ಬೀಜಿಂಗ್(ಚೀನಾ):ಭಾರತದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ರಕ್ಷಣಾ ವಲಯದಲ್ಲಿ ಜಂಟಿ ಸಹಕಾರಕ್ಕೆ ಸಂಬಂಧಿಸಿದಂತೆ ಉಭಯ ದೇಶಗಳ ನಡುವೆ ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಈ ಬೆಳವಣಿಗೆಗಳು ಚೀನಾವನ್ನು ಚಿಂತೆಗೀಡು ಮಾಡಿದಂತಿದೆ. ಇದೀಗ ಬೀಜಿಂಗ್, ಪ್ಯಾರಿಸ್‌ನೊಂದಿಗಿನ ಸಂಬಂಧ ಬಲಪಡಿಸಲು ಮುಂದಾಗಿದೆ. ಈ ಕುರಿತಾಗಿ ಸ್ವತಃ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಹೇಳಿಕೆ ನೀಡಿರುವುದು ಗಮನಾರ್ಹ.
ಚೀನಾ-ಫ್ರಾನ್ಸ್ ನಡುವಿನ ರಾಜತಾಂತ್ರಿಕ ಸಂಬಂಧಕ್ಕೆ 60 ವರ್ಷಗಳಾಗುತ್ತಿರುವ ಸಂದರ್ಭದಲ್ಲಿ ಬೀಜಿಂಗ್‌ನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಕ್ಸಿ ಜಿನ್‌ಪಿಂಗ್ ಮಾತನಾಡಿದರು. "ಪ್ರಸ್ತುತ ಜಗತ್ತು ಮತ್ತೆ ನಿರ್ಣಾಯಕ ಸವಾಲುಗಳನ್ನು ಎದುರಿಸುತ್ತಿದೆ. ಭದ್ರತೆ, ಅಭಿವೃದ್ಧಿ, ಸಮೃದ್ಧಿ ಮತ್ತು ಶಾಂತಿಗಾಗಿ ಉಭಯ ದೇಶಗಳು ಜಂಟಿಯಾಗಿ ಹೊಸ ಮಾರ್ಗವನ್ನು ಆವಿಷ್ಕರಿಸುವ ಅವಶ್ಯಕತೆ ಇದೆ. ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸಲು ಚೀನಾ ಹೆಚ್ಚು ಪ್ರಾಮುಖ್ಯತೆ ನೀಡುತ್ತದೆ. ಉಭಯ ದೇಶಗಳ ನಡುವಿನ ವ್ಯೂಹಾತ್ಮಕ ಪಾಲುದಾರಿಕೆಯನ್ನು ಬಲಪಡಿಸಲು ಮತ್ತು ಅದನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಈ ಸಮಾರಂಭ ಉತ್ತಮ ಅವಕಾಶ" ಎಂದು ಅವರು ಹೇಳಿದ್ದಾರೆ.
ಬಳಿಕ ಮಾತನಾಡಿದ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ, "ಫ್ರಾನ್ಸ್‌ನಿಂದ ಉತ್ತಮ ಗುಣಮಟ್ಟದ ಉತ್ಪನ್ನಗಳ ಆಮದು ಹೆಚ್ಚಿಸುತ್ತೇವೆ. ಆ ದೇಶದ ಸೇವೆಗಳನ್ನು ಮತ್ತಷ್ಟು ವಿಸ್ತರಿಸುತ್ತೇವೆ. ಮ್ಯಾಕ್ರನ್ ಸರ್ಕಾರವು ಚೀನಾದ ಕಂಪನಿಗಳಿಗೆ ಇದೇ ರೀತಿಯ ವ್ಯಾಪಾರ ಅವಕಾಶಗಳನ್ನು ನೀಡುತ್ತದೆ ಎಂದು ನಾವು ಭಾವಿಸುತ್ತೇವೆ" ಎಂದರು.