Jasprit Bumrah: ಭಾರತದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಪರೂಪದ ದಾಖಲೆ ಬರೆದಿದ್ದಾರೆ. ಅವರು ಟೆಸ್ಟ್‌ನಲ್ಲಿ ಅತ್ಯಂತ ವೇಗವಾಗಿ 200 ವಿಕೆಟ್‌ಗಳ ಮೈಲಿಗಲ್ಲನ್ನು ತಲುಪಿದ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ. ವಿಶ್ವದ ಒಟ್ಟಾರೆ ನಾಲ್ಕನೇ ಬೌಲರ್ ಆಗಿದ್ದಾರೆ.
ಆಸ್ಟ್ರೇಲಿಯಾ ಮತ್ತು ಭಾರತ (AUS vs IND) ನಡುವಿನ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ನಾಲ್ಕನೇ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಟ್ರಾವಿಸ್ ಹೆಡ್ ವಿಕೆಟ್ ಉರುಳಿಸುತ್ತಿದ್ದಂತೆ ಬುಮ್ರಾ ಈ ಸಾಧನೆ ಮಾಡಿದರು. ತಮ್ಮ ವೃತ್ತಿಜೀವನದ 44ನೇ ಟೆಸ್ಟ್ ಆಡುತ್ತಿರುವ ಬುಮ್ರಾ ಕೇವಲ 8,484 ಎಸೆತಗಳಲ್ಲಿ 200+ ವಿಕೆಟ್‌ಗಳ ಗಡಿಯನ್ನು ತಲುಪಿದರು.
ಈ ಪಟ್ಟಿಯಲ್ಲಿ ಪಾಕಿಸ್ತಾನದ ಮಾಜಿ ವೇಗಿ ವಕಾರ್ ಯೂನಿಸ್ ಅಗ್ರ ಸ್ಥಾನದಲ್ಲಿದ್ದಾರೆ. ಅವರು 7,725 ಎಸೆತಗಳಲ್ಲಿ 200 ವಿಕೆಟ್ ಪಡೆದು ಅಗ್ರಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ವೇಗಿ ಡೇಲ್ ಸ್ಟೇಯ್ನ್ (7,848) ಮತ್ತು ಕಗಿಸೊ ರಬಾಡ (8,153) ನಂತರದ ಸ್ಥಾನದಲ್ಲಿದ್ದಾರೆ. ಆದರೆ ಕಡಿಮೆ ಪಂದ್ಯಗಳಲ್ಲಿ 200 ವಿಕೆಟ್ ಪಡೆದ ಭಾರತೀಯರಲ್ಲಿ ಸ್ಪಿನ್ನರ್ ಆರ್. ಅಶ್ವಿನ್ (37 ಪಂದ್ಯ) ಮೊದಲ ಸ್ಥಾನದಲ್ಲಿದ್ದಾರೆ.
32 ವರ್ಷದ ಹಳೆಯ ದಾಖಲೆ ಬ್ರೇಕ್;ಇದೇ ಪಂದ್ಯದಲ್ಲಿ ಯಾವೊಬ್ಬ ಭಾರತೀಯರು ಮಾಡದ ಸಾಧನೆಯೊಂದನ್ನು ಬುಮ್ರಾ ಮಾಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯದ ನಾಲ್ಕನೇ ದಿನದಂದು ಬುಮ್ರಾ ಮಾಜಿ ಲೆಜೆಂಡರಿ ಆಟಗಾರ ಕಪಿಲ್ ದೇವ್ ಅವರ ದಾಖಲೆ ಮುರಿದಿದ್ದಾರೆ. ಮೇಲ್ಬೋರ್ನ್ನಲ್ಲಿ ನಡೆಯುತ್ತಿರುವ ಈ ಪಂದ್ಯದ ಎರಡನೇ ಇನ್ನಿಂಗ್ಸ್ನ ಆರಂಭದಲ್ಲಿ ಸ್ಯಾಮ್ ಕಾನ್ಸ್ಟಾಸ್ ಅವರ ವಿಕೆಟ್ ಪಡೆಯುತ್ತಿದ್ದಂತೆ ಅವರ ಹೆಸರು ದಾಖಲೆ ಪುಟಕ್ಕೆ ಸೇರಿತು.
ಸಧ್ಯ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಬುಮ್ರಾ 29 ವಿಕೆಟ್ ಪಡೆದಿದ್ದಾರೆ. ಅಲ್ಲದೇ ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ವೇಗದ ಬೌಲರ್ ಎನಿಸಿಕೊಂಡಿದ್ದಾರೆ. ಈ ಹಿಂದೆ 1991-92ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕಪಿಲ್ ದೇವ್ ಅವರು 10 ಇನ್ನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿ ಒಟ್ಟು 25 ವಿಕೆಟ್ ಪಡೆದಿದ್ದರು.
ಬುಮ್ರಾ ಪ್ರಸ್ತುತ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಸದ್ಯ ಇವರ ಹತ್ತಿರಕ್ಕೂ ಯಾವುದೇ ಬೌಲರ್ ಇಲ್ಲದಿರುವ ಕಾರಣ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಸರಣಿಯನ್ನು ಕೊನೆಗೊಳಿಸುವ ಸಾಧ್ಯತೆ ಇದೆ.
ಇದನ್ನೂ ಓದಿ:ರ‍್ಯಾಪಿಡ್ ಚೆಸ್ನಲ್ಲಿ ಭಾರತಕ್ಕೆ ಮತ್ತೊಂದು ಕಿರೀಟ: 37 ವರ್ಷದ ಕೊನೇರು ಹಂಪಿ ವಿಶ್ವ ಚಾಂಪಿಯನ್