ವಿಶ್ವಸಂಸ್ಥೆ:ಭಯೋತ್ಪಾದನೆ ಜಾಗತಿಕ ಶಾಂತಿ ಮತ್ತು ಭದ್ರತೆಗೆ ಗಂಭೀರ ಬೆದರಿಕೆಯಾಗಿವೆ. ಮತ್ತೊಂದೆಡೆ ಸೈಬರ್, ಸಾಗರ ಮತ್ತು ಬಾಹ್ಯಾಕಾಶ ಸಂಘರ್ಷವು ಹೊಸ ಯುದ್ಧ ವೇದಿಕೆಗಳಾಗಿ ಹೊರಹೊಮ್ಮಿವೆ. ಈ ಎಲ್ಲ ವಿಷಯಗಳಲ್ಲಿ ಜಗತ್ತು ಒಂದಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ವಿಶ್ವಸಂಸ್ಥೆಯ 79ನೇ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಹಿಂದಿಯಲ್ಲಿ ಮಾತನಾಡಿದ ಅವರು, ಮಾನವೀಯತೆಯ ಯಶಸ್ಸು ಸಾಮೂಹಿಕ ಶಕ್ತಿಯಲ್ಲಿದೆ. ಯುದ್ಧಭೂಮಿಯಲ್ಲಿ ಅಲ್ಲ. ವಿಶ್ವ ಶಾಂತಿ ಮತ್ತು ಅಭಿವೃದ್ಧಿಗಾಗಿ ಜಾಗತಿಕ ಶಕ್ತಿಗಳು ಸುಧಾರಣೆಯತ್ತ ಹೊರಳುವುದು ಅತ್ಯಗತ್ಯ ಎಂದು ಸಲಹೆ ನೀಡಿದರು.
ವಿಶ್ವಶಾಂತಿ ಇಂದಿನ ಅಗತ್ಯ ಎಂಬುದನ್ನು ಮತ್ತೊಮ್ಮೆ ಹೇಳಿದ ಪ್ರಧಾನಿ ಮೋದಿ, ಯುದ್ಧ ಮತ್ತು ಸಂಘರ್ಷಗಳು ಇಂದಿನ ಅಗತ್ಯವಲ್ಲ. ಭವಿಷ್ಯಕ್ಕಾಗಿ ನಾವು ಅಭಿವೃದ್ಧಿ ಪಥದತ್ತ ನಡೆಯಬೇಕಿದೆ. ವಿಶ್ವ ಶಾಂತಿ ಮತ್ತು ಭದ್ರತೆಗಾಗಿ ನಾವೆಲ್ಲರೂ ಒಂದಾಗಬೇಕಿದೆ. ಹೊಸ ಸವಾಲುಗಳನ್ನು ಮೆಟ್ಟಿ ನಿಲ್ಲಬೇಕಿದೆ ಎಂದರು.
ರಷ್ಯಾ-ಉಕ್ರೇನ್ ಯುದ್ಧ ಮತ್ತು ಇಸ್ರೇಲ್-ಹಮಾಸ್ ಸಂಘರ್ಷದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರ ವಿಶ್ವಸಂಸ್ಥೆಯ ಹೇಳಿಕೆಗಳು ಪ್ರಾಮುಖ್ಯತೆ ಪಡೆದಿವೆ.
ವಿಶ್ವದ ಭವಿಷ್ಯದ ಕುರಿತು ಯಾವುದೇ ಚರ್ಚೆಯಲ್ಲಿ ಮಾನವ ಕೇಂದ್ರಿತ ವಿಧಾನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಸುಸ್ಥಿರ ಅಭಿವೃದ್ಧಿಗೆ ಆದ್ಯತೆ ನೀಡುವಾಗ ಮಾನವ ಕಲ್ಯಾಣ, ಆಹಾರ ಮತ್ತು ಆರೋಗ್ಯ ಭದ್ರತೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಭಾರತದಲ್ಲಿ 250 ಮಿಲಿಯನ್ ಜನರನ್ನು ಬಡತನದಿಂದ ಮೇಲೆತ್ತುವ ಮೂಲಕ, ಸುಸ್ಥಿರ ಅಭಿವೃದ್ಧಿಯಿಂದ ಯಶಸ್ಸು ಸಾಧಿಸಬಹುದು ಎಂಬುದನ್ನು ನಮ್ಮ ಸರ್ಕಾರ ಮಾಡಿ ತೋರಿಸಿದೆ. ಜಾಗತಿಕ ಶಕ್ತಿಗಳಿಗೆ ಸುಧಾರಣೆಗಳನ್ನು ಕೈಗೊಳ್ಳಲು ಕರೆ ನೀಡಿದ ಪ್ರಧಾನಿ, ವಿಶ್ವ ಶಾಂತಿ ಮತ್ತು ಅಭಿವೃದ್ಧಿಗೆ ಇವು ಅತ್ಯಗತ್ಯ ಎಂದು ಹೇಳಿದರು.
ಇದನ್ನೂ ಓದಿ:ಜಾಗತಿಕ ತುರ್ತು ಪರಿಸ್ಥಿತಿಗೆ ಕಾರಣವಾದ 'ಡೇಂಜರಸ್' ಮಂಕಿಪಾಕ್ಸ್ ವೈರಸ್ ಕೇರಳ ವ್ಯಕ್ತಿಯಲ್ಲಿ ಪತ್ತೆ - INDIA REPORTS MPOX STRAIN CASE