ಬೆಳಗಾವಿ:ನೂರು ವರ್ಷಗಳ ಹಿಂದೆ ಬೆಳಗಾವಿಯಲ್ಲಿ 39ನೇ ಕಾಂಗ್ರೆಸ್ ಅಧಿವೇಶನ ನಡೆದಿತ್ತು. ಅಧಿವೇಶನದ ಅಧ್ಯಕ್ಷತೆಯನ್ನು ಮಹಾತ್ಮ ಗಾಂಧಿ ವಹಿಸಿದ್ದರೆಂಬುದು ಇತಿಹಾಸ. ಆದರೆ, ಅಧಿವೇಶನದ ಪ್ರಮುಖ ರೂವಾರಿ ಯಾರು? ಹೇಗಿತ್ತು ಅವರ ವ್ಯಕ್ತಿತ್ವ? ಅವರನ್ನು ಜನ ಏನೆಂದು ಕರೆಯುತ್ತಿದ್ದರು? ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಪ್ರಮುಖ ರೂವಾರಿಯ ಕುರಿತ ವಿಶೇಷ ವರದಿ ಇಲ್ಲಿದೆ.
'ಕರ್ನಾಟಕದ ಸಿಂಹ' ಎಂದೇ ಖ್ಯಾತರಾಗಿದ್ದ ಬೆಳಗಾವಿ ಜಿಲ್ಲೆಯ ಹುದಲಿ ಗ್ರಾಮದ ಹೆಮ್ಮೆಯ ಪುತ್ರ, ಕೆಚ್ಚೆದೆಯ ಹೋರಾಟಗಾರ ಗಂಗಾಧರರಾವ್ ದೇಶಪಾಂಡೆಯವರೇ ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆಯಲು ಮತ್ತು ಗಾಂಧೀಜಿ ಅಧ್ಯಕ್ಷತೆ ವಹಿಸಲು ಕಾರಣಕರ್ತರು.
ಗಂಗಾಧರರಾವ್ ದೇಶಪಾಂಡೆ ಮೊಮ್ಮಗ ರವೀಂದ್ರ ದೇಶಪಾಂಡೆ ಮಾತನಾಡಿದ್ದಾರೆ. (ETV Bharat) ಗಂಗಾಧರರಾವ್ ಅವರ ಮುತ್ಸದ್ಧಿತನ, ಸಮರ್ಥ ನಾಯಕತ್ವದ ಫಲವಾಗಿ ಬೆಳಗಾವಿ ಇತಿಹಾಸದಲ್ಲಿ ದಾಖಲಾಯಿತು. ಅಂದು ಕಾಂಗ್ರೆಸ್‌ನಲ್ಲಿ ರಾವ್ ಅವರು ಜವಾಹರಲಾಲ್ ನೆಹರು ಅವರಿಗೆ ಸರಿಸಮಾನ ಅಧಿಕಾರ ಹೊಂದಿದ್ದರು. ಗಂಗಾಧರರಾವ್ ಮನಸ್ಸು ಮಾಡಿದ್ದರೆ ಸ್ವಾತಂತ್ರ್ಯಾನಂತರ ಭಾರತ ಸರ್ಕಾರದಲ್ಲಿ ಪ್ರಮುಖ ಸ್ಥಾನ ಪಡೆಯುತ್ತಿದ್ದರು. ಆದರೆ, ಅವರು "ನನ್ನ ಹೋರಾಟ ಮತ್ತು ಸೇವೆ ದೇಶದ ಸ್ವಾತಂತ್ರ್ಯಕ್ಕೆ ಮಾತ್ರ ಸೀಮಿತ" ಎಂದು ಹೇಳುತ್ತಾ ಆಧ್ಯಾತ್ಮಿಕತೆಯ ಕಡೆಗೆ ಸಾಗಿ ನಿಸ್ವಾರ್ಥಿಯಾದರು.
ಬೆಳಗಾವಿಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ನ 39ನೇ ಅಧಿವೇಶನ ನಡೆದ ಸ್ಥಳ (ಸಂಗ್ರಹ ಚಿತ್ರ) (ETV Bharat) ಯಾರು ಗಂಗಾಧರರಾವ್ ದೇಶಪಾಂಡೆ?: ಶ್ರೀಮಂತ ಮನೆತನದ ಬಾಲಕೃಷ್ಣ ಮತ್ತು ರಾಧಾಬಾಯಿ ದಂಪತಿಯ ಮಗನಾಗಿ 1871ರ ಮಾರ್ಚ್ 31ರಂದು ಗಂಗಾಧರರಾವ್ ದೇಶಪಾಂಡೆ ಜನಿಸಿದರು. ಮಾಧ್ಯಮಿಕ ಶಿಕ್ಷಣವನ್ನು ಬೆಳಗಾವಿ ಸರ್ದಾರ್ಸ್ ಹೈಸ್ಕೂಲ್ನಲ್ಲಿ ಪಡೆದರು. ಪುಣೆ ಡೆಕ್ಕನ್ ಕಾಲೇಜಿನಲ್ಲಿ ಪದವಿ ಮತ್ತು ಬಿಎ ಎಲ್ಎಲ್ಬಿ ಪೂರ್ಣಗೊಳಿಸಿದರು. ಇವರ ಪತ್ನಿ ಲಕ್ಷ್ಮಿಬಾಯಿ, ಪುತ್ರ ಬಾಲಕೃಷ್ಣ. 1960ರ ಜುಲೈ 30ರಂದು ಗಂಗಾಧರಾವ್ ನಿಧನರಾದರು.
ಬೆಳಗಾವಿ ಕಾಂಗ್ರೆಸ್ ಅಧಿವೇಶನದಲ್ಲಿ ಗಾಂಧೀಜಿಯವರು ಅಧ್ಯಕ್ಷೀಯ ಭಾಷಣ (ಸಂಗ್ರಹ ಚಿತ್ರ) (ETV Bharat) 1922ರಲ್ಲಿ ಚರಕ ಸಂಘ, 1937ರಲ್ಲಿ ಹುದಲಿಯಲ್ಲಿ ಗಾಂಧಿಸೇವಾ ಸಂಘ ಸ್ಥಾಪಿಸಿದ್ದರು. ಖಾದಿ ಗ್ರಾಮೋದ್ಯೋಗ ನೂರಾರು ಜನರಿಗೆ ಉದ್ಯೋಗ ಕೊಟ್ಟಿದೆ. 1920ರಲ್ಲಿ ಬೆಳಗಾವಿಯಲ್ಲಿ ಮುನ್ಸಿಪಲ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಆರಂಭದಲ್ಲಿ ಗಂಗಾಧರಾವ್ ಅವರು ಗೋಪಾಲಕೃಷ್ಣ ಗೋಖಲೆ, ಬಾಲಗಂಗಾಧರ ತಿಲಖ್ರ ಅನುಯಾಯಿಯಾಗಿದ್ದರು. ಅವರು ಕಾಲವಾದ ಬಳಿಕ ಮಹಾತ್ಮ ಗಾಂಧಿ ಸಂಪರ್ಕಕ್ಕೆ ಬರುತ್ತಾರೆ. ಗಾಂಧೀಜಿಯ ಐವರು ಅತ್ಯಾಪ್ತರಲ್ಲಿ ಇವರೂ ಒಬ್ಬರು. ಅಪ್ಪಟ ಗಾಂಧಿವಾದಿಯಾಗಿದ್ದ ಗಂಗಾಧರರಾವ್ ಖಾದಿ ಬಟ್ಟೆಯನ್ನೇ ಧರಿಸುತ್ತಿದ್ದರು. ಶ್ರೀಮಂತಿಕೆ ಇದ್ದರೂ ಸರಳ ಜೀವನ ನಡೆಸಿದ ಹೆಗ್ಗಳಿಕೆ ಇವರದ್ದು.
ಕುದುರೆ ಮೇಲೆ ಕುಳಿತ್ತಿರುವ ಗಂಗಾಧರರಾವ್ ದೇಶಪಾಂಡೆ (ಸಂಗ್ರಹ ಚಿತ್ರ) (ETV Bharat) ಅಧಿವೇಶನಕ್ಕೆ ಬೆಳಗಾವಿ ಆಯ್ಕೆಯಾಗಿದ್ದು ಹೇಗೆ?:1923ರಲ್ಲಿ ಆಂಧ್ರ ಪ್ರದೇಶದ ಕಾಕಿನಾಡದಲ್ಲಿ 38ನೇ ಕಾಂಗ್ರೆಸ್ ಅಧಿವೇಶನ ನಡೆದಿತ್ತು. ಆ ವೇಳೆಯೂ ನೆಹರು ಮತ್ತು ಗಂಗಾಧರರಾವ್ ದೇಶಪಾಂಡೆ ಇಬ್ಬರೂ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಆಗ ಮುಂದಿನ ಅಧಿವೇಶನ ಕರ್ನಾಟಕದಲ್ಲಿ ನಡೆಸುವ ಬಗ್ಗೆ ನಿರ್ಧರಿಸಲಾಗಿತ್ತು. ಆದರೆ, ಕರ್ನಾಟಕದಲ್ಲಿ ಎಲ್ಲಿ ಆಗಬೇಕು ಅಂತಾ ತೀರ್ಮಾನ ಆಗಿರಲಿಲ್ಲ. ವಿಜಯಪುರದಲ್ಲಿ ಮುಖಂಡ ಶ್ರೀನಿವಾಸ ಕೌಜಲಗಿ ಅವರ ಮನೆಯಲ್ಲಿ ನಡೆದ ಸಭೆಯಲ್ಲಿ ಅವರು ನಮ್ಮಲ್ಲೇ ಆಗಲಿ ಎಂದಿದ್ದರು. ಬಳಿಕ ಹುಬ್ಬಳ್ಳಿಯಲ್ಲಿ ನಡೆದ ಕರ್ನಾಟಕ ಪ್ರಾಂತೀಯ ಸಭೆಯಲ್ಲಿ ಹುಬ್ಬಳ್ಳಿ-ಧಾರವಾಡ ನಾಯಕರು ಇಲ್ಲಿಯೇ ಆಗಲಿ ಎಂದು ವಾದಿಸಿದ್ದರು. ಆದರೆ, ಗಂಗಾಧರರಾವ್ ದೇಶಪಾಂಡೆ ಅವರು ಇಲ್ಲಿನ ವರ್ತಕರು, ದಾನಿಗಳಿಂದ 72 ಸಾವಿರ ರೂ. ಹಣ ಕೂಡಿಸಿಕೊಂಡು ಹೋಗಿದ್ದರು. ಬೆಳಗಾವಿ ಮೂರು ರಾಜ್ಯಗಳ ಸಂಪರ್ಕ ಕೊಂಡಿ. ಈಗಾಗಲೇ ಅಧಿವೇಶನಕ್ಕೆ ನಾವು ಸಿದ್ಧತೆ ನಡೆಸಿದ್ದು, ಇದೇ ಸೂಕ್ತ ಎಂದು ಪ್ರಬಲವಾಗಿ ವಾದಿಸಿ ಅಂತಿಮಗೊಳಿಸಲು ಯಶಸ್ವಿಯಾಗಿದ್ದರು.
ಗಂಗಾಧರರಾವ್ ದೇಶಪಾಂಡೆ, ಸೊಸೆ ಮತ್ತು ಮೊಮ್ಮಗಳು (ಸಂಗ್ರಹ ಚಿತ್ರ) (ETV Bharat) ಗಾಂಧೀಜಿ ಮನವೊಲಿಸಿದ್ದ ದೇಶಪಾಂಡೆ:ಮಹಾತ್ಮ ಗಾಂಧಿ ಹಿಂದಿನ ಅಧಿವೇಶನದಲ್ಲಿ ಭಾಗಿಯಾಗಿರಲಿಲ್ಲ. ಅಲ್ಲದೇ ಅಧ್ಯಕ್ಷತೆ ವಹಿಸಲು ನಿರಾಕರಿಸಿದ್ದರು. ನಾನು ಅಧ್ಯಕ್ಷ ಇರಲಿ, ಬಿಡಲಿ. ಜನ ನನ್ನ ಚಳುವಳಿಯಲ್ಲಿ ಪಾಲ್ಗೊಳ್ಳುತ್ತಾರೆ ಎನ್ನುತ್ತಾರೆ. ಆದರೆ, ಗಂಗಾಧರರಾವ್ ಅವರು ಮಾತ್ರ ಬಿಡಲಿಲ್ಲ. ಗಾಂಧೀಜಿ ಮನವೊಲಿಸಿ ಅಧ್ಯಕ್ಷರಾಗುವಂತೆ ಮಾಡಿದ್ದು ಇತಿಹಾಸ. ಬೆಳಗಾವಿ ಅಧಿವೇಶನದಲ್ಲೂ ಜವಾಹರಲಾಲ್ ನೆಹರು ಮತ್ತು ಗಂಗಾಧರಾವ್ ದೇಶಪಾಂಡೆ ಪ್ರಧಾನ ಕಾರ್ಯದರ್ಶಿಯಾಗಿದ್ದರು.
ಹುಟ್ಟೂರಿಗೂ ಗಾಂಧೀಜಿಯನ್ನು ಕರೆಸಿದ್ದರು: ತಮ್ಮ ಹುಟ್ಟೂರು ಹುದಲಿಗೂ ಗಾಂಧೀಜಿ ಅವರನ್ನು ಗಂಗಾಧರರಾವ್ ಕರೆಸಿದ್ದರು. ಏಳು ದಿನ ಅಲ್ಲಿಯೇ ಬಾಪು ವಾಸ್ತವ್ಯ ಹೂಡಿದ್ದರು. ಗಾಂಧಿ ಸೇವಾ ಸಂಘದ ಸಮ್ಮೇಳನ ಏರ್ಪಡಿಸಲಾಗಿತ್ತು. ಗಾಂಧೀಜಿ ಜೊತೆಗೆ ಡಾ.ಬಾಬು ರಾಜೇಂದ್ರಪ್ರಸಾದ್, ಅಬ್ದುಲ್ ಗಫಾರ್‌ಖಾನ್, ಸರ್ದಾರ್ ವಲ್ಲಭಬಾಯಿ ಪಟೇಲ್, ಶೌಕತ್ ಅಲಿ, ಸರೋಜಿನಿ ನಾಯ್ಡು, ಹಿರಿಯ ಸಾಹಿತಿಗಳಾದ ಬೆಟಗೇರಿ ಕೃಷ್ಣಶರ್ಮ, ಜಿ.ನಾರಾಯಣ ಸೇರಿ ಅನೇಕ ನಾಯಕರ ದಂಡೇ ಹುದಲಿಗೆ ಬಂದಿತ್ತು.
ಗಂಗಾಧರರಾವ್ ದೇಶಪಾಂಡೆ (ಸಂಗ್ರಹ ಚಿತ್ರ) (ETV Bharat) ಈ ಕುರಿತು ಈಟಿವಿ ಭಾರತ್ ಜೊತೆಗೆ ಮಾತನಾಡಿದ ಗಂಗಾಧರರಾವ್ ದೇಶಪಾಂಡೆ ಅವರ ಮೊಮ್ಮಗ ರವೀಂದ್ರ ದೇಶಪಾಂಡೆ, "ಸ್ವಾತಂತ್ರ್ಯಾ ನಂತರ ನಮ್ಮ ಅಜ್ಜನವರಿಗೆ ಕೇಂದ್ರ ಗೃಹ ಸಚಿವರಾಗುವ ಅವಕಾಶ ಒದಗಿ ಬಂದಿತ್ತು. ಆದರೆ, ಅದನ್ನು ಸಾರಾಸಗಟಾಗಿ ತಿರಸ್ಕರಿಸಿದ್ದರು. ನಾನು ಅಧಿಕಾರಕ್ಕಾಗಿ ಹೋರಾಟ ಮಾಡಿಲ್ಲ ಎಂದಿದ್ದರು. ರಾಜಕಾರಣಕ್ಕೆ ಗುಡ್ ಬೈ ಹೇಳಿ, ಆಧ್ಯಾತ್ಮಿಕತೆಯ ಕಡೆ ಹೊರಳಿದರು. ಒಮ್ಮೆ ಅವರು ಜೈಲಿನಲ್ಲಿದ್ದಾಗ, ಉಪವಾಸ ಮಾಡಿದರೆ ನಿಮ್ಮ ಇನಾಮು ಜಪ್ತಿಪಡಿಸುತ್ತೇವೆ ಎಂದು ಬ್ರಿಟಿಷರು ಹೆದರಿಸಿದ್ದರು. ಅದಕ್ಕೆ ಅವರು ಜಗ್ಗಿರಲಿಲ್ಲ. ದೇಶದ ಸ್ವಾತಂತ್ರ್ಯಕ್ಕಾಗಿ ಸಾಕಷ್ಟು ಜಮೀನು, ಆಸ್ತಿಯನ್ನು ಅವರು ಕಳೆದುಕೊಂಡಿದ್ದಾರೆ. ಆದರೆ, ಜವಾಹರಲಾಲ್ ನೆಹರು ಅವರಿಗೆ ಸರಿಸಮಾನವಾಗಿ ಕೆಲಸ ಮಾಡಿದ್ದರು. ಗಾಂಧೀಜಿಯನ್ನು ಬೆಳಗಾವಿಗೆ ಕರೆ ತಂದಿದ್ದರು. ಇಂತಹ ಅಜ್ಜನ ಮೊಮ್ಮಗನಾಗಿ ಹುಟ್ಟಿದ್ದಕ್ಕೆ ತುಂಬಾ ಹೆಮ್ಮೆ ಇದೆ" ಎಂದರು.
ಮನೆಯಲ್ಲಿ ಮರಾಠಿ, ನಿಷ್ಠೆ ಕನ್ನಡಕ್ಕೆ: "ಮನೆಯಲ್ಲಿ ಮರಾಠಿ ಮಾತನಾಡುತ್ತಿದ್ದರು. ಆದರೆ, ಕನ್ನಡ ಭಾಷೆಯ ಮೇಲೆ ಇನ್ನಿಲ್ಲದ ಪ್ರೀತಿ ಮತ್ತು ನಿಷ್ಠೆ ಅವರಿಗಿತ್ತು. ಪುಣೆ ಕಾಲೇಜಿನಲ್ಲಿ ಕನ್ನಡ ಕಡೆಗಣಿಸಿದ್ದಕ್ಕೆ ಸಿಡಿದೆದ್ದಿದ್ದರು. ಇನ್ನು ಭಾಷಾವಾರು ಪ್ರಾಂತ ರಚನೆ ವೇಳೆ ಬೆಳಗಾವಿ ಕರ್ನಾಟಕಕ್ಕೆ ಸೇರಬೇಕು ಅಂತ ಗಂಗಾಧರರಾವ್ ದೇಶಪಾಂಡೆ ಧ್ವನಿ ಎತ್ತಿದ್ದರು" ಎಂದು ಅವರು ಹೇಳಿದರು.
ಪಠ್ಯದಲ್ಲಿ ಸೇರಿಸಿ: "ಕರ್ನಾಟಕ ಸಿಂಹ ಗಂಗಾಧರಾವ್ ದೇಶಪಾಂಡೆ ಅವರ ಕುರಿತು ಇಂದಿನ ಪೀಳಿಗೆಗೆ ತಿಳಿಸಲು ಅವರ ಬದುಕಿನ ಬಗ್ಗೆ ಶಾಲಾ-ಕಾಲೇಜಿನ ಪಠ್ಯದಲ್ಲಿ ಸೇರಿಸಬೇಕು. ಸ್ವಾತಂತ್ರ್ಯ ಹೋರಾಟಗಾರರು ಎಂದರೆ ಗಾಂಧೀಜಿ, ನೆಹರು, ಬೋಸ್, ಪಟೇಲ್ ಸೇರಿ ಮತ್ತಿತರರ ಹೆಸರು ಮಾತ್ರ ಪ್ರಚಾರದಲ್ಲಿದೆ. ಹಾಗಾಗಿ, ರಾಷ್ಟ್ರಮಟ್ಟದ ನಾಯಕರಾಗಿದ್ದ ನಮ್ಮ ಅಜ್ಜನವರ ಬಗ್ಗೆಯೂ ವಿದ್ಯಾರ್ಥಿಗಳು ಓದುವಂತಾಗಬೇಕು. ಸಾಕ್ಷ್ಯಚಿತ್ರಗಳನ್ನು ರಚಿಸಬೇಕು. ಆ ನಿಟ್ಟಿನಲ್ಲಿ ಸರ್ಕಾರ ಕ್ರಮ ವಹಿಸಬೇಕು" ಎಂದು ರವೀಂದ್ರ ದೇಶಪಾಂಡೆ ಒತ್ತಾಯಿಸಿದರು.
ಇದೇ ಡಿ.26ರಂದು ಬೆಳಗಾವಿ ನಗರ ರಾಮತೀರ್ಥ ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಗಂಗಾಧರರಾವ್ ದೇಶಪಾಂಡೆ ಸ್ಮಾರಕ ಭವನ ಮತ್ತು ಫೋಟೋ ಗ್ಯಾಲರಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಹುದಲಿಯಲ್ಲಿ ಈಗಾಗಲೇ ನಿರ್ಮಿಸಿರುವ ಸ್ಮಾರಕ ಭವನವನ್ನು ದುರಸ್ಥಿಪಡಿಸುವ ಕಾರ್ಯ ನಡೆಯುತ್ತಿದೆ.
ಇದನ್ನೂ ಓದಿ:ಅಂದ ಚೆಂದಗೊಳ್ಳುತ್ತಿದೆ ವೀರಸೌಧ: ಗಾಂಧೀಜಿ ಹಳೇ ಫೋಟೋಗಳಿಗೆ ಎಐ ಟಚ್: ಬೆಳಗಾವಿ ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವಕ್ಕೆ ಹೇಗಿದೆ ತಯಾರಿ? - BELAGAVI CONGRESS SESSION