ಹೈದರಾಬಾದ್:ಮುಂಬರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಆಯೋಜನೆಯು ಪಾಕಿಸ್ತಾನಕ್ಕೆ ಕಗ್ಗಂಟಾಗಿದೆ. ಭದ್ರತೆ, ರಾಜಕೀಯ ಕಾರಣಗಳಿಗಾಗಿ ಭಾರತ ಪಾಕ್ ಪ್ರವಾಸ್ ಕೈಗೊಳ್ಳಲು ಹಿಂದೇಟು ಹಾಕಿದೆ. ಟೂರ್ನಿ ಕೈತಪ್ಪಿದರೆ ಆ ದೇಶಕ್ಕೆ 65 ಮಿಲಿಯನ್ ಡಾಲರ್ (54 ಕೋಟಿ ರೂ.) ನಷ್ಟವಾಗುವ ಸಾಧ್ಯತೆ ಇದೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಬಿಕ್ಕಟ್ಟಿನಿಂದಾಗಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಪಾಕಿಸ್ತಾನದಿಂದ ಸ್ಥಳಾಂತರ ಅಥವಾ ಮುಂದೂಡುವ ಸಾಧ್ಯತೆ ಇದೆ. ಇದರಿಂದ ಇಸ್ಲಾಂ ರಾಷ್ಟ್ರವು ಮತ್ತೊಂದು ಪ್ರತಿಷ್ಟಿತ ಟೂರ್ನಿಯ ಆಯೋಜನೆಯಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ.
ಪಾಕಿಸ್ತಾನಕ್ಕೆ ಪ್ರವಾಸ ಕೈಗೊಳ್ಳುವುದಿಲ್ಲ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ (ಐಸಿಸಿ) ತಿಳಿಸಿದೆ. ಟೂರ್ನಿಗಾಗಿಯೇ ಮೀಸಲಿಟ್ಟ ಕರಾಚಿ, ರಾವಲ್ಪಿಂಡಿ ಮತ್ತು ಲಾಹೋರ್ ಕ್ರೀಡಾಂಗಣಗಳಿಗೆ ಮೂಲಸೌಕರ್ಯಗಳನ್ನು ನವೀಕರಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಹೂಡಿಕೆ ಮಾಡಿದೆ. ಹಾಗೊಂದು ವೇಳೆ ಟೂರ್ನಿ ಇಲ್ಲಿಂದ ಎತ್ತಂಗಡಿಯಾದಲ್ಲಿ ಭಾರೀ ನಷ್ಟಕ್ಕೀಡಾಗಲಿದೆ ಎಂದು ವರದಿಯಾಗಿದೆ.
1996 ರ ಬಳಿಕ ಪಾಕಿಸ್ತಾನವು ಐಸಿಸಿ ಟೂರ್ನಿಯನ್ನು ಆಯೋಜಿಸುತ್ತಿದೆ. ಆ ವರ್ಷ ಏಕದಿನ ವಿಶ್ವಕಪ್‌ನ ಸಹ ಆತಿಥ್ಯ ವಹಿಸಿತ್ತು. ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ಟೂರ್ನಿ ಆಡಿಸಲು ಸಿದ್ಧತೆ ನಡೆಸಿದೆ. ಆದರೆ, ಭಾರತ ಕ್ರಿಕೆಟ್ ತಂಡವು ಪ್ರವಾಸ ಕೈಗೊಳ್ಳಲು ನಿರಾಕರಿಸಿದ್ದು ಮತ್ತು ಪಾಕಿಸ್ತಾನವೂ ಚಾಂಪಿಯನ್ಸ್ ಟ್ರೋಫಿಯನ್ನು ಹೈಬ್ರಿಡ್ ಮಾದರಿಯನ್ನು ಆಡಿಸಲು ಒಪ್ಪದೇ ಇರುವುದು ಪಂದ್ಯಾವಳಿಯ ಆತಿಥ್ಯದ ಮೇಲೆ ಕರಿನೆರಳು ಬಿದ್ದಿದೆ.
ಚಾಂಪಿಯನ್ಸ್ ಟ್ರೋಫಿಯಿಂದಲೇ ಹಿಂದೆ ಸರಿಯುವಂತೆ ಪಾಕಿಸ್ತಾನ ಸರ್ಕಾರ ಪಿಸಿಬಿಗೆ ನಿರ್ದೇಶನ ನೀಡಿದ್ದಾಗಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಒಂದು ವೇಳೆ, ಭಾರತವೂ ಟೂರ್ನಿಯಲ್ಲಿ ಆಡದೇ ಹೋದಲ್ಲಿ ಪ್ರಸಾರಕರು ಮತ್ತು ಪ್ರಾಯೋಜಕತ್ವದ ಸಮಸ್ಯೆ ಎದುರಾಗಲಿದೆ. ಇದರಿಂದ ಸಹಜವಾಗಿ ಐಸಿಸಿ ಟೂರ್ನಿಯನ್ನು ಮುಂದೂಡುವ ಬಗ್ಗೆ ಚಿಂತನೆ ನಡೆಸಬಹುದು.
ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯು ಪಾಕಿಸ್ತಾನದಲ್ಲಿ ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ನಡೆಸುವ ಬಗ್ಗೆ ಯೋಜಿಸಲಾಗಿದೆ. ಈವರೆಗೂ ಪಂದ್ಯಗಳ ವೇಳಾಪಟ್ಟಿ ಬಿಡುಗಡೆ ಮಾಡಿಲ್ಲ.
ಇದನ್ನೂ ಓದಿ:ಚಾಂಪಿಯನ್ಸ್ ಟ್ರೋಫಿಯಿಂದ ಹಿಂದೆ ಸರಿಯಿತೇ ಪಾಕಿಸ್ತಾನ!: ಮುಂದೇನು?