ಚೆನ್ನೈ: ತಮಿಳುನಾಡಿನ 8 ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಮಂಗಳವಾರ ಮುಂಜಾನೆ ಬಂಧಿಸಿದೆ ಎಂದು ಮೂಲಗಳು ತಿಳಿಸಿವೆ. ಅಂತಾರಾಷ್ಟ್ರೀಯ ಕಡಲ ಗಡಿ ರೇಖೆಯನ್ನು (ಐಎಂಬಿಎಲ್) ದಾಟಿದ ಆರೋಪದ ಮೇಲೆ ಈ ಮೀನುಗಾರರನ್ನು ಬಂಧಿಸಲಾಗಿದೆ. ಬಂಧಿತ ಮೀನುಗಾರರನ್ನು ಶ್ರೀಲಂಕಾ ತನ್ನ ಯಾಂತ್ರೀಕೃತ ಮೀನುಗಾರಿಕಾ ದೋಣಿ ಮೂಲಕ ಮನ್ನಾರ್ ನೌಕಾ ಶಿಬಿರಕ್ಕೆ ಕರೆದೊಯ್ದಿದೆ. ಬಂಧಿತ ಎಲ್ಲ ಎಂಟು ಮೀನುಗಾರರು ರಾಜ್ಯದ ರಾಮೇಶ್ವರಂ ಪ್ರದೇಶದವರಾಗಿದ್ದಾರೆ.
ಮೀನುಗಾರರ ಬಂಧನದ ಬಗ್ಗೆ ಐಎಎನ್ಎಸ್ನೊಂದಿಗೆ ಮಾತನಾಡಿದ ಮೀನುಗಾರರ ಸಂಘದ ಮುಖಂಡ ಆರ್.ರಾಜೇಂದ್ರನ್, ಬಂಧಿತರ ಬಿಡುಗಡೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದರು. "ಶ್ರೀಲಂಕಾ ನೌಕಾಪಡೆಯು ನಮ್ಮ ಮೀನುಗಾರರನ್ನು ಬಂಧಿಸಿರುವುದು ಅತ್ಯಂತ ಶೋಚನೀಯ ಮತ್ತು ಶ್ರೀಲಂಕಾ ನೌಕಾಪಡೆಯ ಈ ಅಮಾನವೀಯ ವರ್ತನೆ ವಿರುದ್ಧ ನಾವು ಬಲವಾಗಿ ಪ್ರತಿಭಟಿಸುತ್ತೇವೆ" ಎಂದು ಅವರು ಹೇಳಿದರು.
ಇದಕ್ಕೂ ಒಂದು ದಿನ ಮುಂಚೆ ಶ್ರೀಲಂಕಾ ನೌಕಾಪಡೆಯು ನಾಗಪಟ್ಟಿಣಂ ಮತ್ತು ರಾಮೇಶ್ವರಂನಿಂದ 11 ತಮಿಳು ಮೀನುಗಾರರನ್ನು ಬಂಧಿಸಿತ್ತು. 2024 ರ ಆರಂಭದಿಂದ ಐಎಂಬಿಎಲ್ ದಾಟಿದ್ದಕ್ಕಾಗಿ ತಮಿಳುನಾಡಿನ ಒಟ್ಟು 324 ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹೇಳಿದ್ದಾರೆ.
ತನ್ನ ಜಲಪ್ರದೇಶ ದಾಟಿ ಬಂದಿದೆ ಎಂದು ಆರೋಪಿಸಿ ಆಗಸ್ಟ್ 1, 2024 ರಂದು ರಾಮೇಶ್ವರಂನ ಯಾಂತ್ರೀಕೃತ ಮೀನುಗಾರಿಕಾ ದೋಣಿಯೊಂದನ್ನು ಶ್ರೀಲಂಕಾ ನೌಕಾಪಡೆ ಬೆನ್ನಟ್ಟಿ ಬಂದ ಸಂದರ್ಭದಲ್ಲಿ ಆ ದೋಣಿ ಮುಳುಗಿತ್ತು. ಆ ದೋಣಿಯಲ್ಲಿದ್ದ ನಾಲ್ವರು ಭಾರತೀಯ ಮೀನುಗಾರರ ಪೈಕಿ ಓರ್ವ ಸಾವನ್ನಪ್ಪಿದ್ದ. ಮತ್ತೋರ್ವ ಸಮುದ್ರದಲ್ಲಿ ಕಾಣೆಯಾಗಿದ್ದು, ಇನ್ನಿಬ್ಬರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದೆ.
ಮೃತನನ್ನು ಮಲೈಸಾಮಿ (59) ಎಂದು ಗುರುತಿಸಲಾಗಿದ್ದು, ಕಾಣೆಯಾದ ಮೀನುಗಾರನನ್ನು ರಾಮಚಂದ್ರನ್ (64) ಎಂದು ಗುರುತಿಸಲಾಗಿದೆ. ಮೂಕಯ್ಯ (54) ಮತ್ತು ಮುತ್ತು ಮುನಿಯಾಂಡಿ (56) ಎಂಬ ಇನ್ನಿಬ್ಬರು ಮೀನುಗಾರರನ್ನು ಶ್ರೀಲಂಕಾ ಬಂಧಿಸಿತ್ತು. ನಂತರ ಇವರನ್ನು ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಈ ಬಗ್ಗೆ ಕೇಂದ್ರ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರಿಗೆ ಪತ್ರ ಬರೆದಿರುವ ಸಿಎಂ ಸ್ಟಾಲಿನ್, ಈ ಸಮಸ್ಯೆಯನ್ನು ಬಗೆಹರಿಸಲು ಕೇಂದ್ರ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿದ್ದಾರೆ.
ರಾಮೇಶ್ವರಂ, ಪುದುಕೊಟ್ಟೈ ಮತ್ತು ನಾಗಪಟ್ಟಿಣಂ ಸೇರಿದಂತೆ ತಮಿಳುನಾಡಿನ ಹಲವಾರು ಕುಗ್ರಾಮಗಳ ಮೀನುಗಾರರು ಶ್ರೀಲಂಕಾ ನೌಕಾಪಡೆಯ ದಾಳಿಗಳಿಂದಾಗಿ ಸಮುದ್ರಕ್ಕೆ ಇಳಿಯಲು ಹೆದರುತ್ತಿದ್ದಾರೆ.
ಇದನ್ನೂ ಓದಿ : ಉಕ್ರೇನ್ ಮೇಲೆ ಬೃಹತ್ ದಾಳಿ ಆರಂಭಿಸಿದ ರಷ್ಯಾ: ಕನಿಷ್ಠ ಮೂವರ ಸಾವು - Russia attack Ukraine