ಪ್ಯಾರಿಸ್ (ಫ್ರಾನ್ಸ್): ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024ರಲ್ಲಿ ಭಾರತ ಪದಕ ಖಾತೆಯನ್ನು ತೆರೆದಿದೆ. ಒಂದೇ ಈವೆಂಟ್ನಲ್ಲಿ ಚಿನ್ನ ಮತ್ತು ಕಂಚು ಪದಕಗಳನ್ನು ಗೆಲ್ಲುವ ಮೂಲಕ ಪ್ಯಾರಾ ಮಹಿಳಾ ಶೂಟರ್ಗಳು ವಿಶೇಷ ಸಾಧನೆ ಮಾಡಿದ್ದಾರೆ. ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್‌ಎಚ್1 ವಿಭಾಗದ ಫೈನಲ್ ಪಂದ್ಯದಲ್ಲಿ ಭಾರತದ ಸ್ಟಾರ್ ಪ್ಯಾರಾ ಶೂಟರ್ ಅವನಿ ಲೆಖರಾ ಚಿನ್ನದ ಪದಕ ಗೆದ್ದರೇ, ಮೋನಾ ಅಗರ್ವಾಲ್ ಕಂಚಿನ ಪದಕಕ್ಕೆ ಕೊರಳೊಡಿದ್ದಾರೆ.
ಇದಕ್ಕೂ ಮುನ್ನ ಅರ್ಹತಾ ಸುತ್ತಿನಲ್ಲಿ ಅವ್ನಿ ಲೇಖರಾ ಉತ್ತಮ ಪ್ರದರ್ಶನ ನೀಡಿ ಫೈನಲ್‌ಗೆ ಪ್ರವೇಶ ಪಡೆದಿದ್ದರು. ಅವನಿ ಅರ್ಹತಾ ಸುತ್ತಿನಲ್ಲಿ 625.8 ಅಂಕಗಳೊಂದಿಗೆ ಎರಡನೇ ಸ್ಥಾನ ಗಳಿಸಿದ್ದರು. ಆದರೆ ಕೇವಲ 0.2 ಅಂಕಗಳಿಂದ ಪ್ಯಾರಾಲಿಂಪಿಕ್ ದಾಖಲೆಯನ್ನು ತಪ್ಪಿಸಿಕೊಂಡರು. ಮೋನಾ ಅರ್ಹತಾ ಸುತ್ತಿನಲ್ಲಿ ಐದನೇ ಸ್ಥಾನ ಪಡೆದಿದ್ದರು.