ಮುಂಬೈ:ಇಲ್ಲಿನ ಶರದ್ ಪವಾರ್ ಕ್ರಿಕೆಟ್ ಅಕಾಡೆಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಮುಂಬೈ ಮತ್ತು ಬರೋಡಾ ನಡುವಿನ ಎರಡನೇ ಕ್ವಾರ್ಟರ್ ಫೈನಲ್ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿತು. ಆದರೆ ಈ ಪಂದ್ಯದಲ್ಲಿ ಮುಂಬೈ ತಂಡದ ಇಬ್ಬರು ಬೌಲರ್ಗಳಾದ ತನುಷ್ ಕೋಟ್ಯಾನ್ ಮತ್ತು ತುಷಾರ್ ದೇಶಪಾಂಡೆ ಕ್ರಮವಾಗಿ 10-11ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಶತಕ ಬಾರಿಸಿ ಅಪರೂಪದ ಸಾಧನೆ ಮಾಡಿದ್ದಾರೆ. 78 ವರ್ಷಗಳ ನಂತರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಇಂಥದ್ದೊಂದು ದಾಖಲೆ ಪುನರಾವರ್ತಿಸಿದೆ.
ಬರೋಡಾ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮುಂಬೈ ತನ್ನ ಎರಡನೇ ಇನಿಂಗ್ಸ್‌ನಲ್ಲಿ 337 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡಿತ್ತು. ಇದಾದ ನಂತರ 10 ಮತ್ತು 11ನೇ ಕ್ರಮಾಂಕದಲ್ಲಿ ಕ್ರೀಸ್‌ನಲ್ಲಿದ್ದ ತನುಷ್ ಕೋಟ್ಯಾನ್ ಮತ್ತು ತುಷಾರ್ ದೇಶಪಾಂಡೆ ಜೊತೆಯಾಗಿ ಶತಕ ದಾಖಲಿಸಿದರು. ಈ ಮೂಲಕ ತಮ್ಮ ತಂಡದ ಸ್ಕೋರ್ ಅನ್ನು 569 ರನ್‌ಗಳಿಗೆ ಕೊಂಡೊಯ್ದರು. 10ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ತನುಷ್ 129 ಎಸೆತಗಳಲ್ಲಿ 10 ಬೌಂಡರಿ ಹಾಗೂ 4 ಸಿಕ್ಸರ್‌ಗಳ ನೆರವಿನಿಂದ 120 ರನ್ ಗಳಿಸಿ ಅಜೇಯರಾಗುಳಿದರು. ತುಷಾರ್ 10 ಬೌಂಡರಿ ಮತ್ತು 8 ಸಿಕ್ಸರ್‌ಗಳೊಂದಿಗೆ 123 ರನ್‌ಗಳ ಅದ್ಭುತ ಇನಿಂಗ್ಸ್ ಕಟ್ಟಿದರು.