ಚಿಕ್ಕಮಗಳೂರು :ಒಂದು ಕಡೆ ಮಲೆನಾಡು ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆ ಗ್ರಾಮಸ್ಥರಲ್ಲಿ ಆತಂಕವನ್ನುಂಟು ಮಾಡಿದ್ದರೆ, ಇನ್ನೊಂದು ಕಡೆ ಸರಿಸೃಪಗಳು ಹಾಗೂ ಭಾರಿ ಗಾತ್ರದ ಹಾವುಗಳು ಹೊರ ಬಂದು ಜನರಲ್ಲಿ ಇನ್ನಷ್ಟು ಭಯದ ವಾತಾವರಣ ನಿರ್ಮಾಣ ಮಾಡಿವೆ.
ಒಂದು ವಾರದಿಂದ ಭಯ ಹುಟ್ಟಿಸಿದ್ದ 13 ಅಡಿ ಉದ್ದದ ಕಾಳಿಂಗ ಸರ್ಪವನ್ನು ಸತತ ಕಾರ್ಯಾಚರಣೆಯ ಬಳಿಕ ಸೆರೆ ಹಿಡಿಯಲಾಗಿದೆ. ಜಿಲ್ಲೆಯ ಕಳಸದ ಸಂಸೆ ಗ್ರಾ. ಪಂ ವ್ಯಾಪ್ತಿಯ ಪಾತಿ ಗುಡ್ಡದಲ್ಲಿ ಈ ಘಟನೆ ನಡೆದಿದ್ದು, ಕಾಳಿಂಗ ಸರ್ಪದ ಓಡಾಟದಿಂದ ಸ್ಥಳೀಯರಲ್ಲಿ ಆತಂಕ ಉಂಟಾಗಿತ್ತು.
ಪ್ರತಿನಿತ್ಯ ಇದೇ ರಸ್ತೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಭಾರಿ ಗಾತ್ರದ ಕಾಳಿಂಗ ಸರ್ಪ ತೋಟದ ಕೆಲಸಕ್ಕೆ ಹೋಗುವ ಕಾರ್ಮಿಕರಲ್ಲಿ ಹಾಗೂ ರಸ್ತೆಯಲ್ಲಿ ಸಾಗುವ ಜನರಲ್ಲಿ ಪ್ರತಿನಿತ್ಯ ಭಯ ಹುಟ್ಟಿಸಿತ್ತು. ಪದೇ ಪದೆ ಇದೇ ಭಾಗದಲ್ಲಿ ಈ ಕಾಳಿಂಗ ಸರ್ಪ ಕಾಣಿಸಿಕೊಂಡ ಹಿನ್ನೆಲೆ ಈ ರಸ್ತೆಯಲ್ಲಿ ಕೆಲವರು ಸಂಚಾರ ಮಾಡುವುದಕ್ಕೆ ಹಿಂದೇಟು ಹಾಕಿ ವಾಪಸ್ ಹೋಗುತ್ತಿದ್ದರು. ಇಂದು ಮತ್ತೆ ಈ ಕಾಳಿಂಗ ಸರ್ಪ ಸ್ಥಳೀಯರಿಗೆ ಕಾಣಿಸಿಕೊಂಡು ಭಯ ಹುಟ್ಟಿಸಿದ ಹಿನ್ನೆಲೆ ಕೂಡಲೇ ಸ್ಥಳೀಯರು ಕಳಸದ ಉರಗತಜ್ಞ ರಿಜ್ವಾನ್ ಅವರಿಗೆ ಸುದ್ದಿ ಮುಟ್ಟಿಸಿದ್ದರು.