ಜೆರುಸಲೇಂ/ವಾಷಿಂಗ್ಟನ್: ಇಸ್ರೇಲ್ ಮೇಲೆ ಇರಾನ್ ಕ್ಷಿಪಣಿಗಳ ಮಳೆ ಸುರಿಸುತ್ತಿದೆ. ಪ್ರತಿಯಾಗಿ ಇಸ್ರೇಲ್ನತ್ತ ಇರಾನ್ ಸುಮಾರು 200ಕ್ಕೂ ಹೆಚ್ಚು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿದೆ. ಇದರಿಂದಾಗಿ ಪಶ್ಚಿಮ ಏಷ್ಯಾ ಮತ್ತೆ ರಣರಂಗವಾಗಿದೆ.
ಮಂಗಳವಾರ ರಾತ್ರಿ ಇರಾನ್ ಸುಮಾರು 200ಕ್ಕೂ ಅಧಿಕ ಕ್ಷಿಪಣಿಗಳನ್ನು ಇಸ್ರೇಲ್‌ನ ಪ್ರಮುಖ ನಗರಗಳಾದ ಟೆಲ್ ಅವಿವ್ ಮತ್ತು ಜೆರುಸಲೇಂ ಮೇಲೆ ಹಾರಿಸಿದೆ. ಇವುಗಳಲ್ಲಿ ಹಲವನ್ನು ಅಮೆರಿಕದ ನೆರವಿನೊಂದಿಗೆ ಇಸ್ರೇಲ್ ತಡೆಯುವಲ್ಲಿ ಯಶಸ್ವಿಯಾಗಿದೆ. ದಾಳಿಯಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು ಇಸ್ರೇಲ್ ಹೇಳಿಕೊಂಡಿದೆ. ಆದರೆ, ಸಾವು-ನೋವುಗಳ ವಿವರಗಳು ತಿಳಿದುಬಂದಿಲ್ಲ.
ಲೆಬನಾನ್‌ನಲ್ಲಿ ಹಿಜ್ಬುಲ್ಲಾ ಮೇಲೆ ಪ್ರತೀಕಾರವಾಗಿು ವಾಯುದಾಳಿ ಪ್ರಾರಂಭಿಸಿದೆ ಎಂದು ಘೋಷಣೆಯ ಕೆಲವೇ ಗಂಟೆಗಳಲ್ಲಿ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ಇರಾನ್‌ನಿಂದ ಉಡಾವಣೆಯಾದ ಕ್ಷಿಪಣಿಗಳು 12 ನಿಮಿಷಗಳಲ್ಲಿ ಇಸ್ರೇಲ್ ಪ್ರವೇಶಿಸಿವೆ ಎಂದು ವರದಿಯಾಗಿದೆ.
ನೂರಾರು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಬಳಸಲಾಗಿದೆ. ಇಸ್ರೇಲ್ ಪ್ರತೀಕಾರದ ದಾಳಿಯನ್ನು ಪ್ರಾರಂಭಿಸಿದರೆ, ತನ್ನ ಪ್ರತಿಕ್ರಿಯೆ ಮತ್ತಷ್ಟು ತೀವ್ರವಾಗಿರುತ್ತದೆ ಎಂದು ಇರಾನ್ ಎಚ್ಚರಿಸಿದೆ. ಇರಾನಿನ ಕ್ಷಿಪಣಿಗಳಿಂದ ಭಯಭೀತರಾದ ಇಸ್ರೇಲ್ ಜನರು ಬಾಂಬ್ ಶೆಲ್ಟರ್‌ಗಳಿಗೆ ಹೋಗಿ ಜೀವ ಉಳಿಸಿಕೊಂಡಿದ್ದಾರೆ. ಕೆಲವರು ರಸ್ತೆಬದಿಯ ಸುರಕ್ಷಿತ ಸ್ಥಳಗಳಲ್ಲಿ ರಕ್ಷಣೆ ಪಡೆದಿದ್ದಾರೆ. ದೇಶಾದ್ಯಂತ ಸೈರನ್‌ಗಳು ಮೊಳಗಿವೆ.
ಸರ್ಕಾರ ಟಿವಿ ಚಾನೆಲ್‌ಗಳು ಮತ್ತು ಮೊಬೈಲ್ ಫೋನ್‌ಗಳ ಮೂಲಕ ಇಸ್ರೇಲ್ ಜನರನ್ನು ಎಚ್ಚರಿಸಿದೆ. ಇರಾನ್‌ನ ಕ್ಷಿಪಣಿಗಳನ್ನು ಹೊಡೆದುರುಳಿಸಲು ಯುಎಸ್ ಅಧ್ಯಕ್ಷ ಬಿಡೆನ್ ತನ್ನ ಪಡೆಗಳಿಗೆ ಆದೇಶವನ್ನು ನೀಡಿದ್ದಾರೆ. ಇರಾನ್ ದಾಳಿಗೆ ಪ್ರತೀಕಾರ ತೀರಿಸಬೇಕು ಎಂದು ಇಸ್ರೇಲ್ ಎಚ್ಚರಿಕೆ ನೀಡಿದೆ. ಇದರೊಂದಿಗೆ ಈ ಸಮರ ವಿಸ್ತಾರಗೊಂಡು ಪ್ರಾದೇಶಿಕ ಸಮರವಾಗಿ ಪರಿವರ್ತನೆಯಾಗುವ ಸೂಚನೆ ಮೂಡಿಸಿದೆ.
ಗಡಿ ಗ್ರಾಮಗಳ ಮೇಲೆ ದಾಳಿ:ಇಸ್ರೇಲ್ 'ಸೀಮಿತ, ಸ್ಥಳೀಯ' ಕಾರ್ಯಾಚರಣೆ ಎಂದು ಕರೆಯುವ ಹಿಜ್ಬುಲ್ಲಾ ಗುರಿಗಳ ಮೇಲೆ ನಿಗಾವಹಿಸಿದೆ. ವಿಶೇಷವಾಗಿ ತಮ್ಮ ಗಡಿಯ ಸಮೀಪವಿರುವ ಹಳ್ಳಿಗಳ ಮೇಲೆ ದಾಳಿ ಮಾಡಲಾಗಿದೆ. ಉತ್ತರ ಇಸ್ರೇಲ್‌ನ ಸ್ಥಳೀಯರಿಗೆ ಅಪಾಯ ಎದುರಾಗುವ ಸಂಭವ ಹಿನ್ನೆಲೆಯಲ್ಲಿ ಈ ರೀತಿ ದಾಳಿ ಮಾಡಲಾಗುತ್ತಿದೆ ಎಂದು ಇಸ್ರೇಲ್ ಸಮರ್ಥಿಸಿಕೊಂಡಿದೆ.
ಆದರೆ, ಇಸ್ರೇಲ್ ದಾಳಿಯ ವರದಿಗಳನ್ನು ಹಿಜ್ಬುಲ್ಲಾ ನಿರಾಕರಿಸಿದೆ. ಇಸ್ರೇಲಿ ಪಡೆಗಳು ಲೆಬನಾನ್‌ಗೆ ಪ್ರವೇಶಿಸಿವೆ ಎಂಬುದು ಸುಳ್ಳು ಎಂದು ಹಿಜ್ಬುಲ್ಲಾ ಪ್ರತಿನಿಧಿ ಮೊಹಮ್ಮದ್ ಅಫೀಫಿ ಹೇಳಿದ್ದಾರೆ. ಶತ್ರುಗಳ ವಿರುದ್ಧ ನೇರವಾಗಿ ಹೋರಾಡಲು ತಮ್ಮ ಹೋರಾಟಗಾರರು ಸಿದ್ಧರಾಗಿದ್ದಾರೆ. ಮಧ್ಯಮ ಶ್ರೇಣಿಯ ಕ್ಷಿಪಣಿಗಳನ್ನು ಇಸ್ರೇಲ್ ಮೇಲೆ ಹಾರಿಸಲಾಗಿದೆ. ಇದು ಆರಂಭ ಮಾತ್ರ ಎಂದು ಅಫೀಫಿ ಎಚ್ಚರಿಸಿದ್ದಾರೆ.
ಇಸ್ರೇಲ್ ಸೇನೆಯ ಅತ್ಯಂತ ಶಕ್ತಿಶಾಲಿ ಪಡೆಗಳಲ್ಲಿ ಒಂದಾದ 'ಡಿವಿಷನ್ 98' ಪ್ಯಾರಾ ಟ್ರೂಪರ್ ಕಮಾಂಡೋಗಳು ಸೋಮವಾರ ರಾತ್ರಿ ದಕ್ಷಿಣ ಲೆಬನಾನ್ ಅನ್ನು ಪ್ರವೇಶಿಸಿವೆ. ಪ್ಯಾಲೆಸ್ತೀನ್ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ. ದಕ್ಷಿಣ ಲೆಬನಾನ್‌ನ ಕೆಲವು ಪ್ರದೇಶಗಳಿಗೆ ಪ್ರವೇಶಿಸದಂತೆ ಇಸ್ರೇಲ್ ಜನರಿಗೆ ಸಲಹೆ ನೀಡಿದೆ. ಅವಲಿ ನದಿಯ ಉತ್ತರ ಭಾಗದಲ್ಲಿರುವ ಎಲ್ಲರಿಗೂ ಸ್ಥಳಾಂತರಗೊಳ್ಳುವಂತೆ ಎಚ್ಚರಿಕೆ ನೀಡಲಾಗಿದೆ. ಹಿಜ್ಬುಲ್ಲಾದಿಂದ ಮತ್ತಷ್ಟು ದಾಳಿಗಳು ನಡೆಯುವ ಸಾಧ್ಯತೆಯಿಂದಾಗಿ ಇಸ್ರೇಲ್ ಸೇನೆಯು ಜನಸಂಚಾರಕ್ಕೆ ನಿರ್ಬಂಧ ವಿಧಿಸಿದೆ.
ನಿರಂಕುಶಾಧಿಕಾರ ಕೊನೆಗೊಳಿಸುತ್ತೇವೆ ಎಂದ ನೆತನ್ಯಾಹು:ಈ ಬಗ್ಗೆಇಸ್ರೇಲ್ ಪ್ರಧಾನಿ ನೆತನ್ಯಾಹು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಇರಾನ್‌ನಲ್ಲಿ ನಿರಂಕುಶ ಆಡಳಿತವನ್ನು ಕೊನೆಗೊಳಿಸಿ, ಅಲ್ಲಿನ ಜನರಿಗೆ ಸ್ವಾತಂತ್ರ್ಯ ನೀಡುತ್ತೇವೆ ಎಂದು ಹೇಳಿದ್ದಾರೆ. ನಾವು ಇರಾನ್‌ನ ಕೈಗೊಂಬೆಗಳನ್ನು ಒಂದೊಂದಾಗಿ ತೊಡೆದುಹಾಕುತ್ತಿದ್ದೇವೆ. ನಮ್ಮ ದೇಶ ಮತ್ತು ಜನರ ರಕ್ಷಣೆಗಾಗಿ ನಾವು ಯಾವುದೇ ಹಂತಕ್ಕೂ ಹೋಗುತ್ತೇವೆ ಎಂದು ಎಚ್ಚರಿಸಿದ್ದಾರೆ.
ನೇರ ದಾಳಿ ಸಹಿಸುವುದಿಲ್ಲ ಎಂದ ಆಸ್ಟಿನ್:ಇಸ್ರೇಲ್ ಮೇಲೆ ನೇರ ದಾಳಿ ನಡೆಸಿದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅಮೆರಿಕ ರಕ್ಷಣಾ ಸಚಿವ ಲಾಯ್ಡ್ ಆಸ್ಟಿನ್ ಇರಾನ್ಗೆ ಎಚ್ಚರಿಕೆ ನೀಡಿದ್ದಾರೆ. ತನ್ನನ್ನು ತಾನು ರಕ್ಷಿಸಿಕೊಳ್ಳುವ ಇಸ್ರೇಲ್‌ನ ಹಕ್ಕನ್ನು ಅವರು ಪುನರುಚ್ಚರಿಸಿದ್ದಾರೆ. "ಅಕ್ಟೋಬರ್ 7ರಂದು ಇಸ್ರೇಲ್ನಲ್ಲಿ ನಡೆದ ದಾಳಿಯನ್ನು ತಪ್ಪಿಸಲು ಗಡಿಯುದ್ದಕ್ಕೂ ಹಿಜ್ಬುಲ್ಲಾವನ್ನು ತಟಸ್ಥಗೊಳಿಸುವ ಅಗತ್ಯವಿದೆ. ಗಡಿಯ ಎರಡೂ ಕಡೆಯ ಜನರು ಸುರಕ್ಷಿತವಾಗಿ ತಮ್ಮ ಮನೆಗಳಿಗೆ ಮರಳಬೇಕು. ಅದಕ್ಕೆ ರಾಜತಾಂತ್ರಿಕ ನಿರ್ಣಯದ ಅಗತ್ಯವಿದೆ. ಇರಾನ್ ಮತ್ತು ಅದರ ಬೆಂಬಲಿತ ಗುಂಪುಗಳಿಂದ ಅಮೆರಿಕ ಸಿಬ್ಬಂದಿ ಮತ್ತು ಮಿತ್ರರಾಷ್ಟ್ರಗಳನ್ನು ರಕ್ಷಿಸಲು ನಾವು ಸಿದ್ಧ ಎಂದು ತಿಳಿಸಿದ್ದಾರೆ.
ಹೌತಿ ದಾಳಿ:ಶಂಕಿತ ಯೆಮೆನ್ ಹೌತಿ ಬಂಡುಕೋರರು ಕೆಂಪು ಸಮುದ್ರದಲ್ಲಿ ಹಡಗಿನ ಮೇಲೆ ದಾಳಿ ನಡೆಸಿದ್ದಾರೆ. ಇಸ್ರೇಲ್-ಹಮಾಸ್ ಯುದ್ಧ ಆರಂಭವಾದ ನಂತರ ವಾಣಿಜ್ಯ ಹಡಗಿನ ಮೇಲೆ ನಡೆದ ಮೊದಲ ದಾಳಿ ಇದಾಗಿದೆ. ಕತಾರ್, ಯುಎಇ, ಟರ್ಕಿ ಮತ್ತು ಈಜಿಪ್ಟ್‌ನಂತಹ ದೇಶಗಳು ಲೆಬನಾನ್‌ಗೆ ತಮ್ಮ ಬೆಂಬಲವನ್ನು ಘೋಷಿಸಿವೆ.
ಓದಿ:ಪ್ರವಾಸಕ್ಕೆ ತೆರಳಿದ್ದ ಶಾಲಾ ಬಸ್‌ಗೆ ಬೆಂಕಿ; 25 ವಿದ್ಯಾರ್ಥಿಗಳು ಸುಟ್ಟು ಕರಕಲು - Bangkok School Bus Fire