ಅಥೆನ್ಸ್/ಬೆಂಗಳೂರು:ಕ್ರೀಡೆಗಳ ಬಗ್ಗೆ ಹೆಚ್ಚಿನ ಆಸಕ್ತಿ ಇಲ್ಲದವರನ್ನೂ ಒಲಿಂಪಿಕ್ಸ್ ಕೈಬೀಸಿ ಕರೆಯುತ್ತದೆ. ಅದುವೇ ಒಲಿಂಪಿಕ್ಸ್ ಮಾಯೆ. ಪ್ಯಾರಿಸ್ ಒಲಿಂಪಿಕ್ಸ್ ಆರಂಭವಾಗಿದ್ದು, ಇಂದು ಅಧಿಕೃತವಾಗಿ ಆರಂಭಗೊಳ್ಳಲಿದೆ. ಈ ಕ್ರೀಡೋತ್ಸವವನ್ನು ಕಣ್ತುಂಬಿಕೊಳ್ಳಲು ಇಡೀ ಪ್ರಪಂಚವೇ ಕಾದು ಕುಳಿತಿದೆ. ಹಾಗಾದರೆ, ಈ ಒಲಿಂಪಿಕ್ಸ್ ಸಂಪ್ರದಾಯಗಳ ಮೂಲ ಮತ್ತು ಇತಿಹಾಸದ ಬಗ್ಗೆ ನಿಮಗೆ ಗೊತ್ತಾ? ಜಗತ್ತಿನ ಪ್ರಮುಖ ಕ್ರೀಡಾಕೂಟಗಳಲ್ಲಿ ಒಂದಾಗಿರುವ ಈ ಕೂಟಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಕ್ರೀಡೋತ್ಸವ ಆಯೋಜನೆ ಮಾಡಿಕೊಂಡು ಬರಲಾಗುತ್ತಿದೆ. ಆರಂಭದ ದಿನಗಳಲ್ಲಿ ಒಲಿಂಪಿಕ್ಸ್ ಹೇಗಿತ್ತು, ಈಗ ಹೇಗಿದೆ, ಆದ ಬದಲಾವಣೆಗಳೇನು, ಯಾವ ಯಾವ ದೇಶಗಳು ಎಷ್ಟು ಸಾಧನೆ ಮಾಡಿವೆ ಎಂಬುದರ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಮೊದಲ ಒಲಿಂಪಿಕ್ಸ್: ಆಧುನಿಕ ಪ್ರಪಂಚದ ಮೊದಲ ಒಲಿಂಪಿಕ್ಸ್ ಅಥೆನ್ಸ್‌ನಲ್ಲಿ 1896ರಲ್ಲಿ ನಡೆಯಿತು. 14 ದೇಶಗಳ 241 ಕ್ರೀಡಾಪಟುಗಳು 43 ಕ್ರೀಡೆಗಳಲ್ಲಿ ಭಾಗವಹಿಸಿದ್ದರು. ಆದರೆ, ಮಹಿಳೆಯರಿಗೆ ಪ್ರತ್ಯೇಕ ಕ್ರೀಡಾ ವಿಭಾಗ ಇಲ್ಲದ ಕಾರಣ ಈ ಒಲಿಂಪಿಕ್ಸ್‌ನಲ್ಲಿ ಒಬ್ಬ ಮಹಿಳೆಯೂ ಭಾಗವಹಿಸಿರಲಿಲ್ಲ. ಈ ಒಲಿಂಪಿಕ್ಸ್‌ನಲ್ಲಿ ಗ್ರೀಸ್ ಅತ್ಯಧಿಕ ಪದಕಗಳನ್ನು ಗೆಲ್ಲುವ ಮೂಲಕ ದಾಖಲೆ ಬರೆಯಿತು. ಮ್ಯಾರಥಾನ್ ಓಟ ಗ್ರೀಕ್ನ ಸಂಸ್ಕೃತಿ ಮತ್ತು ಪರಂಪರೆಯ ಅವಿಭಾಜ್ಯ ಅಂಗವಾಗಿದ್ದರಿಂದ ಆಧುನಿಕ ಜಗತ್ತಿನ ಮೊದಲ ಒಲಿಂಪಿಕ್ಸ್‌ನ ಮ್ಯಾರಥಾನ್ ಪ್ರಶಸ್ತಿಯನ್ನು ಗೆಲ್ಲುವುದು ಈ ದೇಶದ ಕನಸಾಗಿತ್ತು. ಹಾಗಾಗಿ ಬೇರೆ ಯಾವುದೇ ಕ್ರೀಡೆಯ ಫಲಿತಾಂಶ ಏನೇ ಇರಲಿ, ಮ್ಯಾರಥಾನ್‌ನಲ್ಲಿ ಮಾತ್ರ ತನ್ನ ಕ್ರೀಡಾಪಟು ಮ್ಯಾರಥಾನ್ ಸ್ಪರ್ಧೆಯಲ್ಲಿ ಗೆಲ್ಲಬೇಕೆಂದು ಈ ದೇಶದ ಪ್ರತಿಯೊಬ್ಬರ ಬಯಕೆಯಾಗಿತ್ತು ಅನ್ನೋದು ಗಮನಾರ್ಹ.
ಸ್ಪಿರಿಡಾನ್ ಲೂಯಿಸ್: ಈತ ಗ್ರೀಕ್ ಓಟಗಾರ. 1896ರಲ್ಲಿ ಅಥೆನ್ಸ್‌ನಲ್ಲಿ ನಡೆದ ಮೊದಲ ಆಧುನಿಕ ಒಲಿಂಪಿಕ್ ಮ್ಯಾರಥಾನ್‌ನಲ್ಲಿ ಚಿನ್ನದ ಪದಕ ಗೆದ್ದು ದಾಖಲೆ ಬರೆದರು. ಜೊತೆಗೆ ದೇಶದ ಯುವಕರಿಗೆ ಹೊಸ ಉತ್ಸಾಹ ಕೂಡ ತುಂಬಿದವರು. ಕ್ರೀಡೆಯಲ್ಲಿ ಹೊಸ ಬಗೆಯ ರುಚಿ ತೋರಿಸಿದ ಸ್ಪಿರಿಡಾನ್ ಲೂಯಿಸ್, ಸ್ಪರ್ಧೆಗೂ ಮುನ್ನ ತಮ್ಮದೇ ಆದ ಸಿದ್ಧತೆ ಹೊಂದಿದ್ದರು ಅನ್ನೋದು ಆಸಕ್ತಿದಾಯಕ ವಿಚಾರಗಳಲ್ಲಿ ಒಂದು. ರನ್ನಿಂಗ್ ಟ್ರ್ಯಾಕ್‌ಗೆ ಇಳಿಯುವ ಹಿಂದಿನ ದಿನ ಉಪವಾಸ ಮಾಡುತ್ತಿದ್ದ ಲೂಯಿಸ್, ರಾತ್ರಿಯಿಡೀ ಏಕಾಗ್ರತೆಗಾಗಿ ಧ್ಯಾನ ಮತ್ತು ಪ್ರಾರ್ಥನೆಯ ಮೊರೆ ಹೋಗುತ್ತಿದ್ದರು. ಬೆಳಿಗ್ಗೆ ಅದೇ ಖಾಲಿ ಹೊಟ್ಟೆಯೊಂದಿಗೆ ರೇಸ್ ಟ್ರ್ಯಾಕ್‌ಗೆ ಇಳಿಯುತ್ತಿದ್ದರು. ಅಂದು ಇದನ್ನೇ ಮಾಡಿದ್ದ ಲೂಯಿಸ್ 26 ಮೈಲು ಓಡಿ ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಹಾಗಾಗಿ ಇವರನ್ನು ಆಧುನಿಕ ಕ್ರೀಡೆಯು ಮಾಂತ್ರಿಕ ಎಂದೂ ಕರೆಯುತ್ತಾರೆ.
ಇತಿಹಾಸ:ಒಲಿಂಪಿಕ್ ಕ್ರೀಡಾಕೂಟದ ಮೂಲ ಗ್ರೀಸ್ ದೇಶ. ಸುಮಾರು ಕ್ರಿ.ಪೂ. 776ರಲ್ಲಿ ಗ್ರೀಸ್‌ನ ಒಲಿಂಪಿಯಾದಲ್ಲಿ ಮೊದಲ ಬಾರಿಗೆ ಒಲಿಂಪಿಕ್ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಮೂರ್ನಾಲ್ಕು ಶತಮಾನದವರೆಗೆ ಈ ಕೂಟವನ್ನು ಆಯೋಜಿಸಲಾಗುತ್ತಿತ್ತು. ಬಳಿಕ ಕ್ರಮೇಣ ನಿಂತುಹೋದ ಒಲಿಂಪಿಕ್‌ಗೆ ಚಾಲನೆ ಸಿಕ್ಕಿದ್ದು 1859ರಲ್ಲಿ. ಇವಾಂಜೆಲಾಸ್ ಝಪ್ಪಾಸ್ ಎಂಬಾತ ಪ್ರಪ್ರಥಮ ಅಂತಾರಾಷ್ಟ್ರೀಯ ಒಲಿಂಪಿಕ್ ಕ್ರೀಡಾಕೂಟವನ್ನು ಪ್ರಾಯೋಜಿಸಿದನು. ಬಳಿಕ 1894ರಲ್ಲಿ ಫ್ರಾನ್ಸ್‌ನ ಫ್ರಾನ್ಸ್‌ನ ಪಿಯರೆ ಡಿ ಕ್ಯುಬರ್ತಿನ್ ಎಂಬುವವನು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯನ್ನು ಹುಟ್ಟುಹಾಕಿದರು. ಅದಾದ ಬಳಿಕ 1896ರಲ್ಲಿ ಪ್ರಥಮ ಬಾರಿಗೆ ಗ್ರೀಸ್‌ನ ಈಗಿನ ರಾಜಧಾನಿ ಅಥೆನ್ಸ್ ನಗರದಲ್ಲಿ ಬೇಸಿಗೆ ಒಲಿಂಪಿಕ್ ಕ್ರೀಡಾಕೂಟ ಆಯೋಜಿಸಲಾಯಿತು. ಇದುವೇ ಮೊದಲ ಆಧುನಿಕ ಒಲಿಂಪಿಕ್ ಕ್ರೀಡಾಕೂಟ.
1900ರ ಪ್ಯಾರಿಸ್ ಒಲಿಂಪಿಕ್ಸ್:ಈ ಒಲಿಂಪಿಕ್ಸ್ ಕ್ರೀಡಾಕೂಟಲ್ಲಿ ಇತಿಹಾಸದ ಮೊದಲ ಬಾರಿಗೆ ಮಹಿಳೆಯರಿಗೆ ಅವಕಾಶ ಮಾಡಿಕೊಡಲಾಯಿತು. 19 ಸ್ಪರ್ಧೆಗಳಲ್ಲಿ 997 ಮಂದಿ ಈ ಜಾಗತಿಕ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಪ್ಯಾರಿಸ್ ನಾವಿಕೆ ಹೆಲೆನ್ ಡಿ ಪೌರ್ಟಾಲ್ಸ್ ಮೊದಲ ಮಹಿಳಾ ಒಲಿಂಪಿಕ್ ಚಾಂಪಿಯನ್ ಆಗಿ ಗುರುತಿಸಿಕೊಂಡಿದ್ದರು.
ಕೋಲ್ಕತ್ತಾದಲ್ಲಿ ಬ್ರಿಟಿಷ್ ದಂಪತಿಗೆ ಜನಿಸಿದ ಭಾರತೀಯ ನಾರ್ಮನ್ ಪ್ರಿಚರ್ಡ್ ಎಂಬುವರು 1900ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಮೂಲಕ ಗಮನ ಸೆಳೆದರು. ಈ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ ಕೇವಲ ಒಬ್ಬ ಪ್ರತಿನಿಧಿಯನ್ನು ಹೊಂದಿತ್ತು ಎನ್ನುವುದು ಅಚ್ಚರಿಯಾದರೂ ಸತ್ಯ. ಹಾಗಾಗಿ ಭಾರತವಷ್ಟೇ ಅಲ್ಲ, ‘ಏಷ್ಯಾದ ಮೊದಲ ಒಲಿಂಪಿಕ್ ಅಥ್ಲೀಟ್’ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಅವರು 200 ಮೀಟರ್ ಓಟ ಮತ್ತು 200 ಮೀಟರ್ ಹರ್ಡಲ್ಸ್ನಲ್ಲಿ ಮೊದಲ ಬಾರಿ ಬೆಳ್ಳಿ ಪದಕಗಳನ್ನು ಗೆದ್ದು ಇತಿಹಾಸ ಬರೆದವರು. ಒಲಿಂಪಿಕ್ ದಾಖಲೆಗಳಲ್ಲಿ ಭಾರತಕ್ಕೆ ಸಲ್ಲುವ ಮೊದಲ ಪದಕಗಳು ಇವಾಗಿವೆ. ಇವರು ನಟ ಕೂಡ ಆಗಿದ್ದರು.
1904ರಲ್ಲಿ ಸೈಂಟ್ ಲೂಯೀಸ್, 1908ರಲ್ಲಿ ಲಂಡನ್ ಈ ಜಾಗತಿಕ ಕ್ರೀಡೋತ್ಸವ ನಡೆದವು. ಈ ಅವದಿ ಕೂಡ ಹಲವು ಆಸಕ್ತಿದಾಯಕ ಸಂಗತಿಗಳಿಗೆ ಸಾಕ್ಷಿಯಾಗಿದೆ.
1912ರ ಸ್ಟಾಕ್‌ಹೋಮ್: 1912ರ ಸ್ಟಾಕ್ಹೋಮ್ನಲ್ಲಿ ನಡೆದ ಜಾಗತಿಕ ಕ್ರೀಡಾ ಜಾತ್ರೆಯಲ್ಲಿ ಪ್ರಸಿದ್ಧ ಅಮೆರಿಕನ್ ಅಥ್ಲೀಟ್ ಜಿಮ್ ಥೋರ್ಪ್ ಚಿನ್ನದ ಪದಕ ವಿಜೇತರಾಗಿ ಹೊರಹೊಮ್ಮಿದರು. ಥೋರ್ಪ್ ಯುನೈಟೆಡ್ ಸ್ಟೇಟ್ಗಾಗಿ ಚಿನ್ನದ ಪದಕ ಗೆದ್ದ ಮೊದಲ ಸ್ಥಳೀಯ ಅಮೆರಿಕನ್ ಎನಿಸಿಕೊಂಡರು. ಆಧುನಿಕ ಕ್ರೀಡೆಗಳ ಬಹುಮುಖ ಕ್ರೀಡಾಪಟುಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ಅವರು 1912ರ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಎರಡು ಒಲಿಂಪಿಕ್ ಚಿನ್ನದ ಪದಕಗಳನ್ನು ಗೆದ್ದರು. (ಒಂದು ಕ್ಲಾಸಿಕ್ ಪೆಂಟಾಥ್ಲಾನ್‌ನಲ್ಲಿ ಮತ್ತು ಇನ್ನೊಂದು ಡೆಕಾಥ್ಲಾನ್‌ನಲ್ಲಿ ). ಅವರು ಫುಟ್‌ಬಾಲ್ (ಕಾಲೇಜು ಮತ್ತು ವೃತ್ತಿಪರ), ವೃತ್ತಿಪರ ಬೇಸ್‌ಬಾಲ್ ಮತ್ತು ವೃತ್ತಿಪರ ಬಾಸ್ಕೆಟ್‌ಬಾಲ್ ಅನ್ನು ಸಹ ಆಡಿದರು. ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವ ಮೊದಲು ಅರೆ-ವೃತ್ತಿಪರ ಬೇಸ್‌ಬಾಲ್‌ನ ಎರಡು ಸೀಸನ್‌ಗಳನ್ನು ಆಡಿದ್ದಕ್ಕಾಗಿ ಹಣ ಪಡೆದಿರುವುದು ಕಂಡುಬಂದಿದ್ದರಿಂದ ಅವರು ತಮ್ಮ ಒಲಿಂಪಿಕ್ ಪ್ರಶಸ್ತಿಗಳನ್ನು ಕಳೆದುಕೊಳ್ಳಬೇಕಾಯಿತು. ಆಗ ಜಾರಿಯಲ್ಲಿದ್ದ ಹವ್ಯಾಸಿ ನಿಯಮಗಳನ್ನು ಉಲ್ಲಂಘಿಸಿರುವ ಆರೋಪ ಇವರ ಮೇಲಿತ್ತು. 1983 ರಲ್ಲಿ, ಅವರ ಮರಣದ 30 ವರ್ಷಗಳ ನಂತರ, ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯು (IOC) ಅವರ ಒಲಿಂಪಿಕ್ ಪದಕಗಳನ್ನು ಪ್ರತಿಕೃತಿಗಳೊಂದಿಗೆ ಮರುಸ್ಥಾಪಿಸುವ ಮೂಲಕ ಗೌರವ ಸಲ್ಲಿಸಲಾಯಿತು.
ಜರ್ಮನಿಯ ಬರ್ಲಿನ್‌ನಲ್ಲಿ ನಡೆಯಬೇಕಿದ್ದ 1916ರ ಒಲಿಂಪಿಕ್ಸ್ ಮೊದಲ ಮಹಾಯುದ್ಧದ ಕಾರಣದಿಂದ ರದ್ದು ಮಾಡಯಿತು. 1920ರಲ್ಲಿ, ಬುಡಾಪೆಸ್ಟ್ (ಹಂಗೇರಿ)ನಲ್ಲಿ ನಂತರದ ಒಲಿಂಪಿಕ್ಸ್ ನಡೆಯಬೇಕಿತ್ತು. ಜಾಗತಿಕ ಯುದ್ಧದ ಕಾರಣದಿಂದ ಅದನ್ನು ಸಹ ರದ್ದುಗೊಳಿಸಲಾಯಿತು. 1920ರ ಒಲಂಪಿಕ್ಸ್ ಅನ್ನು ಆಂಟ್ವರ್ಪ್ನಲ್ಲಿ ನಡೆಸಲಾಯಿತು.
1924ರ ಪ್ಯಾರಿಸ್:ಈ ಕ್ರೀಡಾ ಜಾತ್ರೆಯಲ್ಲಿ ಫಿನ್ನಿಷ್ ಟ್ರ್ಯಾಕ್ ಅಥ್ಲೀಟ್ ಆಗಿದ್ದ ಪಾವೊ ನೂರ್ಮಿ ಅವರು ಓಟದಲ್ಲಿ (long-distance running) ತಮ್ಮದೇಯಾದ ಸಾಧನೆ ಮಾಡಿದ್ದರಿಂದ ಫ್ಲೈಯಿಂಗ್ ಫಿನ್ ಎಂದು ಕರೆಸಿಕೊಂಡರು. ಅವರು ಮೂರು ಒಲಿಂಪಿಕ್ ಕ್ರೀಡಾಕೂಟಗಳಲ್ಲಿ (1920, 1924, ಮತ್ತು 1928) ಒಂಬತ್ತು ಚಿನ್ನದ ಪದಕಗಳನ್ನು ಮತ್ತು ಮೂರು ಬೆಳ್ಳಿಗಳನ್ನು ತಮ್ಮದಾಗಿಸಿಕೊಂಡರು. ಸತತ ಎಂಟು ವರ್ಷಗಳ ಕಾಲ 4 ನಿಮಿಷ 10.4 ಸೆಕೆಂಡ್ನಲ್ಲಿ ತಮ್ಮ ಗುರಿ ತಲುಪಿ ವಿಶ್ವ ದಾಖಲೆ ಬರೆದರು. ತಮ್ಮ ವೃತ್ತಿಜೀವನದಲ್ಲಿ ಒಟ್ಟು 25 ವಿಶ್ವ ದಾಖಲೆಗಳನ್ನು ಬರೆದ ಶ್ರೇಯಸ್ಸು ಅವರದ್ದಾಗಿದೆ. 12ನೇ ವಯಸ್ಸಿನಲ್ಲಿ ಶಾಲೆಯನ್ನು ತೊರೆದ ಪಾವೊ, ಹ್ಯಾನ್ಸ್ ಕೊಲೆಹ್ಮೈನೆನ್ ಅವರ ಒಲಿಂಪಿಕ್ ಸಾಹಸಗಳಿಂದ ಸ್ಫೂರ್ತಿ ಪಡೆದರು. ಕಟ್ಟುನಿಟ್ಟಾದ ತರಬೇತಿ ಮೂಲಕ ಕ್ರೀಡೆಗೆ ಇಳಿದರು. ಅಭ್ಯಾಸ ಮಾಡುತ್ತಿದ್ದಾಗ ಯಾವತ್ತೂ ಅವರ ಬಳಿ ಗಡಿಯಾರ ಇರುತ್ತಿತ್ತು.
1928ರ ಆಮ್‌ಸ್ಟರ್‌ಡ್ಯಾಮ್:ಆಮ್‌ಸ್ಟರ್‌ಡ್ಯಾಮ್ 1928 ಬೇಸಿಗೆ ಕ್ರೀಡಾಕೂಟದಲ್ಲಿ ಭಾರತದ ಹಾಕಿ ತಂಡವು ಮೊದಲ ಬಾರಿ ಚಿನ್ನ ಗೆದ್ದುಕೊಂಡಿತು. ಇದು ಭಾರತೀಯ ಹಾಕಿ ತಂಡದ ಚೊಚ್ಚಲ ಒಲಿಂಪಿಕ್ ಕೂಡ ಆಗಿತ್ತು. 1928ರಲ್ಲಿ ಲಾಸ್ ಏಂಜಲೀಸ್‌ನಲ್ಲಿ ನಡೆದ ಕ್ರೀಡಾ ಜಾತ್ರೆಯಲ್ಲಿಯೂ ಭಾರತೀಯ ಹಾಕಿ ತಂಡ ತನ್ನ ವಿಜಯದ ಯಾತ್ರೆಯನ್ನು ಮುಂದುವರೆಸಿತು. ಇಲ್ಲಿ ಕೂಡ ಭಾರತದ ಹಾಕಿ ತಂಡ ಗೆದ್ದು ಜಾಗತಿಕ ಇತಿಹಾಸ ಬರೆಯಿತು. ಭಾರತ ತಂಡ ಜಪಾನ್ ತಂಡವನ್ನು 11-1 ಅಂತರದಿಂದ ಸೋಲಿಸಿದರೆ, ಅಮೆರಿಕ ತಂಡವನ್ನು 24-1 ಅಂತರದಿಂದ ಸೋಲಿಸಿತು. ಇದು ಇಂದಿಗೂ ದಾಖಲೆಯಾಗಿಯೇ ಉಳಿದಿದೆ.
1936ರ ಬರ್ಲಿನ್ ಒಲಿಂಪಿಕ್ಸ್:ಇದು ಹಿಟ್ಲರ್ ಇದ್ದ ಕಾಲ. 1936ರ ಬರ್ಲಿನ್ ಜಾಗತಿಕ ಕ್ರೀಡೋತ್ಸವಗಳು ಇದೇ ಹಿಟ್ಲರ್ ಮುಂದೆ ನಡೆದವು. ಬಿಳಿ ಜನಾಂಗವೇ ಶ್ರೇಷ್ಠ ಎಂಬ ಘೋಷಣೆಯೊಂದಿಗೆ ಚಾಲನೆಗೆ ನೀಡಲಾಗಿತ್ತು. ಜರ್ಮನ್ ದೇಶದ ನಾಜಿ ಮುಖವಾಣಿ ಪತ್ರಿಕೆಗಳಲ್ಲಿ ಕರಿಯರನ್ನು 'ಮಂಗಗಳು' ಎಂದು ಅವಹೇಳನ ಮಾಡಿ ಬರೆಯಲಾಗಿತ್ತು. ಅಧಿಕಾರಿಗಳ ಉದಾಸೀನತೆ ಹಾಗೂ ರೆಫರಿಗಳ ಕುತಂತ್ರಗಳ ನಡುವೆಯೂ ಅಮೆರಿಕದ ಕಪ್ಪು ವರ್ಣೀಯ ಅಥ್ಲೀಟ್ ಜೆನ್ಸಿ ಓವೆನ್ಸ್ ಎಂಬುವರು ನಾಲ್ಕು ಚಿನ್ನ ಗೆದ್ದು ಕರಿಯರ ಪರ ಹೋರಾಡಿದ್ದು ಆಸಕ್ತಿದಾಯಕ ಸಂಗತಿಗಳಲ್ಲಿ ಒಂದು. ಅದೊಂದು ಯಾವತ್ತೂ ಮರೆಯಲಾಗದ ಘಟನೆ. ಒಲಿಂಪಿಕ್ ಸ್ನೇಹದ ಇತಿಹಾಸದಲ್ಲಿ ಇದು ಮರೆಯಲಾಗದ ನೆನಪು ಕೂಡ ಹೌದು. ಜರ್ಮನಿಯ ಅಥ್ಲೀಟ್ ಲುಜ್ ಲಾಂಗ್ ಎಂಬುವರು ಇದೇ ಒಲಿಂಪಿಕ್ಸ್‌ನಲ್ಲಿ ಜೆಸ್ಸಿ ಓವನ್‌ಗೆ ಸಹಾಯ ಹಸ್ತ ಚಾಚಿದ್ದರು. ಈ ಒಲಿಂಪಿಕ್ಸ್ ಸಮಯದಲ್ಲಿ ಹಿಟ್ಲರ್ ಭಾರತೀಯ ಹಾಕಿ ಮಾಂತ್ರಿಕ ಧ್ಯಾನ್ ಚಂದ್ ಅವರನ್ನು ಜರ್ಮನ್ ಸೈನ್ಯಕ್ಕೆ ಕಾರ್ಪೋರಲ್ ಆಗಿ ಸೇರಲು ಆಹ್ವಾನಿಸಿದ್ದರು ಎಂಬ ಮಾತನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
1940ರ ಒಲಿಂಪಿಕ್ಸ್ ಟೋಕಿಯೊದಲ್ಲಿ ನಡೆಯಬೇಕಿತ್ತು. ಆದರೆ, ಜಪಾನ್ ದೇಶ ಯುದ್ಧದಲ್ಲಿ ಪಾಲ್ಗೊಂಡಿದ್ದ ಕಾರಣ ಒಲಿಂಪಿಕ್ಸ್ ಹೊಣೆಗಾರಿಕೆಯನ್ನು ಸ್ಥಳಾಂತರಿಸಿತು. ಈ ಒಲಿಂಪಿಕ್ಸ್ ಅನ್ನು ಹೆಲ್ಸಿಂಕಿಯಲ್ಲಿ ನಡೆಸಲು ನಿರ್ಧರಿಸಲಾಯಿತು. ಆದರೆ, ಅಷ್ಟರಲ್ಲಿ ಎರಡನೇ ಮಹಾಯುದ್ಧ ಕೂಡ ಶುರುವಾಗಿತ್ತು.