ನವದೆಹಲಿ: ಗಾಂಜಾ ಕಳ್ಳಸಾಗಣೆ ಮಾಡುತ್ತಿದ್ದ ಸ್ಟಾರ್ ಫುಟ್ಬಾಲ್ ಆಟಗಾರನನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಆರೋಪಿಯಿಂದ 6 ಕೋಟಿ ರೂ ಮೌಲ್ಯದ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಈ ಘಟನೆ ಬುಧವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಆರ್ಸೆನಲ್ ಕ್ಲಬ್‌ನ ಮಾಜಿ ಫುಟ್‌ಬಾಲ್ ಆಟಗಾರ ಜೇ ಎಮ್ಯಾನುಯೆಲ್ ಥಾಮಸ್ ಮಾದಕ ವಸ್ತು ಕಳ್ಳಸಾಗಣೆ ಆರೋಪದಲ್ಲಿ ಬಂಧನಕ್ಕೊಳಗಾದವರು. ಇಂಗ್ಲೆಂಡ್‌ನ ಸ್ಟಾನ್‌ಸ್ಟೆಡ್ ವಿಮಾನ ನಿಲ್ದಾಣದಿಂದ ಗಾಂಜಾ ಕಳ್ಳಸಾಗಣೆ ಮಾಡಲೆತ್ನಿಸಿದ ಇವರನ್ನು ಸ್ಟಾನ್‌ಸ್ಟೆಡ್ ಏರ್‌ಪೋರ್ಟ್‌ನಲ್ಲಿ ಬಂಧಿಸಲಾಗಿದೆ. ಈ ಆಟಗಾರ ಇತ್ತೀಚೆಗಷ್ಟೇ ಸ್ಕಾಟಿಷ್ ಚಾಂಪಿಯನ್‌ಶಿಪ್ ತಂಡ ಗ್ರೀನಾಕ್ ಮಾರ್ಟನ್ ಸೇರಿಕೊಂಡಿದ್ದರು.
ಎನ್‌ಸಿಎ ಮಾಹಿತಿ ಪ್ರಕಾರ, 28 ಮತ್ತು 32 ವರ್ಷ ವಯಸ್ಸಿನ ಇಬ್ಬರು ಮಹಿಳೆಯರನ್ನೂ ಇದೇ ಪ್ರಕರಣದಲ್ಲಿ ಬಂಧಿಸಲಾಗಿದೆ. ಈ ಇಬ್ಬರು ಮಾದಕವಸ್ತು ಆಮದು ಮಾಡಿಕೊಳ್ಳಲು ಬಂದಿದ್ದರು ಎಂದು ಆರೋಪಿಸಲಾಗಿದೆ. ಸದ್ಯ ಮಹಿಳಾ ಆರೋಪಿಗಳು ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಹಾಜರಾಗಿದ್ದು, ಜಾಮೀನು ನೀಡಲಾಗಿದೆ.
ರಾಷ್ಟ್ರೀಯ ಅಪರಾಧ ಸಂಸ್ಥೆ (ಎನ್‌ಸಿಎ) ಅಂಕಿಅಂಶಗಳ ಪ್ರಕಾರ, ಎರಡು ಸೂಟ್‌ಕೇಸ್‌ಗಳಲ್ಲಿ ಸುಮಾರು 60 ಕೆ.ಜಿ ಮಾದಕವಸ್ತುವನ್ನು ಕಳ್ಳಸಾಗಣೆ ಮಾಡಲಾಗುತ್ತಿತ್ತು. ಬಂಧನಕ್ಕೊಳಗಾದ ನಂತರ, ಎನ್‌ಸಿಎ ಏಜೆಂಟ್‌ಗಳು ಫುಟ್‌ಬಾಲ್ ಆಟಗಾರನ ಮೊಬೈಲ್ ಫೋನ್ ಸೇರಿದಂತೆ ಕೆಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಎಮ್ಯಾನುಯೆಲ್ 2022-23ರಲ್ಲಿ ಜಮ್ಶೆಡ್‌ಪುರ ಫುಟ್‌ಬಾಲ್ ಕ್ಲಬ್‌ಗಾಗಿ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಆಡಿದ್ದಾರೆ. ಇದಕ್ಕೂ ಮೊದಲು 2011ರಿಂದ 2013ರವರೆಗೆ ಇಪ್ಸ್ವಿಚ್ ಟೌನ್ ಮತ್ತು 2013-2015ರಿಂದ ಬ್ರಿಸ್ಟಲ್ ಸಿಟಿ ತಂಡಗಳನ್ನು ಪ್ರತಿನಿಧಿಸಿದ್ದರು. 2008ರಲ್ಲಿ ಆರ್ಸೆನಲ್ ತಂಡದ ಪರ ಆಡುವ ಮೂಲಕ ಫುಟ್ಬಾಲ್ಗೆ ಪದಾರ್ಪಣೆ ಮಾಡಿದ್ದರು.