ಬಲೂಚಿಸ್ತಾನ್ (ಪಾಕಿಸ್ತಾನ):ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಭಯೋತ್ಪಾದಕರು 9 ಮಂದಿ ಬಸ್ ಪ್ರಯಾಣಿಕರು ಸೇರಿದಂತೆ 11 ಜನರನ್ನು ಕೊಂದಿದ್ದಾರೆ. ಮೊದಲ ಘಟನೆಯಲ್ಲಿ, ಭಯೋತ್ಪಾದಕರು ನೋಸ್ಕಿ ಜಿಲ್ಲೆಯ ಹೆದ್ದಾರಿಯಲ್ಲಿ ಬಸ್ಸನ್ನು ನಿಲ್ಲಿಸಿ ಒಂಬತ್ತು ಜನರನ್ನು ಬಂದೂಕು ತೋರಿಸಿ ಅಪಹರಿಸಿದ್ದಾರೆ. "ಈ 9 ಜನರ ಮೃತದೇಹಗಳು ಸಮೀಪದ ಗುಡ್ಡಗಾಡು ಪ್ರದೇಶದಲ್ಲಿ ಪತ್ತೆಯಾಗಿವೆ. ಅವರ ದೇಹದ ಮೇಲೆ ಗುಂಡಿನ ಗಾಯಗಳಿವೆ. ಬಸ್ ಕ್ವೆಟ್ಟಾದಿಂದ ತಫ್ತಾನ್ ಕಡೆಗೆ ಹೋಗುತ್ತಿರುವಾಗ ಕೆಲ ಭಯೋತ್ಪಾದಕರು ತಡೆದು ನಿಲ್ಲಿಸಿ, 9 ಜನರನ್ನು ಗುಡ್ಡಗಾಡು ಪ್ರದೇಶದ ಕಡೆಗೆ ಕರೆದೊಯ್ದರು'' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಾರಿನ ಮೇಲೆ ಗುಂಡಿನ ದಾಳಿ:ಮತ್ತೊಂದು ಘಟನೆಯಲ್ಲಿ, ಅದೇ ಹೆದ್ದಾರಿಯಲ್ಲಿ ಕಾರೊಂದರ ಮೇಲೆ ಗುಂಡು ಹಾರಿಸಲಾಗಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಈ ದಾಳಿಯಲ್ಲಿ ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹೆದ್ದಾರಿಯಲ್ಲಿ 11 ಜನರ ಸಾವಿಗೆ ಕಾರಣರಾದ ಭಯೋತ್ಪಾದಕರನ್ನು ಕ್ಷಮಿಸುವುದಿಲ್ಲ. ಆದಷ್ಟು ಬೇಗ ಅವರನ್ನು ಹಿಡಿಯಲಾಗುವುದು ಎಂದು ಬಲೂಚಿಸ್ತಾನ್ ಮುಖ್ಯಮಂತ್ರಿ ಮಿರ್ ಸರ್ಫರಾಜ್ ಬುಗ್ತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ದಾಳಿಯಲ್ಲಿ ಭಾಗಿಯಾಗಿರುವ ಭಯೋತ್ಪಾದಕರನ್ನು ಹಿಂಬಾಲಿಸಲಾಗುತ್ತಿದೆ. ಭಯೋತ್ಪಾದಕರು ಏಕೈಕ ಗುರಿ ಬಲೂಚಿಸ್ತಾನದ ಶಾಂತಿಯನ್ನು ನಾಶಪಡಿಸುವುದಾಗಿದೆ ಎಂದು ಮುಖ್ಯಮಂತ್ರಿ ಮಿರ್ ಸರ್ಫರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೃಹ ಸಚಿವ ಮೊಹ್ಸಿನ್ ನಖ್ವಿ ಕೂಡ ಈ ದಾಳಿಯನ್ನು ಖಂಡಿಸಿದ್ದಾರೆ. ಮೃತರ ಕುಟುಂಬದವರ ಜೊತೆ ಸರ್ಕಾರ ನಿಂತಿದೆ ಎಂದು ಹೇಳಿದ್ದಾರೆ.
ಬಲೂಚಿಸ್ತಾನದಲ್ಲಿ ಹೆಚ್ಚುತ್ತಿದೆ ಭಯೋತ್ಪಾದಕರ ದಾಳಿ: ಪ್ರಸ್ತುತ, ಯಾವುದೇ ನಿಷೇಧಿತ ಭಯೋತ್ಪಾದಕ ಸಂಘಟನೆಗಳು ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ. ಪ್ರಾಂತ್ಯದಲ್ಲಿ ಸ್ವಲ್ಪ ಸಮಯದಿಂದ ಭಯೋತ್ಪಾದಕ ದಾಳಿಗಳು ಹೆಚ್ಚಾಗಲು ಪ್ರಾರಂಭಿಸಿವೆ. ಈ ದಾಳಿಗಳಲ್ಲಿ ಮುಖ್ಯವಾಗಿ ಭದ್ರತಾ ಪಡೆಗಳನ್ನು ಗುರಿಯಾಗಿಸಲಾಗುತ್ತಿದೆ. ನಿಷೇಧಿತ ಭಯೋತ್ಪಾದಕ ಸಂಘಟನೆ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ ಇತ್ತೀಚೆಗೆ ಪ್ರಾಂತ್ಯದ ಮಾಕ್ ನಗರ, ಗ್ವಾದರ್ ಬಂದರು ಮತ್ತು ಟರ್ಬತ್‌ನಲ್ಲಿರುವ ನೌಕಾ ನೆಲೆ ಮೇಲೆ ನಡೆಸಿದ್ದ ಮೂರು ಪ್ರಮುಖ ಭಯೋತ್ಪಾದಕ ದಾಳಿಯ ಹೊಣೆಯನ್ನು ವಹಿಸಿಕೊಂಡಿತ್ತು.
ಇದನ್ನು ಓದಿ:ವಿಜಯಪುರ: ಕಾರು - ಟ್ರಕ್ ನಡುವೆ ಭೀಕರ ಅಪಘಾತ: ಸ್ಥಳದಲ್ಲೇ ನಾಲ್ವರ ದುರ್ಮರಣ - VIJAYAPURA ACCIDENT