ಈ ದಿನ ಕ್ರಿಕೆಟ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದ್ದ 'ಸಿಕ್ಸರ್ ಕಿಂಗ್' ಯುವರಾಜ್ ಸಿಂಗ್: ಅದೇನೆಂದು ಗೊತ್ತಾ? - YUVRAJ SINGH ON THIS DAY 2007 - YUVRAJ SINGH ON THIS DAY 2007
2007 ರಂದು ಈ ದಿನ 'ಸಿಕ್ಸರ್ ಕಿಂಗ್' ಯುವರಾಜ್ ಸಿಂಗ್ ಟಿ20 ವಿಶ್ವಕಪ್ ಪಂದ್ಯದಲ್ಲಿ ಯಾರು ಬರೆಯದ ದಾಖಲೆಯೊಂದನ್ನು ಬರೆದಿದ್ದರು. ಇಂದಿಗೂ ಅವರ ಈ ದಾಖಲೆ ಮುರಿಯಲು ಯಾರಿಂದಲೂ ಸಾಧ್ಯವಾಗಿಲ್ಲ. ಯಾವುದು ಆ ದಾಖಲೆ ಎಂದು ಈ ಸುದ್ಧಿಯಲ್ಲಿ ತಿಳಿಯಿರಿ.
ಹೈದರಾಬಾದ್: ಯುವರಾಜ್ ಸಿಂಗ್, ಕ್ರಿಕೆಟ್‌ನಲ್ಲಿ ಈ ಹೆಸರು ಕೇಳದವರು ಯಾರಿಲ್ಲ ಹೇಳಿ. ಭಾರತ ಕ್ರಿಕೆಟ್ ಕಂಡ ಮರೆಯಲಾರದ ಆಟಗಾರ ಯುವಿ. ತಮ್ಮ ಸ್ಫೋಟಕ ಬ್ಯಾಟಿಂಗ್ನಿಂದಲೇ ಎದುರಾಳಿ ತಂಡಗಳಿಗೆ ನಡುಕ ಹುಟ್ಟಿಸುತ್ತಿದ್ದ ಎಡಗೈ ಬ್ಯಾಟರ್ ಬಹಳಷ್ಟು ಪಂದ್ಯಗಳ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
2011ರ ವಿಶ್ವಕಪ್ ವೇಳೆಯೂ ಕ್ಯಾನ್ಸರ್ನೊಂದಿಗೆ ಹೋರಾಡುತ್ತಲೇ ತಂಡದ ಗೆಲುವಿಗೆ ಕಾಣಿಕೆ ನೀಡಿದ್ದರು. ಇಂತಹ ದಿಗ್ಗಜ ಆಟಗಾರ ಸರಿಯಾಗಿ 17 ವರ್ಷಗಳ ಹಿಂದೆ ಕ್ರಿಕೆಟ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದ್ದರು. ಆ ದಾಖಲೆ ಯಾವುದು ಅನ್ನೋದರ ಮಾಹಿತಿಯನ್ನು ತಿಳಿಯೋಣ..
2007 ಸೆಪ್ಟೆಂಬರ್ 19ರಂದು ಟಿ20 ಕ್ರಿಕೆಟ್ ಇತಿಹಾಸದಲ್ಲಿ ಯಾರು ಬರೆಯದ ದಾಖಲೆಯನ್ನು ಯುವಿ ಬರೆದಿದ್ದರು. ಹೌದು, ಇಂಗ್ಲೆಂಡ್‌ನ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್ ಬೌಲಿಂಗ್ ವೇಳೆ ಒಂದೇ ಓವರ್‌ನಲ್ಲಿ ಮಾಜಿ ಆಲ್‌ರೌಂಡರ್ ಯುವಿ ಸತತ ಆರು ಸಿಕ್ಸರ್‌ಗಳನ್ನು ಬಾರಿಸಿದ್ದರು. ದಕ್ಷಿಣ ಆಫ್ರಿಕಾದ ಡರ್ಬನ್‌ನಲ್ಲಿ ನಡೆದ ಚೊಚ್ಚಲ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಇದರೊಂದಿಗೆ ಟಿ20 ವಿಶ್ವಕಪ್‌ನಲ್ಲಿ ಆರು ಸಿಕ್ಸರ್‌ಗಳನ್ನು ಸಿಡಿಸಿದ ಏಕೈಕ ಆಟಗಾರ ಮತ್ತು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ಬ್ಯಾಟರ್ ಎಂಬ ದಾಖಲೆ ಬರೆದಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹರ್ಷಲ್ ಗಿಬ್ಸ್ ನಂತರ ಈ ಸಾಧನೆ ಮಾಡಿದ ಎರಡನೇ ಆಟಗಾರ ಎನಿಸಿಕೊಂಡರು.
ಈ ಪಂದ್ಯದಲ್ಲಿ, ಯುವರಾಜ್ 16.4 ಓವರ್ ವೇಳೆಗೆ ಬ್ಯಾಟಿಂಗ್‌ಗೆ ಬಂದಿದ್ದರು. ಮೊದಲ ಆರು ಎಸೆತಗಳಲ್ಲಿ ಮೂರು ಬೌಂಡರಿಗಳನ್ನು ಬಾರಿಸುವ ಮೂಲಕ ಉತ್ತಮ ಆರಂಭವನ್ನು ಪಡೆದುಕೊಂಡಿದ್ದರು. ಈ ವೇಳೆ ಇಂಗ್ಲೆಂಡ್‌ನ ಆಲ್‌ರೌಂಡರ್ ಆಂಡ್ರ್ಯೂ ಫ್ಲಿಂಟಾಫ್ ಮತ್ತು ಯುವಿ ನಡುವೆ ಮಾತಿನ ಚಕಮಕಿ ನಡೆದಿತ್ತು. ಇದರಿಂದ ಕೆರಳಿದ ಯುವಿ ಮುಂದಿನ ಎಸೆತಗಳಿಲ್ಲಿ ಇತಿಹಾಸವನ್ನ ಸೃಷ್ಟಿ ಮಾಡಿದ್ದರು.
18ನೇ ಓವರರ್ನಲ್ಲಿ ಸ್ಟುವರ್ಟ್ ಬ್ರಾಡ್ ಎಸೆತದ ವೇಳೆ ರೌದ್ರಾವತಾರ ತಾಳಿದ ಯುವಿ ಓವರ್ ಒಂದರಲ್ಲೇ 6 ಸಿಕ್ಸ್ರಗಳನ್ನು ಸಿಡಿಸಿ ಮಿಂಚಿದ್ದರು. ಅಲ್ಲದೇ ಈ ಪಂದ್ಯದಲ್ಲಿ ಕೇವಲ 16 ಎಸೆತಗಳಲ್ಲಿ 58 ರನ್ಗಳನ್ನು ಚಚ್ಚಿ ಪೆವಿಲಿಯನ್ ಸೇರಿದ್ದರು. ಇದರಿಂದಾಗಿ ಭಾರತ ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 218 ರನ್ಗಳನ್ನು ಕಲೆಹಾಕಿತ್ತು. ಭಾರತ ಈ ಪಂದ್ಯವನ್ನು 18 ರನ್‌ಗಳಿಂದ ಗೆದ್ದುಕೊಂಡಿತ್ತು. ತಮ್ಮ ಅದ್ಭುತ ಇನ್ನಿಂಗ್ಸ್‌ಗಾಗಿ ಯುವರಾಜ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ದರು. ಇದರೊಂದಿಗೆ ಟಿ20 ವಿಶ್ವಕಪ್‌ನಲ್ಲಿ ಅತಿ ವೇಗದ ಅರ್ಧಶತಕ ಬಾರಿಸಿದ ದಾಖಲೆಯೂ ಯುವಿ ಹೆಸರಲಿದ್ದು ಇದನ್ನು ಮುರಿಯಲು ಇದೂವರೆಗೂ ಯಾರಿಂದಲೂ ಸಾಧ್ಯವಾಗಿಲ್ಲ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಂದೇ ಓವರ್‌ನಲ್ಲಿ ಆರು ಸಿಕ್ಸರ್ ಸಿಡಿಸಿದ ಕ್ರಿಕೆಟಿಗರ ಪಟ್ಟಿ
ಸಂಖ್ಯೆ
ಆಟಗಾರ
ತಂಡ
ವಿರುದ್ಧ
ಟೂರ್ನಮೆಂಟ್
1
ಹರ್ಷಲ್ ಗಿಬ್ಸ್
ದಕ್ಷಿಣ ಆಫ್ರಕಾ
ನೆದರ್ಲೆಂಡ್
ಏಕದಿನ ವಿಶ್ವಕಪ್ (2007)
2
ಯುವರಾಜ್
ಭಾರತ
ಇಂಗ್ಲೆಂಡ್
ಟಿ20 ವಿಶ್ವಕಪ್ (2007)
3
ಕಿರನ್ ಪೊಲಾರ್ಡ್
ವೆಸ್ಟ್ಇಂಡೀಸ್
ಶ್ರೀಲಂಕಾ
ಟಿ20 ಸರಣಿ (2021)
4
ಜಸ್ಕರನ್ ಮಲ್ಹೋತ್ರಾ
ಯುಎಸ್ಎ
ಪಪುವ ನ್ಯೂಗಿನಿಯಾ
ಏಕದಿನ ಸರಣಿ (2021)
5
ದೀಪೇಂದ್ರ ಸಿಂಗ್ ಐರಿ
ನೇಪಾಳ
ಕತಾರ್
ಎಸಿಸಿ ಪುರುಷರ ಪ್ರೀಮಿಯರ್ ಕಪ್ 2024
6
ಡೇರಿಯಸ್ ವಿಸರ್
ಸಮೋವಾ
ವನವಾಟು
T20 ವಿಶ್ವಕಪ್ ಪೂರ್ವ ಏಷ್ಯಾ-ಪೆಸಿಫಿಕ್ ವಲಯದ ಅರ್ಹತಾ ಪಂದ್ಯ