ಕಾರವಾರ :ಸಮುದ್ರದಲ್ಲಿ ಈಜುತ್ತಿದ್ದ ವೇಳೆ ಅಲೆಗಳಿಗೆ ಸಿಲುಕಿ ಕೊಚ್ಚಿ ಹೋಗುತ್ತಿದ್ದ ಮೂವರು ಪ್ರವಾಸಿ ಯುವತಿಯರನ್ನು ಕರ್ತವ್ಯನಿರತ ಲೈಫ್‌ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದ ಘಟನೆ ಹೊನ್ನಾವರ ತಾಲೂಕಿನ ಕಾಸರಕೋಡದ ಇಕೋ ಬೀಚ್‌ನಲ್ಲಿ ನಡೆದಿದೆ.
ರಕ್ಷಣೆಗೊಳಗಾದ ಪ್ರವಾಸಿಗರನ್ನು ಸ್ವಾತಿ (24), ಚೇತಾಲಿ (21) ಹಾಗೂ ಸೃಷ್ಟಿ ಎಂದು ಗುರುತಿಸಲಾಗಿದೆ. ಇವರು ಹುಬ್ಬಳ್ಳಿ ಮೂಲದವರೆಂದು ತಿಳಿದುಬಂದಿದೆ. ಐದು ಮಂದಿಯ ತಂಡ ಹುಬ್ಬಳ್ಳಿಯಿಂದ ಹೊನ್ನಾವರ ಪ್ರವಾಸಕ್ಕೆಂದು ಆಗಮಿಸಿದ್ದು, ಈಜಾಡಲು ಸಮುದ್ರಕ್ಕೆ ಇಳಿದಿದ್ದರು. ಈ ವೇಳೆ ಅಲೆಗಳ ಹೊಡೆತಕ್ಕೆ ಸಿಲುಕಿ ಮುಂದೆ ಹೋಗಿದ್ದು, ರಕ್ಷಣೆಗಾಗಿ ಕೂಗಿಕೊಂಡಿದ್ದರು.
ಕೂಡಲೇ ಮುಳುಗುತ್ತಿದ್ದವರನ್ನು ಗಮನಿಸಿದ ಜೀವರಕ್ಷಕ ಸಿಬ್ಬಂದಿ ಶಶಾಂಕ ಅಂಬಿಗ, ಮಹೇಶ ಹರಿಕಂತ್ರ, ಯೋಗೇಶ ಅಂಬಿಗ ಸಮುದ್ರಕ್ಕಿಳಿದು ಮೂವರೂ ಪ್ರವಾಸಿಗರನ್ನು ಸುರಕ್ಷಿತವಾಗಿ ದಡಕ್ಕೆ ಕರೆತಂದಿದ್ದಾರೆ. ಅದೃಷ್ಟವಶಾತ್ ಮೂವರೂ ಪ್ರಾಣಾಪಾಯದಿಂದ ಪಾರಾಗಿದ್ದು, ಲೈಫ್‌ಗಾರ್ಡ್ ಸಿಬ್ಬಂದಿಗೆ ಧನ್ಯವಾದ ತಿಳಿಸಿದ್ದಾರೆ.
ನ್ಯಾನೋ ಕಾರು ಪಲ್ಟಿಯಾಗಿ ಚಾಲಕ ಸಾವು : ಅಂಕೋಲಾ ತಾಲೂಕಿನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66 ಕೊಡಸಣಿಯ ಅಪಾಯಕಾರಿ ಕ್ರಾಸ್ ಬಳಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಕಾರು ಚಾಲಕ ಸ್ಥಳದಲ್ಲಿಯೇ ಮೃತಪಟ್ಟರೆ, ಇನ್ನೋರ್ವ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹೊನ್ನಾವರ ಕಡೆಯಿಂದ ಕುಮಟಾ ಮಾರ್ಗವಾಗಿ ಅಂಕೋಲಾ ಕಡೆ ಬರುತ್ತಿದ್ದ ವೇಳೆ ದಾರಿ ಮಧ್ಯೆ ಗಂಗಾವಳಿ ಸೇತುವೆ ದಾಟಿ ಕೊಡಸಣಿ ಕ್ರಾಸ್ ಬಳಿ ಬರುತ್ತಿದ್ದಂತೆ, ಅಪಾಯಕಾರಿ ತಿರುವಿನಲ್ಲಿ ಚಾಲಕ ಕಾರಿನ ಮೇಲಿನ ತನ್ನ ನಿಯಂತ್ರಣ ಕಳೆದುಕೊಂಡಿದ್ದಾರೆ. ನಂತರ ಬಲ ಬದಿಯ ತಗ್ಗಿನಲ್ಲಿ ಕಾರು ಪಲ್ಟಿಯಾಗಿ ಹೆದ್ದಾರಿಯ ಇನ್ನೊಂದು ಬದಿಯಲ್ಲಿ ಬಿದ್ದಿದೆ. ಅಪಘಾತದ ತೀವ್ರತೆಗೆ ಚಾಲಕ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾರೆ.
ಹೊನ್ನಾವರ ಅರೆಯಂಗಡಿ ಮೂಲದ ರಮೇಶ್ ಶಿವಾನಂದ ನಾಯ್ಕ ಮೃತ ದುರ್ದೈವಿ. ವಧು ಅನ್ವೇಷಣೆಗಾಗಿ ಅದೇ ಕಾರಿನಲ್ಲಿ ಅಂಕೋಲಾ ಕಡೆ ಬರುತ್ತಿದ್ದ ದಿನೇಶ್ ಎನ್ನುವವರ ತಲೆ ಹಾಗೂ ಇತರೆಡೆ ಗಾಯನೋವುಗಳಾಗಿದ್ದು, ಎನ್ಹೆಚ್ಎಐ ಆಂಬುಲೆನ್ಸ್ ಮೂಲಕ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೊಳಪಡಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ :ಇದು ಗಟ್ಟಿ ಜೀವ..!; ಹಳ್ಳದಲ್ಲಿ ಕಾರು ಸಮೇತ ಕೊಚ್ಚಿಕೊಂಡು ಹೋದ ವ್ಯಕ್ತಿ ಬದುಕುಳಿದಿದ್ದೇ ರೋಚಕ!