ಟೆಲ್ ಅವೀವ್, ಇಸ್ರೇಲ್:ಇಸ್ರೇಲ್ನಲ್ಲಿ ಅವಧಿಪೂರ್ವ ಚುನಾವಣೆ ನಡೆಸುವ ಬೇಡಿಕೆಯನ್ನು ಪ್ರಧಾನಿ ಬೆಂಜಮಿನ್ ನೆತನ್ಯಾಹು ತಳ್ಳಿಹಾಕಿದ್ದಾರೆ. ನೆತನ್ಯಾಹು ಸರ್ಕಾರದ ವಿರುದ್ಧ ಟೆಲ್ ಅವೀವ್ನಲ್ಲಿ ಸಾವಿರಾರು ಇಸ್ರೇಲಿಗರು ಪ್ರತಿಭಟನೆ ನಡೆಸಿದ ನಂತರ ನೆತನ್ಯಾಹು ಅವಧಿಪೂರ್ವ ಚುನಾವಣೆಯ ಬೇಡಿಕೆಯನ್ನು ತಿರಸ್ಕರಿಸಿದ್ದಾರೆ.
ಗಾಜಾದಲ್ಲಿ ವಿನಾಶಕಾರಿ ಯುದ್ಧಕ್ಕೆ ಮುನ್ನುಡಿ ಬರೆದ ಹಮಾಸ್ನ ಅಕ್ಟೋಬರ್ 7 ರ ದಾಳಿಯ ನಂತರ ನೆತನ್ಯಾಹು ಅವರ ಜನಪ್ರಿಯತೆ ಬಹಳಷ್ಟು ಕುಸಿದಿದೆ. ಹಲವಾರು ಸಮೀಕ್ಷೆಗಳಲ್ಲಿ ಈ ವಿಷಯ ಬಹಿರಂಗವಾಗಿದೆ. 2023 ರ ಇಡೀ ವರ್ಷದಲ್ಲಿ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆಗಳು ನಡೆದಿದ್ದವು. ಆದರೆ ಯುದ್ಧ ಆರಂಭವಾದ ನಂತರ ಇಂಥ ಪ್ರತಿಭಟನೆಗಳು ಕಡಿಮೆಯಾಗಿವೆ.
ಆದರೂ ಪ್ರತಿಭಟನಾಕಾರರು ಶನಿವಾರ ರಾತ್ರಿ ಟೆಲ್ ಅವೀವ್ನ ಬೀದಿಗಳಲ್ಲಿ ಪ್ರತಿಭಟನೆ ನಡೆಸಿ ನಿಗದಿತ 2026ಕ್ಕೂ ಮುನ್ನ ದೇಶದಲ್ಲಿ ಚುನಾವಣೆ ನಡೆಸಬೇಕೆಂದು ಒತ್ತಾಯಿಸಿದರು. ಸ್ಥಳೀಯ ಮಾಧ್ಯಮಗಳ ಪ್ರಕಾರ, ಕಳೆದ ವರ್ಷದ ಸಾಮೂಹಿಕ ಪ್ರತಿಭಟನೆಗಳಿಗಿಂತ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡವರ ಸಂಖ್ಯೆ ತುಂಬಾ ಚಿಕ್ಕದಾಗಿದ್ದು, ಕೆಲವೇ ಸಾವಿರ ಜನ ಇದರಲ್ಲಿ ಭಾಗಿಯಾಗಿದ್ದರು.
ರಫಾದಲ್ಲಿ ಮಿಲಿಟರಿ ಕಾರ್ಯಾಚರಣೆ ನಿಲ್ಲಿಸುವುದಿಲ್ಲ: ರಫಾದಲ್ಲಿ ಮಿಲಿಟರಿ ಕಾರ್ಯಾಚರಣೆ ಆರಂಭಿಸದಂತೆ ಇಸ್ರೇಲ್ಗೆ ಕರೆ ನೀಡುವವರು ನಾವು ಹಮಾಸ್ ವಿರುದ್ಧದ ಯುದ್ಧದಲ್ಲಿ ಸೋಲುವಂತೆ ದೇಶಕ್ಕೆ ಹೇಳುತ್ತಿದ್ದಾರೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಶನಿವಾರ ಆರೋಪಿಸಿದರು. ಅಕ್ಟೋಬರ್ 7ರ ದಾಳಿಯ ಹಿಂದಿನ ಹಮಾಸ್ ಉಗ್ರವಾದಿಗಳನ್ನು ನಾಶಪಡಿಸುವುದಾಗಿ ಪ್ರತಿಜ್ಞೆ ಮಾಡಿರುವ ಇಸ್ರೇಲ್ ಪ್ರಧಾನಿ, ಹಮಾಸ್ ಒತ್ತೆಯಾಳುಗಳ ಬಿಡುಗಡೆಗೆ ಒಪ್ಪಿದರೂ ಇಸ್ರೇಲ್ ಪಡೆಗಳು ರಫಾ ಒಳಗೆ ನುಗ್ಗಲಿವೆ ಎಂದು ಹೇಳಿದ್ದಾರೆ. "ಒತ್ತೆಯಾಳುಗಳ ಬಿಡುಗಡೆಗೆ ಸಂಧಾನ ಯಶಸ್ವಿಯಾದರೂ ನಾವು ರಫಾ ಒಳಗಡೆ ನುಗ್ಗಲಿದ್ದೇವೆ" ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಇಸ್ರೇಲ್ ಮೇಲೆ ಅಮೆರಿಕ ಒತ್ತಡ: ಯುದ್ಧ ಆರಂಭವಾದ ನಂತರ ಗಾಜಾದಲ್ಲಿನ ಸುಮಾರು 1.4 ಮಿಲಿಯನ್ ಜನ ರಫಾಗೆ ಸ್ಥಳಾಂತರಗೊಂಡಿದ್ದಾರೆ. ಇಂಥ ಸ್ಥಿತಿಯಲ್ಲಿ ರಫಾದಲ್ಲಿ ಮಿಲಿಟರಿ ಕಾರ್ಯಾಚರಣೆ ಆರಂಭಿಸದಂತೆ ಇಸ್ರೇಲ್ನ ಪರಮ ಮಿತ್ರ ರಾಷ್ಟ್ರ ಅಮೆರಿಕ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳು ಒತ್ತಡ ಹೇರುತ್ತಿವೆ. ಏತನ್ಮಧ್ಯೆ ಸಾವುನೋವುಗಳನ್ನು ಕಡಿಮೆ ಮಾಡಲು ರಫಾದಿಂದ ನಾಗರಿಕರನ್ನು ಸ್ಥಳಾಂತರಿಸುವ ಯೋಜನೆ ಆರಂಭಿಸಿದ್ದೇವೆ ಎಂದು ಮಿಲಿಟರಿ ಸಮರ್ಥಿಸಿಕೊಂಡಿದೆ. ಆದರೆ ಜನರನ್ನು ಸ್ಥಳಾಂತರಿಸುವ ಯೋಜನೆಯ ನಿಖರ ವಿವರಗಳನ್ನು ಅದು ಬಹಿರಂಗಪಡಿಸಿಲ್ಲ.
ಶಾಂತಿ ಸಂಧಾನ ಏರ್ಪಡಿಸಲು ಇಸ್ರೇಲ್ ಮತ್ತು ಹಮಾಸ್ ಮಧ್ಯೆ ಈಜಿಪ್ಟ್ ರಾಜಧಾನಿ ಕೈರೋದಲ್ಲಿ ಮಾತುಕತೆಗಳು ನಡೆದಿವೆ. ಈ ಮಧ್ಯೆ ಗಾಜಾ ಪಟ್ಟಿಯಲ್ಲಿ ಆಹಾರ, ನೀರು ಮತ್ತು ಔಷಧಿಗಳ ಕೊರತೆಯ ಬಗ್ಗೆ ಮಾನವೀಯ ಸಹಾಯ ಸಂಘಟನೆಗಳು ಆತಂಕ ವ್ಯಕ್ತಪಡಿಸಿವೆ.
ಇದನ್ನೂ ಓದಿ : ಪಾಕಿಸ್ತಾನದ ಜಿಡಿಪಿ ಮೀರಿ ಬೆಳೆಯುತ್ತಿದೆ ಸಾಲದ ಪ್ರಮಾಣ: ಅಧ್ಯಯನ ವರದಿ