ಬೆಂಗಳೂರು: ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಅಂಡರ್ಡಾಗ್ಸ್ ಹಣೆಪಟ್ಟಿಯೊಂದಿಗೆ ಕಣಕ್ಕಿಳಿಯಲು ನಮಗೆ ಯಾವುದೇ ಬೇಸರವಿಲ್ಲ ಎಂದು ಯುಪಿ ವಾರಿಯರ್ಸ್ ತಂಡದ ನಾಯಕಿ ಅಲೀಸಾ ಹೀಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಂಡರ್ ಡಾಗ್ಸ್ ಟ್ಯಾಗ್ನಿಂದ ಆರಂಭಿಸಿ ದೊಡ್ಡ ಫ್ರಾಂಚೈಸಿಗಳನ್ನ ನಾಕೌಟ್ ಮಾಡಬಲ್ಲ ನಂಬಿಕೆ ನಮಗಿದೆ, ಸಂತೋಷವಿದೆ ಎಂದು ಹೀಲಿ ತಿಳಿಸಿದ್ದಾರೆ.
ಪಂದ್ಯಾವಳಿಯಲ್ಲಿ ಉತ್ತಮ ಆರಂಭದ ನಿರೀಕ್ಷೆ ಹೊಂದಿರುವ ಯುಪಿ ವಾರಿಯರ್ಸ್ ತಂಡದ ಕುರಿತು ಮಾತನಾಡಿದ ನಾಯಕಿ ಅಲೀಸಾ ಹೀಲಿ, ''ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಸಾಕಷ್ಟು ಸಮತೋಲನ ಹೊಂದಿದೆ. ಚಾಮರಿ ಅಟಪಟ್ಟು ಸೇರ್ಪಡೆ ಬಳಿಕ ಆಡುವ ಹನ್ನೊಂದರ ಆಯ್ಕೆಯ ಬಗ್ಗೆ ಸವಾಲುಗಳು ಇರುವುದು ಸಹಜ. ಆದರೆ ಇಂಥಹ ಸವಾಲುಗಳು ತಂಡಕ್ಕೆ ನಿಜವಾಗಿಯೂ ಉತ್ತಮ ಬೆಳವಣಿಗೆ ಎಂದರು. ನಿಜವಾಗಿಯೂ ಸ್ಪರ್ಧೆಯುದ್ದಕ್ಕೂ ನಮಗೆ ಇದು ಕ್ರಿಯಾತ್ಮಕ ತಂಡವಾಗಿದೆ ಎಂದು ನಾನು ಭಾವಿಸುತ್ತೇನೆ. ನಮ್ಮಲ್ಲಿ ಅನೇಕ ಉತ್ತಮ ಆಟಗಾರರಿದ್ದು, ತಮ್ಮ ತಾಕತ್ತೇನು ಎಂಬುದನ್ನ ಜಗತ್ತಿಗೆ ತೋರಿಸಲು ಕಾಯುತ್ತಿದ್ದಾರೆ ಎಂದು ಹೀಲಿ ಭರವಸೆ ವ್ಯಕ್ತಪಡಿಸಿದರು.
ತಂಡದಲ್ಲಿನ ವಾತಾವರಣದಲ್ಲಿ ಎಲ್ಲರೂ ಆನಂದಮಯವಾಗಿ ಸಮಯವನ್ನು ಕಳೆಯುವುದು ಮುಖ್ಯ ಎಂದು ವಿವರಿಸಿದ ಅವರು "WPLನಲ್ಲಿ ಸಾಕಷ್ಟು ಒತ್ತಡವಿದೆ ಮತ್ತು ಒಟ್ಟಾರೆಯಾಗಿ, ಇದು ಬಹಳಷ್ಟು ಯುವ ಆಟಗಾರರಿಗೆ ಹೊಸ ಅನುಭವವಾಗಿದೆ. ಈ ಗುಂಪಿನಲ್ಲಿ ಕಳೆದ ವರ್ಷ ಬಹಳಷ್ಟು ಆಟಗಾರರು ಪಂದ್ಯಾವಳಿಯನ್ನು ಆನಂದಿಸಿದ್ದಾರೆ ಮತ್ತು ಈ ವರ್ಷ ಸಹ ಅದು ಭಿನ್ನವಾಗಿರುವುದಿಲ್ಲ ಎಂದು ಭಾವಿಸುತ್ತೇನೆ'' ಎಂದರು.