ಕರ್ನಾಟಕ

karnataka

ETV Bharat / sports

ಅಮೆರಿಕನ್​ ಕ್ರಿಕೆಟ್​ ಬೆಳವಣಿಗೆಗೆ ಬಿಸಿಸಿಐ ನೆರವು ಬೇಕಿದೆ: ಎಸಿಬಿ ಅಧ್ಯಕ್ಷ ವೇಣು ವಿಶೇಷ ಸಂದರ್ಶನ - America Cricket Chairman Venu - AMERICA CRICKET CHAIRMAN VENU

ಅಮೆರಿಕ ಮೊದಲ ಬಾರಿಗೆ ಐಸಿಸಿ ಟಿ20 ವಿಶ್ವಕಪ್​ ಟೂರ್ನಿಯನ್ನು ಆಯೋಜನೆ ಮಾಡಿದೆ. ಇದರ ಹಿಂದೆ ಭಾರತ ಮೂಲದ ವ್ಯಕ್ತಿಯೊಬ್ಬರು ಇದ್ದಾರೆ. ಆ ದೇಶದ ಕ್ರಿಕೆಟ್​ ಮಂಡಳಿಯ ಅಧ್ಯಕ್ಷರೂ ಹೌದು. ಅವರು ಅಮೆರಿಕನ್​ ಕ್ರಿಕೆಟ್​ ಬಗ್ಗೆ 'ಈಟಿವಿ ಭಾರತ'ದ ಜೊತೆ ಮನದಿಂಗಿತ ಹಂಚಿಕೊಂಡಿರುವುದು ಹೀಗಿದೆ.

ಎಸಿಬಿ ಅಧ್ಯಕ್ಷ ವೇಣು ವಿಶೇಷ ಸಂದರ್ಶನ
ಎಸಿಬಿ ಅಧ್ಯಕ್ಷ ವೇಣು ವಿಶೇಷ ಸಂದರ್ಶನ (ETV Bharat)

By ETV Bharat Karnataka Team

Published : May 29, 2024, 4:17 PM IST

ಹೈದರಾಬಾದ್:ಅಮೆರಿಕನ್​ ಕ್ರೀಡೆ ಎಂದಾಕ್ಷಣ ತಕ್ಷಣಕ್ಕೆ ನೆನಪಿಗೆ ಬರುವುದು ಫುಟ್ಬಾಲ್, ಬಾಸ್ಕೆಟ್ ಬಾಲ್, ಬೇಸ್​ಬಾಲ್. ಆದರೆ, ಈಗ ಕ್ರಿಕೆಟ್ ಜ್ವರ ಕೂಡ ದೇಶವನ್ನು ಆವರಿಸಿದೆ. ಇತ್ತೀಚೆಗಷ್ಟೇ ಅಮೆರಿಕದ ಕ್ರಿಕೆಟ್ ತಂಡ ಬಾಂಗ್ಲಾದೇಶ ವಿರುದ್ಧ ಐತಿಹಾಸಿಕ ಸರಣಿ ಗೆಲುವು ಸಾಧಿಸಿದೆ. ಅಷ್ಟೇ ಅಲ್ಲ, 2024 ರ ಟಿ20 ವಿಶ್ವಕಪ್​ ಅನ್ನು ವೆಸ್ಟ್ ಇಂಡೀಸ್ ಸಹಭಾಗಿತ್ವದಲ್ಲಿ ತನ್ನ ನೆಲದಲ್ಲಿ ಆಯೋಜಿಸಿದೆ.

ದೇಶದಲ್ಲಿ ಕ್ರಿಕೆಟ್​ ಕೂಡ ಖ್ಯಾತಿ ಪಡೆಯುತ್ತಿದೆ ಎಂಬುದಕ್ಕೆ ಇದೇ ಸಾಕ್ಷಿ. ಅಮೆರಿಕದ ಕ್ರಿಕೆಟ್​ ಮಂಡಳಿಗೆ ಭಾರತೀಯ ಮೂಲದ ಪಿಸಿಕೆ ಮೂಲದ ವೇಣು ಅಧ್ಯಕ್ಷರಾಗಿದ್ದಾರೆ. ವಿಶ್ವದ ಹಿರಿಯಣ್ಣನ ಖ್ಯಾತಿಯ ದೇಶದಲ್ಲಿ ಕ್ರಿಕೆಟ್​ ಬೆಳವಣಿಗೆಗೆ ಅವರು ಶ್ರಮಿಸುತ್ತಿದ್ದಾರೆ. ಆಂಧ್ರಪ್ರದೇಶದ ನಲ್ಗೊಂಡದವರಾದ ವೇಣು ಅವರು ಸದ್ಯ ಜಾರ್ಜಿಯಾದಲ್ಲಿ ನೆಲೆಸಿದ್ದಾರೆ. ಅಲ್ಲಿನ ಕ್ರಿಕೆಟ್​ ಮತ್ತು ವಿಶ್ವಕಪ್​ ಸಿದ್ಧತೆಯ ಬಗ್ಗೆ ಅವರು 'ಈಟಿವಿ ಭಾರತ್' ಜೊತೆ ಮುಕ್ತವಾಗಿ ಮಾತನಾಡಿದ್ದಾರೆ.

ಬಾಂಗ್ಲಾದೇಶದ ವಿರುದ್ಧ ಅಮೆರಿಕ ತಂಡ ಐತಿಹಾಸಿಕ ಟಿ20 ಸರಣಿ ಗೆಲುವಿನ ಬಗ್ಗೆ ಏನೆನ್ನಿಸುತ್ತದೆ?

ಉತ್ತರ:ಈ ಯಶಸ್ಸನ್ನು ನಿರೀಕ್ಷಿಸಿರಲಿಲ್ಲ. ನಾವು ಉತ್ತಮ ತಂಡವನ್ನು ಹೊಂದಿದ್ದೇವೆ. ಆಟಗಾರರು ಕಠಿಣ ಪರಿಶ್ರಮ ಪಡುತ್ತಿದ್ದಾರೆ. ತಂಡದ ಸಂಯೋಜನೆಯೂ ಉತ್ತಮವಾಗಿದೆ. ಇದಕ್ಕೂ ಮೊದಲು ಕೆನಡಾ ವಿರುದ್ಧವೂ ಸರಣಿಯನ್ನು 4-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿದ್ದೆವು. ಆದರೆ, ವಿಶ್ವಕಪ್​ಗೂ ಮುನ್ನ ಬಾಂಗ್ಲಾದೇಶ ವಿರುದ್ಧ ಸರಣಿ ಗೆದ್ದಿರುವುದು ಆತ್ಮವಿಶ್ವಾಸ ಹೆಚ್ಚಿಸಿದೆ. ದೇಶದಲ್ಲಿ ಕ್ರಿಕೆಟ್ ಬೆಳೆಸಲು ಇದು ಸಹಾಯಕವಾಗಲಿದೆ.

ತಂಡದಲ್ಲಿ ಭಾರತೀಯ ಮೂಲದ ಆಟಗಾರರೇ ಹೆಚ್ಚಿದ್ದಾರಲ್ಲ, ತಂಡದ ಆಯ್ಕೆ ಹೇಗಾಗುತ್ತದೆ?

ಉತ್ತರ:ಅಮೆರಿಕ ತಂಡದಲ್ಲಿರುವ ಹೆಚ್ಚಿನ ಕ್ರಿಕೆಟ್ ಆಟಗಾರರು ಭಾರತೀಯ ಮೂಲದವರು. ನಮ್ಮವರು ಕ್ರಿಕೆಟ್ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಹೀಗಾಗಿಯೇ ಹೆಚ್ಚಿದ್ದಾರೆ. ಆಸಕ್ತಿ, ಕೌಶಲ್ಯಗಳೂ ಅತ್ಯುತ್ತಮವಾಗಿವೆ. ಇನ್ನು, ತಂಡದ ಆಯ್ಕೆಯ ಮಾನದಂಡಗಳು ಎಲ್ಲರಿಗೂ ಒಂದೇ. ಉತ್ತಮ ಪ್ರತಿಭೆ ಮತ್ತು ಆಟದ ವೈಖರಿಯಿಂದ ಸ್ಥಾನ ಪಡೆಯುತ್ತಾರೆ.

ಟಿ-20 ವಿಶ್ವಕಪ್ ಸಿದ್ಧತೆ ಹೇಗಿದೆ?

ಉತ್ತರ:ಮೊದಲ ಬಾರಿಗೆ ಅಮೆರಿಕ ಪ್ರತಿಷ್ಠಿತ ಟಿ20 ವಿಶ್ವಕಪ್‌ಗೆ ಆತಿಥ್ಯ ವಹಿಸಿದೆ. ವ್ಯವಸ್ಥೆಗಳು ಉತ್ತಮವಾಗಿ ಮಾಡಲಾಗಿದೆ. ವಿವಿಧ ದೇಶಗಳ ತಂಡಗಳು ಬರುತ್ತಿವೆ. ಇಂತಹ ದೊಡ್ಡ ಮಟ್ಟದ ಟೂರ್ನಿ ಆಯೋಜಿಸುತ್ತಿರುವುದು ಇದೇ ಮೊದಲಾದ್ದರಿಂದ ವಿಶೇಷ ಕಾಳಜಿ ವಹಿಸಲಾಗಿದೆ. ಐಸಿಸಿ ನೆರವಿನಿಂದಾಗಿ ಯಾವುದೇ ಸಮಸ್ಯೆ ಇಲ್ಲ. ಕ್ರೀಡಾಂಗಣಗಳ ನಿರ್ಮಾಣ ಮತ್ತು ಪಂದ್ಯಗಳ ನಿರ್ವಹಣೆಯ ವ್ಯವಸ್ಥೆಗಳನ್ನು ಐಸಿಸಿ ಸೂಕ್ಷ್ಮವಾಗಿ ಗಮನಿಸುತ್ತಿದೆ.

ಭಾರತ- ಪಾಕಿಸ್ತಾನ ಹೈವೋಲ್ಟೇಜ್​ ಪಂದ್ಯದ ನಿರೀಕ್ಷೆ ಹೇಗಿದೆ?

ಉತ್ತರ:ಜಗತ್ತಿನಲ್ಲಿ ಎಲ್ಲೇ ಭಾರತ - ಪಾಕಿಸ್ತಾನ ನಡುವಣ ಪಂದ್ಯ ನಡೆದರೂ, ಅದರ ಸದ್ದು ದೊಡ್ಡದಾಗಿರುತ್ತದೆ. ನಾವೀಗ ಅದನ್ನು ನೇರವಾಗಿ ವೀಕ್ಷಿಸಲಿದ್ದೇವೆ. ಆ ಪಂದ್ಯಕ್ಕಾಗಿ ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಅಮೆರಿಕದಲ್ಲಿ ಲಕ್ಷಾಂತರ ಭಾರತೀಯ ಮತ್ತು ಪಾಕಿಸ್ತಾನಿ ಜನರಿದ್ದಾರೆ. ಎರಡು ತಂಡಗಳ ನಡುವಿನ ಹೋರಾಟವನ್ನು ಕಣ್ತುಂಬಿಕೊಳ್ಳಲು ಎಲ್ಲರೂ ಸಜ್ಜಾಗಿದ್ದಾರೆ. ಕ್ರಿಕೆಟ್ ಬಗ್ಗೆ ಅಷ್ಟಾಗಿ ತಿಳಿಯದವರಿಗೂ ಈ ಬಗ್ಗೆ ನಿರೀಕ್ಷೆ ಹೆಚ್ಚಿದೆ.

ವಿಶ್ವಕಪ್‌ಗೆ ಡ್ರಾಪ್ ಇನ್ ಪಿಚ್‌ ಬಳಸಲಾಗುತ್ತಿದೆ, ಇವು ಸಾಮಾನ್ಯ ಪಿಚ್‌ಗಳಿಗಿಂತ ಹೇಗೆ ಭಿನ್ನ?

ಉತ್ತರ:ಡ್ರಾಪ್ ಇನ್‌ ಮತ್ತು ಸಾಮಾನ್ಯ ಪಿಚ್‌ಗಳಿಗೆ ದೊಡ್ಡ ವ್ಯತ್ಯಾಸವಿಲ್ಲ. ಡ್ರಾಪ್ - ಇನ್ ಪಿಚ್‌ಗಳನ್ನು ಬೇರೆಡೆ ತಯಾರಿಸಿ ಕ್ರೀಡಾಂಗಣದಲ್ಲಿ ಅಳವಡಿಸಲಾಗುತ್ತದೆ. ಮೈದಾನದಲ್ಲಿ ಇವು ಸಾಮಾನ್ಯ ಪಿಚ್‌ಗಳಂತೆ ಕಾಣುತ್ತದೆ. ನಾವು ನ್ಯೂಯಾರ್ಕ್‌ನ ಕ್ರೀಡಾಂಗಣಕ್ಕಾಗಿ ಫ್ಲೋರಿಡಾದಲ್ಲಿ ಪಿಚ್ ಅನ್ನು ಸಿದ್ಧ ಮಾಡಲಾಗಿದೆ. ಇವುಗಳನ್ನು ತಜ್ಞರು ರೂಪಿಸಿದ್ದರಿಂದ ಯಾವುದೇ ತೊಂದರೆ ಇಲ್ಲ. ಭಾರತದಲ್ಲಿ ಈ ರೀತಿಯ ಪಿಚ್ ಹೊಸದು ಎಂಬ ಚರ್ಚೆ ನಡೆಯುತ್ತಿದೆ. ಆಸ್ಟ್ರೇಲಿಯಾ, ಅಮೆರಿಕ ಮತ್ತು ಇತರ ದೇಶಗಳಲ್ಲಿ ಇದು ಸಾಮಾನ್ಯವಾಗಿದೆ.

ಆಂಧ್ರದಿಂದ ಅಮೆರಿಕ ಕ್ರಿಕೆಟ್ ಅಧ್ಯಕ್ಷರವರೆಗಿನ ನಿಮ್ಮ ಪ್ರಯಾಣದ ಬಗ್ಗೆ ತಿಳಿಸಿ

ಉತ್ತರ:1998 ರಲ್ಲಿ ನಾನು ಅಮೆರಿಕಕ್ಕೆ ಬಂದೆ. ಬಾಲ್ಯದಿಂದಲೂ ಕ್ರಿಕೆಟ್ ಅಂದ್ರೆ ಇಷ್ಟ. ಆಡುವುದಲ್ಲದೇ ಟೂರ್ನಿಗಳನ್ನು ಆಯೋಜಿಸುತ್ತಿದ್ದೆ. ಇಲ್ಲಿ ವಾರಾಂತ್ಯದಲ್ಲಿ ಮಾತ್ರ ಕ್ರಿಕೆಟ್​ ಆಡುತ್ತಾರೆ. ಅಂಥವರಿಗಾಗಿಯೇ 2007ರಲ್ಲಿ ಅಟ್ಲಾಂಟಾ ಕ್ರಿಕೆಟ್ ಲೀಗ್ ಆರಂಭಿಸಲಾಯಿತು. ಪ್ರತಿ ವರ್ಷ 130 ಕ್ಕೂ ಹೆಚ್ಚು ತಂಡಗಳು ಇದರಲ್ಲಿ ಸ್ಪರ್ಧಿಸುತ್ತವೆ. ಅಟ್ಲಾಂಟಾ ಕ್ರಿಕೆಟ್ ಅಕಾಡೆಮಿ ಕೂಡ ಪ್ರಾರಂಭಿಸಲಾಯಿತು. 2011 ರಲ್ಲಿ ಸಾಫ್ಟ್‌ವೇರ್ ಕಂಪನಿಯನ್ನು ಸ್ಥಾಪಿಸಿದೆ. 2018 ರಲ್ಲಿ ಅಮೆರಿಕನ್ ಕ್ರಿಕೆಟ್ ಮಂಡಳಿ ​​ರಚನೆಯಾಯಿತು. ಮೂರು ಬಾರಿ ಚುನಾವಣೆಯಲ್ಲಿ ಗೆದ್ದಿದ್ದೇನೆ. ಈಗ ಮೂರನೇ ಅವಧಿಗೆ ಅಧ್ಯಕ್ಷನಾಗಿದ್ದೇನೆ. 17 ವರ್ಷಗಳಿಂದ ಕ್ರಿಕೆಟ್‌ನಲ್ಲಿನ ಸವಾಲುಗಳನ್ನು ಎದುರಿಸುತ್ತಿದ್ದೇನೆ.

ಅಮೆರಿಕನ್ ಕ್ರಿಕೆಟ್ ಬೆಳವಣಿಗೆಗೆ ಬಿಸಿಸಿಐ ನೆರವು ನೀಡುತ್ತಿದೆಯಾ?

ಉತ್ತರ:ಇಲ್ಲ, ಸದ್ಯಕ್ಕೆ ಯಾವುದೇ ಯಾವುದೇ ಸಹಾಯ ನೀಡಿಲ್ಲ. ಭವಿಷ್ಯದಲ್ಲಿ ಬಿಸಿಸಿಐ ನಮ್ಮ ಬೆಂಬಲಕ್ಕೆ ನಿಲ್ಲುತ್ತದೆ ಎಂದು ಭಾವಿಸಿದ್ದೇನೆ. ಬಿಸಿಸಿಐ ವಿಶ್ವದ ಅತ್ಯಂತ ಬಲಿಷ್ಠ ಕ್ರಿಕೆಟ್​ ಮಂಡಳಿ. ಅದರ ನೆರವಿನೊಂದಿಗೆ ನಾವು ಇನ್ನೂ ವೇಗವಾಗಿ ಪ್ರಗತಿ ಸಾಧಿಸಬಹುದು. ವಿಶ್ವಕಪ್ ನಂತರ ನಾವು ಈ ಬಗ್ಗೆ ಚರ್ಚೆ ಮಾಡಲಿದ್ದೇವೆ.

ಇದನ್ನೂ ಓದಿ:ಟಿ20 ವಿಶ್ವಕಪ್​ ಗೆಲುವಿನತ್ತ ಭಾರತದ ಚಿತ್ತ: ಕಠಿಣ ತಾಲೀಮು ಆರಂಭಿಸಿದ ರೋಹಿತ್​ ಪಡೆ - T20 World Cup 2024

ABOUT THE AUTHOR

...view details