ಹೈದರಾಬಾದ್: ವೆಸ್ಟ್ ಇಂಡೀಸ್ ಲೆಜೆಂಡರಿ ಬೌಲರ್ ಆ್ಯಂಡಿ ರಾಬರ್ಟ್ಸ್ ಟೀಂ ಇಂಡಿಯಾದ ಸ್ಟಾರ್ ವೇಗಿ ಮೊಹಮ್ಮದ್ ಶಮಿ ಅವರ ಗುಣಗಾನ ಮಾಡಿದ್ದಾರೆ. ಯಾರ್ಕರ್ ಕಿಂಗ್ ಜಸ್ಪ್ರೀತ್ ಬುಮ್ರಾ ಹೆಚ್ಚಿನ ವಿಕೆಟ್ ಪಡೆದಿದ್ದರೂ ಶಮಿ ಅವರೇ ಟಾಪ್ ಬೌಲರ್ ಎಂದಿದ್ದಾರೆ.
ಶಮಿ ಅವರಿಗೆ ಬೌಲಿಂಗ್ ಮೇಲೆ ಸಂಪೂರ್ಣ ನಿಯಂತ್ರಣವಿರುತ್ತದೆ. ಚೆಂಡನ್ನು ಎರಡೂ ರೀತಿಯಲ್ಲಿ ಸ್ವಿಂಗ್ ಮಾಡುವ ಸಾಮರ್ಥ್ಯವೂ ಅವರಿಗಿದೆ. ಹಾಗಾಗಿ, ಸದ್ಯ ಟೀಂ ಇಂಡಿಯಾದಲ್ಲಿ ಅತ್ಯುತ್ತಮ ಬೌಲರ್ ಎಂದು ಹೊಗಳಿದ್ದಾರೆ.
ಶಮಿ ಕೆಲವು ಸಮಯದಿಂದ ಅತ್ಯುತ್ತಮ ಬೌಲರ್ ಆಗಿ ಪ್ರದರ್ಶನ ತೋರುತ್ತಿದ್ದಾರೆ. ಬುಮ್ರಾ ಅವರಷ್ಟು ವಿಕೆಟ್‌ಗಳನ್ನು ಪಡೆಯದಿರಬಹುದು. ಆದರೆ, ಟೀಂ ಇಂಡಿಯಾದ ಟಾಪ್ ಕ್ಲಾಸ್ ಬೌಲರ್. ತಂಡದ ಉಳಿದ ಆಟಗಾರರಿಗಿಂತ ಹೆಚ್ಚು ಸ್ಥಿರತೆ ಹೊಂದಿದ್ದಾರೆ. ಅವರು ಚೆಂಡನ್ನು ಸ್ವಿಂಗ್ ಮಾಡಬಹುದು ಮತ್ತು ಸೀಮ್ ಮಾಡಬಹುದು. ಅಲ್ಲದೆ, ಬುಮ್ರಾ ಅವರಿಗಿಂತಲೂ ಚೆಂಡನ್ನು ನಿಯಂತ್ರಿಸುವ ಸಾಮರ್ಥ್ಯವಿದೆ ಎಂದು ರಾಬರ್ಟ್ಸ್ ವಿಶ್ಲೇಷಿಸಿದ್ದಾರೆ.
ರಾಬರ್ಟ್ಸ್ 1974-83ರ ನಡುವೆ ವೆಸ್ಟ್ ಇಂಡೀಸ್ ತಂಡವನ್ನು ಪ್ರತಿನಿಧಿಸಿದ್ದರು. ತಮ್ಮ 9 ವರ್ಷಗಳ ವೃತ್ತಿಜೀವನದಲ್ಲಿ ಒಟ್ಟು 47 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. 25.21 ಸರಾಸರಿಯಲ್ಲಿ 202 ವಿಕೆಟ್‌ಗಳನ್ನು ಪಡೆದಿದ್ದಾರೆ.