ನವದೆಹಲಿ: ಟೀಂ ಇಂಡಿಯಾದ ಮಾಜಿ ನಾಯಕ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ವಿರುದ್ಧ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ. ಧೋನಿಯಿಂದಲೇ ತಮ್ಮ ಮಗನ ವೃತ್ತಿಜೀವನ ಹಾಳಾಗಿದ್ದು, ಮಗನಿಗೆ ದ್ರೋಹ ಬಗೆದಿರುವ ಧೋನಿಯನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಯೋಗರಾಜ್ ಸಿಂಗ್ ಗಂಭೀರ ಆರೋಪ ಮಾಡಿದ್ದಾರೆ.
ಯೂಟ್ಯೂಬ್ ಚಾನೆಲ್ ಸಂದರ್ಶನವೊಂದರಲ್ಲಿ ಮಾತನಾಡಿದ ಯೋಗರಾಜ್" ಧೋನಿ ಪ್ರಸಿದ್ಧ ಕ್ರಿಕೆಟರ್ ಆಗಿರಬಹುದು. ಆದರೆ, ಅವರು ನನ್ನ ಮಗನಿಗೆ ಕ್ಷಮಿಸಲಾಗದ ಅನ್ಯಾಯ ಮಾಡಿದ್ದಾರೆ. ಎಲ್ಲವೂ ಈಗ ಬೆಳಕಿಗೆ ಬರುತ್ತಿದೆ. ಇನ್ನು 4 - 5 ವರ್ಷ ಕ್ರಿಕೆಟ್ ಆಡಬಹುದಾಗಿದ್ದ ನನ್ನ ಮಗನ ಕೆರಿಯರ್ ಅನ್ನು ಧೋನಿ ಹಾಳು ಮಾಡಿದ್ದಾರೆ. ನಾನು ಎಂದಿಗೂ ಅವರನ್ನು ಕ್ಷಮಿಸುವುದಿಲ್ಲ. ನನ್ನ ಕುಟುಂಬದ ಸದಸ್ಯರ ಹತ್ತಿರ ಬರಲು ಬಿಡುವುದಿಲ್ಲ. ಧೋನಿ ಆತ್ಮಾವಲೋಕನ ಮಾಡಿಕೊಳ್ಳಲ್ಲಿ ಈ ಹಿಂದೆ ಸ್ಟಾರ್ ಬ್ಯಾಟರ್ಗಳಾದ ಗೌತಮ್ ಗಂಭೀರ್ ಮತ್ತು ವೀರೇಂದ್ರ ಸೆಹ್ವಾಗ್ ಹೇಳಿದ್ದರು, ಯುವರಾಜ್ ಸಿಂಗ್ ನಂತಹ ಮತ್ತೊಬ್ಬ ಆಟಗಾರ ಎಂದಿಗೂ ಸಿಗಲ್ಲ ಎಂದಿದ್ದರು. ಕ್ಯಾನ್ಸರ್‌ನಿಂದ ಬಳಲುತ್ತಿದ್ದರೂ ದೇಶಕ್ಕಾಗಿ ಆಡಿ ವಿಶ್ವಕಪ್ ಗೆದ್ದ ಯುವರಾಜ್‌ಗೆ ಸರ್ಕಾರ ಭಾರತ ರತ್ನ ನೀಡಿ ಗೌರವಿಸಬೇಕು ಎಂದು ಯೋಗರಾಜ್ ಹೇಳಿದರು.