ಕೊಲಂಬೊ(ಶ್ರೀಲಂಕಾ):ಅವಿಷ್ಕಾ ಫರ್ನಾಂಡೋ ಭರ್ಜರಿ ಬ್ಯಾಟಿಂಗ್, ದುನಿತ್ ವೆಲ್ಲಲಗೆ ಸ್ಪಿನ್ ಜಾದೂಗೆ ಸಿಲುಕಿದ ಭಾರತ, ಶ್ರೀಲಂಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ 110 ರನ್ಗಳ ಸೋಲು ಕಂಡಿತು. ಈ ಮೂಲಕ ಲಂಕಾ ಪಡೆ 3 ಪಂದ್ಯಗಳ ಸರಣಿಯನ್ನು 2-0ಯಿಂದ ವಶಪಡಿಸಿಕೊಂಡಿತು. ಮೊದಲ ಏಕದಿನ ಪಂದ್ಯ ಟೈ ಆಗಿತ್ತು.
ಇಲ್ಲಿನ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಸರಣಿಯ ಮೂರನೇ ಮತ್ತು ಕೊನೆಯ ಏಕದಿನ ಪಂದ್ಯದಲ್ಲಿ ಭಾರತ ಮತ್ತೆ ಬ್ಯಾಟಿಂಗ್ ವೈಫಲ್ಯ ಕಂಡಿತು. ಸ್ಪಿನ್ಗೆ ನೆರವಾಗುತ್ತಿದ್ದ ಪಿಚ್ನಲ್ಲಿ ಭಾರತೀಯ ಬ್ಯಾಟರ್ಗಳು ತರಗಲೆಯಂತೆ ಉದುರಿದರು. ಈ ಮೂಲಕ 27 ವರ್ಷಗಳ ಬಳಿಕ ಅಂದರೆ, 1997ರ ನಂತರ ಲಂಕಾ ನೆಲದಲ್ಲಿ ಏಕದಿನ ಸರಣಿ ಸೋಲಿನ ಮುಖಭಂಗ ಅನುಭವಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ 7 ವಿಕೆಟ್ಗೆ 248 ರನ್ ಗಳಿಸಿತು. ಇದಕ್ಕುತ್ತರವಾಗಿ ಭಾರತ 26.1 ಓವರ್ಗಳಲ್ಲಿ 138 ರನ್ಗೆ ಆಲೌಟ್ ಆಗಿ 110 ರನ್ಗಳಿಂದ ಚರಿತ ಅಸಲಂಕಾ ಪಡೆಯ ಮುಂದೆ ಮಂಡಿಯೂರಿತು.
ಭಾರತದ ಪೆವಿಲಿಯನ್ ಪರೇಡ್:ಮಹೇಶ್ ತೀಕ್ಷಣ, ದುನಿತ್ ವೆಲ್ಲಲಗೆ, ಜೆಫ್ರಿ ವಂಡೆರ್ಸೆ ಸ್ಪಿನ್ ದಾಳಿಗೆ ನಲುಗಿದ ಭಾರತದ ಬ್ಯಾಟರ್ಗಳು ಪೆವಿಲಿಯನ್ ಪರೇಡ್ ನಡೆಸಿದರು. ಆರಂಭಿಕ ಮತ್ತು ತಂಡದ ನಾಯಕ ರೋಹಿತ್ ಶರ್ಮಾ ತುಸು ಹೊತ್ತು ಅಬ್ಬರಿಸಿ 35 ರನ್ ಗಳಿಸಿದರು. ಇದೇ ತಂಡದ ಬ್ಯಾಟರ್ನ ಅಧಿಕ ಮೊತ್ತ. ವಿರಾಟ್ ಕೊಹ್ಲಿ ಮತ್ತೆ ವೈಫಲ್ಯ ಕಂಡ 20, ವಾಷಿಂಗ್ಟನ್ ಸುಂದರ್ ಕೊನೆಯಲ್ಲಿ 30, ರಿಯಾನ್ ಪರಾಗ್ 15 ರನ್ ಗಳಿಸಿದ್ದು ಬಿಟ್ಟರೆ ಉಳಿದೆಲ್ಲಾ ಬ್ಯಾಟರ್ಗಳು ಒಂದಂಕಿಗೆ ವಿಕೆಟ್ ನೀಡಿದರು.