ರಾವಲ್ಪಿಂಡಿ: ಅಕ್ಟೋಬರ್ 18 ರವರೆಗೆ ಕುಟುಂಬ ಸದಸ್ಯರು, ವಕೀಲರು ಮತ್ತು ಪಕ್ಷದ ನಾಯಕರನ್ನು ಭೇಟಿಯಾಗದಂತೆ ಪಾಕಿಸ್ತಾನದ ಮಾಜಿ ಪ್ರಧಾನಿ ಮತ್ತು ಪಾಕಿಸ್ತಾನ್ ತೆಹ್ರೀಕ್ ಇ-ಇನ್ಸಾಫ್ (ಪಿಟಿಐ) ಸ್ಥಾಪಕ ಇಮ್ರಾನ್ ಖಾನ್ರಿಗೆ ನಿಷೇಧ ಹೇರಲಾಗಿದೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.
ಪಾಕಿಸ್ತಾನದ ಪಂಜಾಬ್ ಸರ್ಕಾರವು ಇಮ್ರಾನ್ ವಿರುದ್ಧ ಕಠಿಣ ನಿರ್ಬಂಧಗಳನ್ನು ವಿಧಿಸಿದ್ದು, ಅವರು ಬಂದಿಯಾಗಿರುವ ರಾವಲ್ಪಿಂಡಿಯ ಅಡಿಯಾಲಾ ಜೈಲಿನೊಳಗೆ ಯಾವುದೇ ಸಭೆ ನಡೆಸದಂತೆಯೂ ನಿಷೇಧಿಸಲಾಗಿದೆ. ಖಾನ್ ಸೇರಿದಂತೆ ಅಡಿಯಾಲಾ ಜೈಲಿನ ಇತರ ಎಲ್ಲಾ ಕೈದಿಗಳಿಗೆ ಈ ನಿಷೇಧ ಅನ್ವಯಿಸುತ್ತದೆ ಎಂದು ಎಆರ್ವೈ ನ್ಯೂಸ್ ವರದಿ ಮಾಡಿದೆ. ಭದ್ರತಾ ಕಾರಣಗಳಿಗಾಗಿ ಇಮ್ರಾನ್ ಖಾನ್ ಮೇಲೆ ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ಜೈಲು ಅಧಿಕಾರಿಗಳು ಹೇಳಿದ್ದಾರೆ.
ಅಕ್ಟೋಬರ್ 15 ರಿಂದ 16 ರವರೆಗೆ ಇಸ್ಲಾಮಾಬಾದ್ನಲ್ಲಿ ನಡೆಯಲಿರುವ ಶಾಂಘೈ ಸಹಕಾರ ಒಕ್ಕೂಟದ (ಎಸ್ ಸಿಒ) ಶೃಂಗಸಭೆಯ ಹಿನ್ನೆಲೆಯಲ್ಲಿ ಜೈಲಿನ ಭದ್ರತೆಯನ್ನು ಹೆಚ್ಚಿಸುವುದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ.
ಅಡಿಯಾಲಾ ಜೈಲಿನಲ್ಲಿ ಸಭೆಗಳನ್ನು ನಿಷೇಧಿಸಿರುವುದು ಇದೇ ಮೊದಲಲ್ಲ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ. ಈ ಹಿಂದೆ ಮಾರ್ಚ್ನಲ್ಲಿ 2 ವಾರಗಳ ಕಾಲ ಇಂಥದೇ ನಿಷೇಧ ಹೇರಲಾಗಿತ್ತು.