ICC Champions Trophy 2025:ಮುಂದಿನ ವರ್ಷ ಪಾಕಿಸ್ತಾನ ಆತಿಥ್ಯ ವಹಿಸಿಕೊಂಡಿರುವ ಚಾಂಪಿಯನ್ಸ್ ಟ್ರೋಫಿ-2025ಕ್ಕೆ ಸಂಬಂಧಿಸಿದಂತೆ ಇಂದು ದೊಡ್ಡ ಅಪ್‌ಡೇಟ್ ಹೊರಬಿದ್ದಿದೆ. ಈ ಪಂದ್ಯಾವಳಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲಾಗುತ್ತದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಖಚಿತಪಡಿಸಿದೆ.
ಮುಂದಿನ ವರ್ಷ ಫೆಬ್ರವರಿ-ಮಾರ್ಚ್‌ನಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ಭಾರತ ತಂಡದ ಪಂದ್ಯಗಳನ್ನು ಪಾಕಿಸ್ತಾನದ ಬದಲು ತಟಸ್ಥ ಸ್ಥಳದಲ್ಲಿ ನಡೆಸಲಾಗುತ್ತದೆ ಎಂದು ಐಸಿಸಿ ತಿಳಿಸಿದೆ. ಐಸಿಸಿಯೊಂದಿಗಿನ ಎಲ್ಲಾ ಕ್ರಿಕೆಟ್ ಮಂಡಳಿಗಳ ಸಭೆಯ ನಂತರ ಹೈಬ್ರಿಡ್ ಮಾದರಿಗೆ ಐಸಿಸಿ ಒಪ್ಪಿಗೆ ನೀಡಿದೆ. ಆದಾಗ್ಯೂ, ಈ ಟೂರ್ನಿಯ ಹೋಸ್ಟಿಂಗ್ ಹಕ್ಕು ಸಂಪೂರ್ಣವಾಗಿ ಪಾಕಿಸ್ತಾನಕ್ಕೆ ಇರಲಿದೆ.
ಭದ್ರತಾ ದೃಷ್ಟಿಯಿಂದಾಗಿ ಚಾಂಪಿಯನ್ಸ್ ಟ್ರೋಫಿ ಆಡಲು ಪಾಕಿಸ್ತಾನಕ್ಕೆ ತೆರಳುವುದಿಲ್ಲ. ಅಲ್ಲದೇ ಭಾರತದ ಪಂದ್ಯಗಳನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸುವಂತೆ ಬಿಸಿಸಿಐ ತಿಳಿಸಿತ್ತು. ಇದಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಆರಂಭದಿಂದಲೂ ಒಪ್ಪಿಗೆ ಸೂಚಿಸಲು ಹಿಂದೇಟು ಹಾಕಿತ್ತು. ಹೈಬ್ರಿಡ್ ಮಾದರಿಗೂ ವಿರೋಧ ವ್ಯಕ್ತಪಡಿಸಿತ್ತು. ಹೈಬ್ರಿಡ್ ಮಾದರಿಗೆ ಒಪ್ಪದಿದ್ದರೆ ಟೂರ್ನಿಯಲ್ಲೂ ಭಾಗಿಯಾಗಲ್ಲ ಎಂದು ಭಾರತ ಖಡಕ್ ಪ್ರತಿಕ್ರಿಯೆ ನೀಡಿತ್ತು. ಈ ಎಲ್ಲಾ ಚರ್ಚೆಗಳ ನಂತರ ಅಂತಿಮವಾಗಿ ಹೈಬ್ರಿಡ್ ಮಾದರಿಗೆ ಐಸಿಸಿ ಗ್ರೀನ್ ಸಿಗ್ನಲ್ ಕೊಟ್ಟಿದೆ. ಇನ್ನು ಶೀಘ್ರದಲ್ಲೇ ಪಂದ್ಯಗಳ ವೇಳಾಪಟ್ಟಿ ಪ್ರಕಟವಾಗಲಿದೆ.
ಈ ಈವೆಂಟ್‌ನಲ್ಲಿ ಆತಿಥೇಯ ಪಾಕಿಸ್ತಾನದ ಜೊತೆಗೆ ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ಭಾರತ, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಸೇರಿ 8 ತಂಡಗಳು ಭಾಗವಹಿಸಲಿವೆ.