ಕರ್ನಾಟಕ

karnataka

ETV Bharat / international

ಸಿರಿಯಾ ಆಕ್ರಮಿಸಿದ ತಹ್ರಿರ್ ಅಲ್-ಶಾಮ್ ನಾಯಕ ಜುಲಾನಿ ಯಾರು? ಇಲ್ಲಿದೆ ಕುತೂಹಲಕರ ಮಾಹಿತಿ - SYRIA INVASION

ಸಿರಿಯಾದಲ್ಲಿ ಬಷರ್ ಆಡಳಿತವನ್ನು ಕೊನೆಗೊಳಿಸಿ ದೇಶವನ್ನು ಆಕ್ರಮಿಸಿರುವ ಹಯಾತ್ ತಹ್ರಿರ್ ಅಲ್-ಶಾಮ್ ಸಂಘಟನೆಯ ನಾಯಕ ಜುಲಾನಿ ಬಗ್ಗೆ ಕುತೂಹಲಕರ ಮಾಹಿತಿ ಇಲ್ಲಿದೆ.

ಅಬು ಮೊಹಮ್ಮದ್ ಅಲ್-ಜುಲಾನಿ
ಅಬು ಮೊಹಮ್ಮದ್ ಅಲ್-ಜುಲಾನಿ (IANS)

By ETV Bharat Karnataka Team

Published : Dec 8, 2024, 7:28 PM IST

ಡಮಾಸ್ಕಸ್: ಸಿರಿಯಾದಲ್ಲಿ ಅಧ್ಯಕ್ಷ ಬಷರ್ ಅಲ್-ಅಸ್ಸಾದ್ ಅವರ ಆಡಳಿತ ಪತನಗೊಂಡಿದ್ದು, ಡಮಾಸ್ಕಸ್ ಅನ್ನು ವಶಪಡಿಸಿಕೊಂಡಿರುವ ಇಸ್ಲಾಮಿಕ್ ಬಂಡುಕೋರ ಗುಂಪು ಹಯಾತ್ ತಹ್ರಿರ್ ಅಲ್-ಶಾಮ್ (ಎಚ್​ಟಿಎಸ್) ಸಿರಿಯಾದಲ್ಲಿ ಈಗ "ಹೊಸ ಯುಗದ ಆರಂಭ" ವಾಗಿದೆ ಎಂದು ಘೋಷಿಸಿದೆ.

ಈ ಹಿನ್ನೆಲೆಯಲ್ಲಿ ಈಗ ಎಚ್​ಟಿಎಸ್​ ನಾಯಕ ಅಬು ಮೊಹಮ್ಮದ್ ಅಲ್-ಜುಲಾನಿ ಮೇಲೆ ಇಡೀ ಜಗತ್ತಿನ ಕಣ್ಣು ನೆಟ್ಟಿವೆ. ಒಂದು ಕಾಲದಲ್ಲಿ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ (ಐಸಿಸ್) ಸ್ಥಾಪಕ ಮತ್ತು ಅದರ ನಾಯಕ ಅಬು ಬಕರ್ ಅಲ್-ಬಾಗ್ದಾದಿಯೊಂದಿಗೆ ಕೆಲಸ ಮಾಡಿರುವ ಅಬು ಮೊಹಮ್ಮದ್ ಅಲ್-ಜುಲಾನಿ ನಡೆ ಏನಿರಲಿದೆ ಎಂಬುದು ಕುತೂಹಲ ಮೂಡಿಸಿದೆ.

ಅಲ್-ಖೈದಾದೊಂದಿಗೆ ಸಂಯೋಜಿತವಾಗಿರುವ ಮತ್ತು ಈ ಹಿಂದೆ ನುಸ್ರಾ ಫ್ರಂಟ್ ಎಂದು ಕರೆಯಲ್ಪಡುತ್ತಿದ್ದ ಎಚ್​ಟಿಎಸ್ ನವೆಂಬರ್ 27ರಂದು ಉತ್ತರ ಸಿರಿಯಾದಲ್ಲಿ ಬೃಹತ್ ದಾಳಿಯನ್ನು ಪ್ರಾರಂಭಿಸಿ ಬಂಡುಕೋರ ಗುಂಪುಗಳನ್ನು ಮುನ್ನಡೆಸಿತು. ಅಂತಿಮವಾಗಿ, ಡಮಾಸ್ಕಸ್​ಗೆ ನುಗ್ಗುವ ಮೊದಲು ಅಲೆಪ್ಪೊ, ಹಮಾದಂತಹ ಪ್ರಮುಖ ನಗರಗಳನ್ನು ಅದು ವಶಪಡಿಸಿಕೊಂಡಿದೆ.

ಸಿರಿಯಾ ಅಧ್ಯಕ್ಷ ಬಷರ್ ಅಲ್-ಅಸ್ಸಾದ್ ಎಲ್ಲಿದ್ದಾರೆ ಎಂಬ ಬಗ್ಗೆ ಹಲವಾರು ವಿರೋಧಾಭಾಸ ಸುದ್ದಿಗಳು ಬಿತ್ತರವಾಗುತ್ತಿರುವ ಮಧ್ಯೆ ಅಮೆರಿಕದಿಂದ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಲ್ಪಟ್ಟಿರುವ ಎಚ್​ಟಿಎಸ್ ಸಿರಿಯಾದಲ್ಲಿ ಸೃಷ್ಟಿಸಿರುವ ಬಿಕ್ಕಟ್ಟಿನ ಬಗ್ಗೆ ಜಗತ್ತು ಸೂಕ್ಷ್ಮವಾಗಿ ಗಮನಿಸುತ್ತಿದೆ. ಏತನ್ಮಧ್ಯೆ, 'ವಿಶೇಷ ಜಾಗತಿಕ ಭಯೋತ್ಪಾದಕ' ಎಂದು ಘೋಷಿಸಲ್ಪಟ್ಟ ಅಬು ಮೊಹಮ್ಮದ್ ಅಲ್-ಜುಲಾನಿ ತಲೆಗೆ 10 ಮಿಲಿಯನ್ ಡಾಲರ್ ಬಹುಮಾನವಿರುವುದು ಗಮನಾರ್ಹ.

ಅಹ್ಮದ್ ಹುಸೇನ್ ಅಲ್-ಶರಾ ಮೂಲ ಹೆಸರಿನ ಜುಲಾನಿಯನ್ನು ಮೊಹಮ್ಮದ್ ಅಲ್-ಜವ್ಲಾನಿ ಮತ್ತು ಅಬು ಮುಹಮ್ಮದ್ ಅಲ್-ಗೊಲಾನಿ ಎಂದೂ ಕರೆಯಲಾಗುತ್ತದೆ. ಇರಾಕಿನಲ್ಲಿ ಅಲ್ ಖೈದಾ ಪರ ಕೆಲಸ ಮಾಡಿದ್ದ ಆತ ಐದು ವರ್ಷಗಳ ಕಾಲ ಅಮೆರಿಕದ ಜೈಲಿನಲ್ಲಿ ಕಳೆದಿದ್ದ.

2012ರಲ್ಲೇ ಸಿರಿಯಾದ ಅಧ್ಯಕ್ಷ ಬಷರ್ ಅಲ್-ಅಸ್ಸಾದ್ ಅವರ ಆಡಳಿತವನ್ನು ಕಿತ್ತೊಗೆಯುವುದಾಗಿ ಅಲ್-ನುಸ್ರಾ ಫ್ರಂಟ್ ಪ್ರತಿಜ್ಞೆ ಮಾಡಿದ್ದರಿಂದ ಜುಲಾನಿ ಅಲ್-ಖೈದಾ ಮತ್ತು ಅದರ ನಾಯಕ ಅಯಮಾನ್ ಅಲ್-ಜವಾಹಿರಿಯೊಂದಿಗೆ ನಿಷ್ಠೆಯಿಂದ ಕೆಲಸ ಮಾಡಿದ್ದ.

ಸ್ಥಳೀಯ ಉಪಸ್ಥಿತಿ ಮತ್ತು ಹೋರಾಟವನ್ನು ಬೆಳೆಸುವ ಮೂಲಕ ಸಿರಿಯಾದಲ್ಲಿ ಅಲ್-ಖೈದಾಗೆ ನೆಲೆ ಸ್ಥಾಪಿಸಲು ಬಾಗ್ದಾದಿ ಜುಲಾನಿಗೆ ಸೂಚನೆ ನೀಡಿದ್ದ. ಇರಾಕ್​ನಲ್ಲಿರುವ ಅಲ್-ಖೈದಾ ನುಸ್ರಾ ಫ್ರಂಟ್​ಗೆ ಮಾನವಶಕ್ತಿ, ಹಣ, ಶಸ್ತ್ರಾಸ್ತ್ರಗಳು ಮತ್ತು ಸಲಹೆಗಳನ್ನು ಒದಗಿಸಿತ್ತು. ಮೇ 2013 ರಲ್ಲಿ, ಜುಲಾನಿಯನ್ನು ಯುಎಸ್ ಸ್ಟೇಟ್ ಡಿಪಾರ್ಟ್ ಮೆಂಟ್ 'ವಿಶೇಷ ನಿಯೋಜಿತ ಜಾಗತಿಕ ಭಯೋತ್ಪಾದಕ' ಎಂದು ಹೆಸರಿಸಿದೆ.

ಅಲ್ ನುಸ್ರಾ ಫ್ರಂಟ್ (ಎಎನ್ಎಫ್) ನಾಯಕತ್ವದ ಬಗ್ಗೆ ಎಫ್​ಬಿಐ ಮಾಹಿತಿಗಳನ್ನು ಕಲೆ ಹಾಕುತ್ತಿದೆ ಮತ್ತು ಯುಎಸ್ ಡಿಪಾರ್ಟ್ ಮೆಂಟ್ ಆಫ್ ಸ್ಟೇಟ್​ನ ರಿವಾರ್ಡ್ಸ್ ಫಾರ್ ಜಸ್ಟೀಸ್ ವಿಭಾಗವು ಜುಲಾನಿಯನ್ನು ಗುರುತಿಸುವ ಅಥವಾ ಆತನಿರುವ ಸ್ಥಳದ ಮಾಹಿತಿ ನೀಡಿದವರಿಗೆ 10 ಮಿಲಿಯನ್ ಡಾಲರ್ ಬಹುಮಾನ ಘೋಷಿಸಿದೆ.

ಜುಲೈ 24, 2013 ರಂದು, ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಐಎಸ್ಐಎಲ್ (Da'esh- ದಾಯಿಶ್) ಮತ್ತು ಅಲ್-ಖೈದಾ ನಿರ್ಬಂಧಗಳ ಸಮಿತಿಯು ಜುಲಾನಿಯನ್ನು ತನ್ನ ನಿರ್ಬಂಧಿತ ಭಯೋತ್ಪಾದಕರ ಪಟ್ಟಿಯಲ್ಲಿ ಸೇರಿಸಿತು. ಇದರಿಂದಾಗಿ ಆತನನ್ನು ಅಂತರರಾಷ್ಟ್ರೀಯ ಆಸ್ತಿ ಮುಟ್ಟುಗೋಲು, ಪ್ರಯಾಣ ನಿಷೇಧ ಮತ್ತು ಶಸ್ತ್ರಾಸ್ತ್ರ ನಿರ್ಬಂಧಕ್ಕೆ ಒಳಪಡಿಸಲಾಯಿತು.

ಸಿರಿಯಾದಲ್ಲಿ ಅಲ್-ಖೈದಾದ ಅಂಗಸಂಸ್ಥೆಯಾದ ಎಎನ್ಎಫ್ ತನ್ನ ಹೆಸರನ್ನು ಜಬತ್ ಫಾತ್ ಅಲ್ ಶಾಮ್ (ಲೆವಾಂಟ್ ಫ್ರಂಟ್​ನ ವಿಜಯ) ಎಂದು ಬದಲಾಯಿಸಲಾಗಿದೆ ಎಂದು ಜುಲೈ 2016 ರಲ್ಲಿ ಘೋಷಿಸಿದ್ದ ಜುಲಾನಿ ಆನ್ ಲೈನ್ ವೀಡಿಯೊದಲ್ಲಿ ಅಲ್-ಖೈದಾ ಮತ್ತು ಜವಾಹಿರಿಯನ್ನು ಶ್ಲಾಘಿಸಿದ್ದ. ತದನಂತರ ಅದರ ಮುಂದಿನ ವರ್ಷ ಅದೇ ರೀತಿಯ ಹಲವಾರು ಬಂಡುಕೋರ ಗುಂಪುಗಳನ್ನು ಸೇರಿಸಿ ಹಯಾತ್ ತಹ್ರಿರ್ ಅಲ್-ಶಾಮ್ (ಎಚ್​ಟಿಎಸ್) ಸಂಘಟನೆಯನ್ನು ರಚಿಸಲಾಯಿತು.

ಸಿರಿಯಾದ ಇದ್ಲಿಬ್​ನಲ್ಲಿ 'ಸಾಲ್ವೇಶನ್ ಗವರ್ನಮೆಂಟ್' ರಚನೆ, ಕೋವಿಡ್ -19 ಸಾಂಕ್ರಾಮಿಕ ರೋಗ ಮತ್ತು ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಎಚ್​ಟಿಎಸ್ ಈ ಪ್ರದೇಶದಲ್ಲಿ ತನ್ನ ಶಕ್ತಿ ಮತ್ತು ನಿಯಂತ್ರಣವನ್ನು ಕಾಪಾಡಿಕೊಳ್ಳಲು ಸಾಧ್ಯವಾಯಿತು ಎಂದು ವರದಿಯೊಂದು ಹೇಳಿದೆ.

"ಜಬತ್ ಅಲ್-ನುಸ್ರಾ 2017 ರಲ್ಲಿ ಅಲ್-ಖೈದಾದೊಂದಿಗಿನ ಸಂಬಂಧವನ್ನು ಕಡಿದುಕೊಂಡಾಗಿನಿಂದ, ಅಬು ಮುಹಮ್ಮದ್ ಅಲ್-ಜುಲಾನಿ ತನ್ನ ಸಂಘಟನೆಯ ಮೂಲ ಸಿದ್ಧಾಂತವನ್ನು ಮಾರ್ಪಡಿಸಿ, 'ವಿಧಾನದಲ್ಲಿ ಜಿಹಾದಿಸಂ ಮತ್ತು ಭೌಗೋಳಿಕತೆಯಲ್ಲಿ ರಾಷ್ಟ್ರೀಯತೆ' ಆಧಾರದ ಮೇಲೆ ಹೊಸ ವಿಧಾನವೊಂದನ್ನು ಮುಂದಿಟ್ಟಿದ್ದಾನೆ.

ಏತನ್ಮಧ್ಯೆ, ದಶಕಗಳಷ್ಟು ಹಳೆಯದಾದ ಬಷರ್ ಅಲ್-ಅಸ್ಸಾದ್ ಆಡಳಿತದ ಪತನದ ಸಂಭ್ರಮಾಚರಣೆ ಮಾಡುತ್ತಿರುವವರು ಒಂದು ರೀತಿಯಲ್ಲಿ ಐಸಿಸ್ ಮತ್ತು ಅಲ್-ಖೈದಾ ಭಯೋತ್ಪಾದಕರನ್ನು ಬೆಂಬಲಿಸುತ್ತಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇದನ್ನೂ ಓದಿ : ಸಿರಿಯಾದಲ್ಲಿ ಅಸ್ಸಾದ್ ಆಡಳಿತ ಪತನ: ಗೋಲನ್ ಹೈಟ್ಸ್​ನಲ್ಲಿ ಹೆಚ್ಚುವರಿ ಯೋಧರನ್ನು ನಿಯೋಜಿಸಿದ ಇಸ್ರೇಲ್

ABOUT THE AUTHOR

...view details