂಲಕ ಇತಿಹಾಸ ನಿರ್ಮಿಸಿದ್ದರು.
ಹೌದು, ದೇಶದ ಗಮನ ಸೆಳೆದ ಬೆಳಗಾವಿಯ ಎರಡು ಮಹತ್ವದ ಚುನಾವಣೆಗಳು ಮತದಾರರಿಗೆ ಗುರುತಿನ ಚೀಟಿ, ಠೇವಣಿ ಹಣ ಹೆಚ್ಚಳಕ್ಕೆ ಕಾರಣವಾಗಿದ್ದವು. 1985, 1996ರ ಚುನಾವಣೆ ನಡೆಸೋದೆ ಆಯೋಗಕ್ಕೆ ದೊಡ್ಡ ಸವಾಲು ಆಗಿತ್ತು. ಆದರೂ ಈ ಸವಾಲನ್ನು ಆಯೋಗ ಯಶಸ್ವಿಯಾಗಿ ನೆರವೇರಿಸುವ ಮೂಲಕ ಇತಿಹಾಸ ಸೃಷ್ಟಿಸಿತ್ತು.
ಬೆಳಗಾವಿ ವಿಧಾನಸಭೆ ಚುನಾವಣೆಗಳಲ್ಲಿ ಎಂಇಎಸ್ ಗೆಲುವಿನ ಬಗ್ಗೆ ಅಪಸ್ವರ ಮೊದಲಿನಿಂದಲೂ ಇತ್ತು. ಹಾಗಾಗಿ, ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸರ್ಕಾರಕ್ಕೆ ಕನ್ನಡ ಹೋರಾಟಗಾರರು ಹಲವು ಬಾರಿ ಮನವಿ ಮಾಡುತ್ತಲೇ ಬಂದಿದ್ದರು. ಇದಕ್ಕೆ ಯಾವುದೇ ಪ್ರತಿಕ್ರಿಯೆ ಸಿಗದ ಹಿನ್ನೆಲೆ ವಿಭಿನ್ನ ಹೋರಾಟಕ್ಕೆ ಯೋಜನೆ ರೂಪಿಸಿದ ಹೋರಾಟಗಾರರು 1985ರಲ್ಲಿ ಬೆಳಗಾವಿ ವಿಧಾನಸಸಭೆ ಚುನಾವಣೆಯಲ್ಲಿ 301 ಜನ ಅಭ್ಯರ್ಥಿಗಳು ಸ್ಪರ್ಧಿಸುವಂತೆ ಮಾಡಿದ್ದರು. ಆಗ ಕನ್ನಡ ಪರ ಹೋರಾಟಗಾರರು, ಅವರ ಕುಟುಂಬಸ್ಥರು, ಪತ್ರಿಕೆಗಳ ಸಂಪಾದಕರು, ಪತ್ರಕರ್ತರು ಸೇರಿ ಮನೆ ಮಂದಿಯಲ್ಲಾ ಚುನಾವಣೆ ಕಣಕ್ಕೆ ಇಳಿದಿದ್ದರು. ಹಾಗಾಗಿ, ಚಿಹ್ನೆ ಹಂಚಿಕೆ, ಮತಪತ್ರ ಮುದ್ರಣವೇ ಆಯೋಗಕ್ಕೆ ಸವಾಲು ಆಗಿತ್ತು. ಬೆಳಗಾವಿ ವಿಧಾನಸಭೆ ಚುನಾವಣೆ ಆಗ ಇಡೀ ದೇಶದ ಗಮನ ಸೆಳೆದಿತ್ತು. ಎರಡು ತಿಂಗಳ ಬಳಿಕ ಚುನಾವಣೆ ನಡೆದು ಕೊನೆಗೆ ಎಂಇಎಸ್ ಬೆಂಬಲಿತ ಅಭ್ಯರ್ಥಿ ಆರ್.ಎಸ್. ಮಾನೆ ಗೆದ್ದು ದಾಖಲೆ ನಿರ್ಮಿಸಿದ್ದರು.
1985ರಲ್ಲಿ ಕನ್ನಡಿಗರು ಮಾಡಿದ್ದ ಈ ವಿಭಿನ್ನ ಪ್ರಯೋಗವನ್ನು 1996ರಲ್ಲಿ ಎಂಇಎಸ್ ಕಾರ್ಯರೂಪಕ್ಕೆ ತಂದಿತ್ತು. ಈ ಚುನಾವಣೆಯಲ್ಲಿ ಒಟ್ಟು 456 ಜನ ಕಣಕ್ಕೆ ಇಳಿದಿದ್ದರು. ಈ ಚುನಾವಣೆಯೂ ಆಯೋಗಕ್ಕೆ ದೊಡ್ಡ ಮಟ್ಟದ ತಲೆನೋವು ಆಗಿತ್ತು. ಮತಪತ್ರ ಮುದ್ರಣ ಹಾಗೂ ಚುನಾವಣೆ ನಡೆಸಲು ಆಯೋಗಕ್ಕೆ ಸವಾಲಾಗಿತ್ತು. ಎರಡು ತಿಂಗಳ ಕಾಲ ಚುನಾವಣೆಯನ್ನು ಮುಂದೂಡಿಕೆ ಮಾಡಲಾಗಿತ್ತು. ಜನತಾ ದಳದಿಂದ ಶಿವಾನಂದ ಕೌಜಲಗಿ, ಬಿಜೆಪಿಯಿಂದ ಬಾಬಾಗೌಡ ಪಾಟೀಲ್, ಕಾಂಗ್ರೆಸ್ ನಿಂದ ಪ್ರಭಾಕರ ಕೋರೆ ಕಣಕ್ಕೆ ಇಳಿದಿದ್ದರು. ಬಳಿಕ ನಡೆದ ಚುನಾವಣೆಯಲ್ಲಿ ಜನತಾ ದಳದ ಶಿವಾನಂದ ಕೌಜಲಗಿ ಗೆದ್ದಿದ್ದರು.