ಹೈದರಾಬಾದ್:ಏಕದಿನ ಕ್ರಿಕೆಟ್ನಲ್ಲಿ ಬ್ಯಾಟರ್ಗಳು ಶತಕ ಬಾರಿಸುವುದನ್ನು ನಾವೆಲ್ಲ ನೋಡಿದ್ದೇವೆ. ಆದರೆ, ಅಪರೂಪಕ್ಕೆ ಒಮ್ಮೆ ಎಂಬಂತೆ ಕೆಲವೊಮ್ಮೆ ದ್ವಿಶತಕಗಳು ಕಂಡು ಬರುತ್ತವೆ. ಆದರೆ ಇದೂ ಕೂಡ ತೀರಾ ಅಪರೂಪ. ಈ ಸ್ವರೂಪದಲ್ಲಿ ದ್ವಿಶತಕ ಬಾರಿಸುವುದು ಎಂದರೇ ಸುಲಭದ ಮಾತಲ್ಲ. ಕೆಲವೇ ಕೆಲ ಬ್ಯಾಟರ್ಗಳು ಮಾತ್ರ ಈ ಸಾಧನೆ ಮಾಡಿದ್ದಾರೆ.
ಆದರೇ ಇಲ್ಲೊಬ್ಬ ಮಹಿಳಾ ಕ್ರಿಕೆಟರ್ ಏಕದಿನ ಸ್ವರೂಪದಲ್ಲಿ ಒಂದಲ್ಲ, ಎರಡಲ್ಲೂ, ತ್ರಿಶತಕ ಸಿಡಿಸಿ ವಿಶ್ವದಾಖಲೆ ಬರೆದಿದ್ದಾರೆ. ಹೌದು, ಬೆಂಗಳೂರಿನಲ್ಲಿ ನಡೆದಿದ್ದ ಅಂಡರ್ - 19 ಮಹಿಳಾ ಏಕದಿನ ಪಂದ್ಯಾವಳಿಯಲ್ಲಿ ಮುಂಬೈ - ಮೇಘಾಲಯ ತಂಡಗಳ ಮುಖಾಮುಖಿಯಾಗಿದ್ದವು. ಈ ವೇಳೆ ಮುಂಬೈ ಪರ ಕಣಕ್ಕಿಳಿದಿದ್ದ 14 ವರ್ಷದ ಇರಾ ಜಾಧವ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ತೋರಿ ತ್ರಿಶತಕ ಬಾರಿಸಿದ್ದಾರೆ. ಮೈದಾನಲ್ಲಿ ಬೌಂಡರಿಗಳ ಸುರಿಮಳೆಯನ್ನೇ ಹರಿಸಿದ್ದಾರೆ.
ಈ ಪಂದ್ಯದಲ್ಲಿ 157 ಎಸೆತಗಳನ್ನು ಎದುರಿಸಿದ ಇರಾ ಅಜೇಯವಾಗಿ 346 ರನ್ ಚಚ್ಚಿದರು. ಇದರಲ್ಲಿ 42 ಬೌಂಡರಿ ಮತ್ತು 16 ಸಿಕ್ಸರ್‌ಗಳನ್ನು ಬಾರಿಸಿದರು. ಈ ಯುವ ಪ್ಲೇಯರ್ 220 ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದರು. ಅಲ್ಲದೇ ಕೇವಲ 138 ಎಸೆತಗಳಲ್ಲಿ ತಮ್ಮ ತ್ರಿಶತಕ ಪೂರ್ಣಗೊಳಿಸಿದರು. ಇದರೊಂದಿಗೆ, ಇರಾ ಜಾಧವ್ ಅಂಡರ್-19 ಏಕದಿನ ಟ್ರೋಫಿಯಲ್ಲಿ ತ್ರಿಶತಕ ಸಿಡಿಸಿದ ಮೊದಲ ಭಾರತೀಯ ಬ್ಯಾಟರ್ ಆಗಿ ವಿಶ್ವದಾಖಲೆ ಬರೆದರು.