ಕರ್ನಾಟಕ

karnataka

ETV Bharat / state

ಬೆಂಗಳೂರು: ಸಿಲ್ಕ್‌ಬೋರ್ಡ್ ಜಂಕ್ಷನ್‌ ಬಳಿ 250 ಮೀ ಉದ್ದದ ಸ್ಕೈ ವಾಕ್‌ ನಿರ್ಮಾಣ - Skywalk - SKYWALK

ಹೊರವರ್ತುಲ ರಸ್ತೆ ಮತ್ತು ಹೊಸೂರು ರಸ್ತೆಯನ್ನು ಇಬ್ಭಾಗಿಸುವ ಸೆಂಟ್ರಲ್‌ ಸಿಲ್ಕ್‌ಬೋರ್ಡ್ (ಸಿಎಸ್‌ಬಿ) ಜಂಕ್ಷನ್‌ನಲ್ಲಿ ಉಂಟಾಗುತ್ತಿರುವ ಜನದಟ್ಟಣೆ ನಿವಾರಣೆಗೆ ಈ ಸ್ಕೈ ವಾಕ್‌ ಹೆಚ್ಚು ಸಹಕಾರಿಯಾಗಲಿದೆ.

250 meter long skywalk construction
ಸಿಲ್ಕ್‌ಬೋರ್ಡ್ ಜಂಕ್ಷನ್‌ ಬಳಿ 250 ಮೀಟರ್‌ ಉದ್ದದ ಸ್ಕೈ ವಾಕ್‌ ನಿರ್ಮಾಣ

By ETV Bharat Karnataka Team

Published : Apr 3, 2024, 6:17 PM IST

ಬೆಂಗಳೂರು:ನಮ್ಮ ಮೆಟ್ರೋ ರೈಲು ನಿಗಮವು ಇದೇ ಮೊದಲ ಬಾರಿಗೆ ಟ್ರಾವೆಲೆಟರ್ ಒಳಗೊಂಡ 250 ಮೀಟರ್‌ ಉದ್ದದ ಸ್ಕೈ ವಾಕ್‌ ನಿರ್ಮಿಸುತ್ತಿದೆ. ವಿಪರೀತ ಸಂಚಾರ ದಟ್ಟಣೆಯಿರುವ ಸಿಲ್ಕ್‌ ಬೋರ್ಡ್ ಜಂಕ್ಷನ್‌ ಬಳಿ ನಿರ್ಮಾಣವಾಗಲಿರುವ ಈ ಸ್ಕೈ ವಾಕ್‌ ಹಳದಿ ಹಾಗೂ ನೀಲಿ ಮೆಟ್ರೋ ಕಾರಿಡಾರ್‌ ಅನ್ನು ಸಂಧಿಸಲಿದೆ. ಇಲ್ಲಿಯೇ ನಿರ್ಮಾಣವಾಗುವ ಐದು ರ್ಯಾಂಪ್‌ಗಳಲ್ಲಿ ಮೂರು ರ್ಯಾಂಪ್‌ ಮೇ ತಿಂಗಳಾಂತ್ಯಕ್ಕೆ ಪೂರ್ಣಗೊಳ್ಳಲಿದೆ.

ಎಲೆಕ್ಟ್ರಾನಿಕ್‌ ಸಿಟಿ ಸಂಪರ್ಕಿಸುವ ಹಳದಿ ಮಾರ್ಗ (ಆರ್‌.ವಿ.ರಸ್ತೆ-ಬೊಮ್ಮಸಂದ್ರ) ಹಾಗೂ ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ - ಕೆ.ಆರ್‌.ಪುರ ಸ್ಟೇಷನ್‌ (ಹೊರವರ್ತುಲ ರಸ್ತೆ) ಮೂಲಕ ವಿಮಾನ ನಿಲ್ದಾಣದೆಡೆಗೆ ಹೋಗುವ ನೀಲಿ ಮಾರ್ಗ ಈಗಾಗಲೇ ಪ್ರಗತಿಯಲ್ಲಿದೆ. ಹಳದಿ ಮಾರ್ಗದಲ್ಲಿ ರಾಗಿಗುಡ್ಡದಿಂದ ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ವರೆಗೆ ಡಬಲ್‌ ಡೆಕ್ಕರ್‌ (ಮೆಟ್ರೋ ಮತ್ತು ರಸ್ತೆ) ನಿರ್ಮಾಣ ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿದೆ.

ಇಲ್ಲಿರುವ ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ ನಿಲ್ದಾಣ ಹಾಗೂ ಕೃಷ್ಣ ರಾಜಪುರ ನಿಲ್ದಾಣವನ್ನು 250 ಮೀ. ಸ್ಕೈ ವಾಕ್‌ ಮೂಲಕ ಸಂಪರ್ಕಿಸಲಾಗುತ್ತಿದೆ. ಇದರಲ್ಲಿ ಟ್ರಾವೆಲೆಟರ್ ಇರಲಿದ್ದು, ನಮ್ಮ ಮೆಟ್ರೋದಲ್ಲಿ ಮೊದಲ ಬಾರಿ ಇದರ ಬಳಕೆಯಾಗುತ್ತಿದೆ. ಇದರ ಜತೆಗೆ ಸಿಎಸ್‌ಬಿ ಜಂಕ್ಷನ್‌ನಲ್ಲಿ ಅಫ್ಕಾನ್ಸ್‌ ಇನ್ಫ್ರಾಸ್ಟ್ರಕ್ಚರ್‌ ಲಿ. ಐದು ರ್ಯಾಂಪ್‌ಗಳನ್ನು ನಿರ್ಮಿಸುತ್ತಿದೆ.

ಹಳದಿ ಮಾರ್ಗದ ಡಬಲ್ ಡೆಕ್ಕರ್ (ರಸ್ತೆ ಕಂ ಮೆಟ್ರೋ) ಬಳಸಿ ರಾಗಿಗುಡ್ಡ ಕಡೆಯಿಂದ ಬರುವ ವಾಹನ ಸವಾರರು ರ‍್ಯಾಂಪ್‌ ಎ ಮೂಲಕ ಹೊಸೂರು ರಸ್ತೆ ತಲುಪಲು ಸಾಧ್ಯವಾಗಲಿದೆ. ರ್ಯಾಂಪ್‌ ಸಿ ಮೂಲಕ ಎಚ್‌ಎಸ್‌ಆರ್‌ ಲೇಔಟ್ ತಲುಪಬಹುದಾಗಿದೆ. ಉಳಿದಂತೆ ಇತರ ಡಿ, ಇ ರ್ಯಾಂಪ್‌ಗಳು ಹೊಸೂರು ರಸ್ತೆ ಪ್ರವೇಶ, ಬಿಟಿಎಂ ಲೇಔಟ್ ಸಂಪರ್ಕಿಸಲಿವೆ.

ರ್ಯಾಂಪ್‌ ಎ ಹಾಗೂ ರ್ಯಾಂಪ್‌ ಬಿ ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್‌-44) ಮಡಿವಾಳ ಫ್ಲೈಓವರ್‌ನಲ್ಲಿ ವಿಲೀನವಾಗಿ ಮುಂದುವರಿಯಲಿವೆ. ಇದಕ್ಕಾಗಿ ಸಾಲಿಡ್‌ ಸ್ಲ್ಯಾಬ್‌ಗಳ ನಿರ್ಮಾಣ ಪ್ರಗತಿಯಲ್ಲಿದೆ.

ಈಗಾಗಲೇ ರಾಗಿಗುಡ್ಡದಿಂದ ಸಿಎಸ್‌ಬಿ ಜಂಕ್ಷನ್‌ವರೆಗೆ ಮೊದಲ ಹಂತದ ಮೇಲ್ಸೇತುವೆ ನಿರ್ಮಿಸಲಾಗಿದೆ. ಎ, ಬಿ, ಸಿ ರ್ಯಾಂಪ್‌ಗಳು ಮುಂದಿನ ಮೇ ತಿಂಗಳೊಳಗೆ ಮತ್ತು ಡಿ ಮತ್ತು ಇ ರ್ಯಾಂಪ್‌ ವರ್ಷಾಂತ್ಯಕ್ಕೆ ಕಾರ್ಯಾರಂಭ ಆಗಲಿದೆ. ಇದರಿಂದ ಒಟ್ಟಾರೆ ಸಿಲ್ಕ್‌ಬೋರ್ಡ್ ಜಂಕ್ಷನ್‌ ಬಳಿ ಸಂಚಾರ ದಟ್ಟಣೆ ನಿಯಂತ್ರಣವಾಗಲಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

50 ತಾಸಿನಲ್ಲಿ ಸಾಲಿಡ್‌ ಸ್ಲ್ಯಾಬ್‌ ಕೆಲಸ ಪೂರ್ಣ ಸೆಂಟ್ರಲ್‌ ಸಿಲ್ಕ್‌ಬೋರ್ಡ್ ಜಂಕ್ಷನ್‌ ಬಳಿ ಅಫ್ಕಾನ್ಸ್‌ ಇನ್ಫ್ರಾಸ್ಟ್ರಕ್ಚರ್‌ ಲಿ. ಕಂಪನಿಯು 124 ಮೀ ಉದ್ದ, (52-ಮೀಟರ್ ತಿರುವು ಒಳಗೊಂಡ) 15.1 ಮೀಟರ್ ಅಗಲದ ಸಾಲಿಡ್‌ ಸ್ಲ್ಯಾಬ್‌ ನಿರ್ಮಿಸಿದೆ. 50 ಗಂಟೆಗಳ ಕಾಮಗಾರಿಯೊಂದಿಗೆ ಈ ಫ್ಲೈಓವರ್‌ ಭಾಗವನ್ನು ರೂಪಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂಓದಿ:ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಮೊದಲ ಬಾರಿಗೆ ಯುಪಿಐ ಮೂಲಕ ಟಿಕೆಟ್‌ ಖರೀದಿಗೆ ಅವಕಾಶ - Train tickets by UPI payment

ABOUT THE AUTHOR

...view details