ನ್ಯೂಯಾರ್ಕ್:ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಲು ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡದ ಮೊದಲ ಬ್ಯಾಚ್ ನ್ಯೂಯಾರ್ಕ್ ತಲುಪಿದೆ. ನಾಯಕ ರೋಹಿತ್ ಶರ್ಮಾ, ಮುಖ್ಯ ಕೋಚ್ ರಾಹುಲ್ ದ್ರಾವಿಡ್, ವೇಗಿ ಬುಮ್ರಾ, ಸೂರ್ಯಕುಮಾರ್ ಯಾದವ್ ಸೇರಿದಂತೆ ಇತರ ಆಟಗಾರರು ಶನಿವಾರ ಭಾರತದಿಂದ ವಿಮಾನವೇರಿದ್ದರು.
ತಂಡವು ನ್ಯೂಯಾರ್ಕ್ ತಲುಪಿರುವ ಬಗ್ಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಎಕ್ಸ್ ಖಾತೆಯಲ್ಲಿ ವಿಡಿಯೋದೊಂದಿಗೆ ಪೋಸ್ಟ್ವೊಂದನ್ನು ಹಂಚಿಕೊಂಡಿದೆ. ನ್ಯೂಯಾರ್ಕ್ಗೆ ಬಂದಿಳಿದ ಆಟಗಾರರು, ಬಳಿಕ ಬಸ್ ಮೂಲಕ ನಿಗದಿತ ಸ್ಥಳಕ್ಕೆ ತೆರಳಿದ್ದಾರೆ. ಆಟಗಾರರ ವಿಡಿಯೋವನ್ನು ''ಟಚ್ ಡೌನ್ ನ್ಯೂಯಾರ್ಕ್'' ಎಂದು ಬಿಸಿಸಿಐ ಪೋಸ್ಟ್ ಮಾಡಿದೆ.
ಅಮೆರಿಕ ಹಾಗೂ ವೆಸ್ಟ್ ಇಂಡೀಸ್ ಜಂಟಿಯಾಗಿ ಆಯೋಜಿಸುತ್ತಿರುವ ಟೂರ್ನಿಯು ಜೂನ್ 2ರಂದು ಯುಎಸ್ಎ ಹಾಗೂ ಕೆನಡಾ ನಡುವಿನ ಪಂದ್ಯದೊಂದಿಗೆ ಉದ್ಘಾಟನೆಗೊಳ್ಳಲಿದೆ. ಭಾರತವು ಜೂನ್ 5ರಂದು ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಐರ್ಲೆಂಡ್ ವಿರುದ್ಧ ನಡೆಯಲಿರುವ ಪಂದ್ಯದ ಮೂಲಕ ಚುಟುಕು ವಿಶ್ವಕಪ್ ಅಭಿಯಾನವನ್ನು ಆರಂಭಿಸಲಿದೆ. ಜೂನ್ 9ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ಜೊತೆ ಹಣಾಹಣಿ ಇದೆ. ಅಲ್ಲದೆ, ಟೂರ್ನಿಯ ಎ ಗ್ರೂಪ್ ಪಂದ್ಯಗಳಲ್ಲಿ ಯುಎಸ್ಎ ಹಾಗೂ ಕೆನಡಾ ತಂಡಗಳ ಜೊತೆಗೂ ಭಾರತ ತಂಡ ಸೆಣಸಲಿದೆ.
2013ರ ಚಾಂಪಿಯನ್ಸ್ ಟ್ರೋಫಿ ಬಳಿಕ ಐಸಿಸಿ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗಿರುವ ಟೀಂ ಇಂಡಿಯಾ, ಮತ್ತೊಮ್ಮೆ ಪ್ರಶಸ್ತಿಯ ಕನಸಿನೊಂದಿಗೆ ಕಣಕ್ಕಿಳಿಯಲಿದೆ. ಕಳೆದ ವರ್ಷ 2023ರಲ್ಲಿ ತವರಿನಲ್ಲಿ ನಡೆದ ಏಕದಿನ ವಿಶ್ವಕಪ್ನಲ್ಲಿ ಫೈನಲ್ ತಲುಪಿದ್ದ ರೋಹಿತ್ ಪಡೆ ಆಸ್ಟ್ರೇಲಿಯಾ ವಿರುದ್ಧ ಸೋತು ನಿರಾಸೆ ಮೂಡಿಸಿತ್ತು. ಅಲ್ಲದೆ, ಈ ಹಿಂದೆ 2015 ಮತ್ತು 2019ರ ಏಕದಿನ ವರ್ಲ್ಡ್ಕಪ್ಗಳಲ್ಲಿ ಸೆಮಿಫೈನಲ್, 2021 ಮತ್ತು 2023ರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್, 2014ರಲ್ಲಿ ಟಿ20 ವಿಶ್ವಕಪ್ ಫೈನಲ್, 2016 ಮತ್ತು 2022ರ ಟಿ20 ವಿಶ್ವಕಪ್ನಲ್ಲಿ ಸೆಮಿಫೈನಲ್ಗೇರಿದ್ದರೂ ಸಹ ತಂಡವು ಪ್ರಶಸ್ತಿ ಬರ ನೀಗಿಸುವಲ್ಲಿ ವಿಫಲವಾಗಿದೆ.