ಕರ್ನಾಟಕ

karnataka

ETV Bharat / state

ಆದಾಯಕ್ಕಿಂತ ಹೆಚ್ಚು ಗಳಿಕೆ: ಸರ್ಕಾರಿ ನೌಕರನಿಗೆ 3 ವರ್ಷ ಕಠಿಣ ಜೈಲು ಶಿಕ್ಷೆ, ₹1 ಕೋಟಿ ದಂಡ! - Lokayukta Court

ಬೆಂಗಳೂರು ನಗರ ಲೋಕಾಯುಕ್ತದಲ್ಲಿ ದಾಖಲಾಗಿದ್ದ ಆದಾಯಕ್ಕಿಂತ ಹೆಚ್ಚು ಗಳಿಕೆ ಪ್ರಕರಣದಲ್ಲಿ ಬೆಸ್ಕಾಂ ಇಂಜಿನಿಯರ್ ಸಿ.ರಾಮಲಿಂಗಯ್ಯ ಎಂಬವರನ್ನು ದೋಷಿ ಎಂದು ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.

By ETV Bharat Karnataka Team

Published : Jul 4, 2024, 8:13 PM IST

ಲೋಕಾಯುಕ್ತ ಕಚೇರಿ
ಲೋಕಾಯುಕ್ತ ಕಚೇರಿ (ETV Bharat)

ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಸಂಪಾದಿಸಿರುವ ಪ್ರಕರಣದಲ್ಲಿ ಸರ್ಕಾರಿ ಅಧಿಕಾರಿಯೊಬ್ಬರನ್ನು ಅಪರಾಧಿ ಎಂದು ಲೋಕಾಯುಕ್ತ ವಿಶೇಷ ನ್ಯಾಯಾಲಯ ಪರಿಗಣಿಸಿ, 3 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 1 ಕೋಟಿ ರೂಪಾಯಿ ದಂಡ ವಿಧಿಸಿ ಮಹತ್ವದ ಆದೇಶ ನೀಡಿದೆ.

ಸಿ.ರಾಮಲಿಂಗಯ್ಯ ಪ್ರಕರಣದ ಅಪರಾಧಿ. ಇವರು 2011ರಲ್ಲಿ ಬೆಂಗಳೂರು ವಿದ್ಯುತ್ ಕಂಪೆನಿ (ಬೆಸ್ಕಾಂ) ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿದ್ದರು. ಆಗ ಲೋಕಾಯುಕ್ತ ಪೊಲೀಸರು ಇವರ ಮನೆ ಮೇಲೆ ದಾಳಿ ಮಾಡಿದ್ದರು. ಅಪಾರ ಪ್ರಮಾಣದ ಅಸ್ತಿ ಪತ್ತೆಯಾಗಿತ್ತು. ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-1988ರಡಿ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿತ್ತು.

ತನಿಖೆಯಲ್ಲಿ ಆದಾಯಕ್ಕಿಂತ 1.03 ಕೋಟಿ ಅಂದರೆ ಶೇಕಡಾ 44.6ರಷ್ಟು ಅಕ್ರಮ ಆಸ್ತಿ ಹೊಂದಿರುವುದು ದೃಢಪಟ್ಟಿತ್ತು. ಆಗಿನ ಡಿವೈಎಸ್​ಪಿಗಳಾದ ಅಬ್ದುಲ್ ಅಹದ್, ಡಾ.ಅಶ್ವಿನಿ ಹಾಗೂ ಎಂ.ನಾರಾಯಣ್ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಇದೀಗ ಪ್ರಕರಣದ ವಿಚಾರಣೆ ನಡೆಸಿದ ನ್ಯಾ.ಕೆ.ಎಂ.ರಾಧಾಕೃಷ್ಣ ತೀರ್ಪು ನೀಡಿದ್ದಾರೆ. ಅಪರಾಧಿ 1 ಕೋಟಿ ದಂಡ ಪಾವತಿಸಲು ಸಾಧ್ಯವಾಗದಿದ್ದಲ್ಲಿ 4 ತಿಂಗಳ ಸಾದಾ ಜೈಲು ಶಿಕ್ಷೆ ಅನುಭವಿಸಬೇಕೆಂದು ಆದೇಶದಲ್ಲಿ ತಿಳಿಸಿದ್ದಾರೆ.

ಸರ್ಕಾರದ ಪರ ಅಭಿಯೋಜಕರಾದ ರಮೇಶ್ ಬಾಬು ಹಾಗೂ ಮಂಜುನಾಥ್ ಹೊನ್ನಯ್ಯ ನಾಯಕ್ ವಾದ ಮಂಡಿಸಿದ್ದರು.

ಇದನ್ನೂ ಓದಿ:ಬೆಳಗಾವಿ:ಲೋಕಾಯುಕ್ತ ಬಲೆಗೆ ಬಿದ್ದ ಬೆಳಗಾವಿ ತಾ.ಪಂ ಇಒ, ಕಾರ್ಯದರ್ಶಿ

ABOUT THE AUTHOR

...view details