ಮುಂಬೈ(ಮಹಾರಾಷ್ಟ್ರ):ಆರಂಭದ ಸತತ ಮೂರು ಪಂದ್ಯಗಳನ್ನು ಸೋತು ಕಂಗೆಟ್ಟಿದ್ದ ಮುಂಬೈ ಇಂಡಿಯನ್ಸ್ ತಂಡ ಇಂದು ಡೆಲ್ಲಿ ಕ್ಯಾಪಿಟಲ್ ವಿರುದ್ಧ ಗೆಲುವಿನ ಖಾತೆ ತೆರೆಯಿತು. 17ನೇ ಆವೃತ್ತಿಯಲ್ಲಿ ತಂಡದ ಹೊಸ ನಾಯಕ ಹಾರ್ದಿಕ್ ಪಾಂಡ್ಯ ಅವರಿಗೆ ಇದು ಮೊದಲ ಜಯದ ಸಿಂಚನ. ಡೆಲ್ಲಿ ಪರ 25 ಎಸೆತಗಳಲ್ಲಿ ಬ್ಯಾಟರ್ ಟ್ರಿಸ್ಟಾನ್ ಸ್ಟಬ್ಸ್ 71 ರನ್ ಸಿಡಿಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.
ವಾಂಖೆಡೆ ಸ್ಟೇಡಿಯಂನಲ್ಲಿ ಐಪಿಎಲ್ನ 20ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲ ಬ್ಯಾಟಿಂಗ್ ಇಳಿದಿದ್ದ ಮುಂಬೈ 5 ವಿಕೆಟ್ ನಷ್ಟಕ್ಕೆ 234 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಈ ಗುರಿ ಬೆನ್ನಟ್ಟಿದ ರಿಷಭ್ ಪಂತ್ ನೇತೃತ್ವದ ಡೆಲ್ಲಿ ತಂಡ ನಿಗದಿತ 20 ಓವರ್‌ಗಳಲ್ಲಿ 205 ರನ್ಗಳನ್ನು ಕಲೆ ಹಾಕಲು ಮಾತ್ರ ಸಾಧ್ಯವಾಯಿತು. ಇದರಿಂದಾಗಿ 29 ರನ್ಗಳಿಂದ ಸೋಲು ಅನುಭವಿಸಿತು.
ಡೆಲ್ಲಿ ಪರ ಪೃಥ್ವಿ ಶಾ ಮತ್ತು ಡೇವಿಡ್ ವಾರ್ನರ್ ಇನಿಂಗ್ಸ್ ಆರಂಭಿಸಿದರು. ಈ ಜೋಡಿ ತಂಡಕ್ಕೆ ಭದ್ರ ಅಡಿಪಾಯ ಹಾಕುವಲ್ಲಿ ವಿಫಲವಾಯಿತು. ವಾರ್ನರ್ ಕೇವಲ 10 ರನ್ ಕಲೆ ಹಾಕಿ ನಿರ್ಗಮಿಸಿದರು. ಈ ವೇಳೆ, ಪೃಥ್ವಿ ಮತ್ತು ಅಭಿಷೇಕ್ ಪೊರೆಲ್ ಉತ್ತಮ ಇನಿಂಗ್ಸ್ ಕಟ್ಟಿದರು. ಆದರೆ, 66 ರನ್ ಗಳಿಸಿ ಪೃಥ್ವಿ ವಿಕೆಟ್ ಒಪ್ಪಿಸಿದರು. ಈ ಮೂಲಕ ಎರಡನೇ ವಿಕೆಟ್ಗೆ 88 ರನ್ ಜತೆಯಾಟ ನೀಡಿದ ಈ ಜೋಡಿ ಬೇರ್ಪಟ್ಟಿತ್ತು. 40 ಎಸೆತಗಳನ್ನು ಎದುರಿಸಿದ ಪೃಥ್ವಿ ಶಾ ಇನಿಂಗ್ಸ್ನಲ್ಲಿ ಮೂರು ಸಿಕ್ಸರ್, ಎಂಟು ಬೌಂಡರಿಗಳು ಮೂಡಿಬಂದವು.
ಇದಾದ ಸ್ವಲ್ಪ ಹೊತ್ತಿನಲ್ಲೇ 41 ರನ್ ಗಳಿಸಿ ಅಭಿಷೇಕ್ ಪೊರೆಲ್ ವಿಕೆಟ್ ಒಪ್ಪಿಸಿದರು. ಈ ವೇಳೆ, ಡೆಲ್ಲಿ ತಂಡದ ಗೆಲುವಿಗೆ 30 ಎಸೆತಗಳಲ್ಲಿ 91 ರನ್‌ಗಳ ಅವಶ್ಯತೆ ಇತ್ತು. ಇದು ಮುಂಬೈ ತಂಡ ಇನಿಂಗ್ಸ್ನಲ್ಲಿ ಕೊನೆಯ ಐದು ಓವರ್ಗಳಿಗೆ ಬಾರಿಸಿದ ಮೊತ್ತವಾಗಿತ್ತು. ಆದರೆ, ಈ ಹಂತದಲ್ಲಿ ಟ್ರಿಸ್ಟಾನ್ ಸ್ಟಬ್ಸ್ ಹೊರತುಪಡಿಸಿ, ಡೆಲ್ಲಿಯ ಯಾವ ಬ್ಯಾಟರ್ನಿಂದಲೂ ನಿರೀಕ್ಷಿತ ರನ್ ಹರಿದು ಬರಲಿಲ್ಲ.
ನಾಯಕ ರಿಷಭ್ ಪಂತ್ (1), ಅಕ್ಷರ್ ಪಟೇಲ್ (8), ಲಲಿತ್ ಯಾದವ್ (3), ಕುಮಾರ್ ಕುಶಗ್ರಾ (0), ಜೇ ರಿಚರ್ಡ್ಸನ್ 2 ರನ್ಗೆ ಸೀಮಿತವಾದರು. ಮತ್ತೊಂದೆಡೆ, ಟ್ರಿಸ್ಟಾನ್ ಸ್ಟಬ್ಸ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರೂ ಗೆಲುವು ದಕ್ಕಲಿಲ್ಲ. 25 ಬಾಲ್ಗಳಲ್ಲಿ ಏಳು ಸಿಕ್ಸರ್, ಮೂರು ಬೌಂಡರಿಗಳ ಸಮೇತವಾಗಿ 71 ರನ್ ಸಿಡಿದ ಅಜೇಯರಾಗಿ ಉಳಿದರು. ಅಂತಿಮವಾಗಿ ಮುಂಬೈ ತಂಡ ಗೆಲುವಿನ ನಗೆ ಬೀರಿತು.
ಜೆರಾಲ್ಡ್ ಕೋಟ್ಜಿ ನಾಲ್ಕು ವಿಕೆಟ್ ಪಡೆದು ಮಿಂಚಿದರೆ, ಜಸ್ಪ್ರೀತ್ ಬುಮ್ರಾ ಎರಡು ವಿಕೆಟ್, ರೊಮಾರಿಯೋ ಶೆಫರ್ಡ್ ಒಂದು ವಿಕೆಟ್ ವಿಕೆಟ್ ಪಡೆದರು.