ಹುಬ್ಬಳ್ಳಿ:ಕಟ್ಟಡ ಕಾರ್ಮಿಕರ ಮಕ್ಕಳಿಗೆ ವಿತರಿಸಲು ತಂದಿದ್ದ ಲ್ಯಾಪ್ಟಾಪ್ಗಳು ಕಳವಾಗಿರುವ ಘಟನೆ ಗೋಕುಲ ರಸ್ತೆ ಪ್ರಿಯದರ್ಶಿನಿ ಕಾಲೋನಿಯಲ್ಲಿರುವ ಕಾರ್ಮಿಕ ಭವನ ಕಚೇರಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕಟ್ಟಡ ಕಾರ್ಮಿಕರ ಮಕ್ಕಳಿಗೆ ಹಂಚಿಕೆ ಮಾಡಲು 250 ಲ್ಯಾಪ್‌ಟಾಪ್‌ಗಳನ್ನು ಇಲ್ಲಿ ಇರಿಸಲಾಗಿತ್ತು. ಈ ಪೈಕಿ 101 ಲ್ಯಾಪ್‌ಟಾಪ್‌ಗಳನ್ನು ಮೇ 22 ರಿಂದ ಆಗಸ್ಟ್ 30ರ ನಡುವೆ ಕೊಠಡಿಯ ಕಿಟಕಿ ತೆರೆದು ಕಳ್ಳತನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಸಿಸಿ ಕ್ಯಾಮರಾ ವೈರ್ ಕತ್ತರಿಸಿ, ಹಾರ್ಡ್ ಡಿಸ್ಕ್ ಹಾಗೂ ಡಿವಿಆರ್ ಸಹ ಕಳ್ಳತನ ಮಾಡಲಾಗಿದೆ. ಈ ಸಂಬಂಧ ಕಾರ್ಮಿಕ ಇಲಾಖೆಯ ಸಹಾಯಕ ಆಯುಕ್ತೆ ಶ್ವೇತಾ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾರ್ಮಿಕ ಇಲಾಖೆಯ ಸಹಾಯಕ ಆಯುಕ್ತೆ ಶ್ವೇತಾ (ETV Bharat) ಅಧಿಕಾರಿ ಹೇಳಿದ್ದೇನು?:ಈ ಕುರಿತು ಕಾರ್ಮಿಕ ಇಲಾಖೆಯ ಸಹಾಯಕ ಆಯುಕ್ತೆ ಶ್ವೇತಾ ಪ್ರತಿಕ್ರಿಯಿಸಿ, "ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತ ಕಾರ್ಮಿಕರ ಪ್ರಥಮ ಹಾಗೂ ದ್ವಿತೀಯ ಪಿಯುಸಿ ಓದುತ್ತಿರುವ ಮಕ್ಕಳಿಗೆ 250 ಲ್ಯಾಪ್‌ಟಾಪ್‌ಗಳನ್ನು ಮೀಸಲಿಡಲಾಗಿತ್ತು. ಹಾವೇರಿ ಜಿಲ್ಲೆಯ ಕಾರ್ಮಿಕ ಇಲಾಖೆ ಅಧಿಕಾರಿಗಳು ಅಲ್ಲಿ ಸ್ಥಳಾವಕಾಶ ಕೊರತೆ ಕಾರಣದಿಂದ ಇಲ್ಲಿಗೆ ತಂದು ಇರಿಸಿದ್ದರು" ಎಂದರು.
"ಎಲ್ಲ ಲ್ಯಾಪ್‌ಟಾಪ್‌ಗಳನ್ನು ಕೊಠಡಿಯಲ್ಲಿ ಇರಿಸಿ ಅದರ ಬೀಗವನ್ನು ಅಧಿಕಾರಿಗಳೇ ತಗೆದುಕೊಂಡು ಹೋಗಿದ್ದಾರೆ. ಆಗಸ್ಟ್ 30ರಂದು ಕಿಟಕಿ ತೆರೆದಿರುವುದು ಗಮನಕ್ಕೆ ಬಂದಿದೆ. ಆಗ ಹಾವೇರಿ ಜಿಲ್ಲೆಯ ಎಕ್ಸಿಕ್ಯೂಟಿವ್ ಹರೀಶ್ ಶೆಟ್ಟಿ ಅವರ ಸಮ್ಮುಖದಲ್ಲಿ ಕೊಠಡಿ ಬೀಗ ತಗೆದು ಲ್ಯಾಪ್‌ಟಾಪ್ ಎಣಿಕೆ ಮಾಡಿದಾಗ 101 ಲ್ಯಾಪ್ಟಾಪ್ಗಳು ಕಳ್ಳತನವಾಗಿರುವ ಅಂಶ ಬೆಳಕಿಗೆ ಬಂದಿದೆ. ಈ ಸಂಬಂಧ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಸೆ.6 ರಂದು ಎಫ್ಐಆರ್ ಸಹ ದಾಖಲಾಗಿದೆ" ಎಂದು ತಿಳಿಸಿದರು.
ಇದನ್ನೂ ಓದಿ:ಕಣ್ಣಿಗೆ ಕಾರದ ಪುಡಿ ಎರಚಿ ಸಿನಿಮೀಯ ರೀತಿಯಲ್ಲಿ ದರೋಡೆ: ಹೆಡ್ ಕಾನ್ಸ್ಟೇಬಲ್ ಸೇರಿ ಏಳು ಆರೋಪಿಗಳ ಬಂಧನ - Robbery Case