ಕರ್ನಾಟಕ

karnataka

ಟ್ರಂಪ್​ಗೆ 45 ಮಿಲಿಯನ್ ಡಾಲರ್​ ನೀಡುವ ವಾಗ್ದಾನ ಮಾಡಿಲ್ಲ: ಎಲೋನ್ ಮಸ್ಕ್​ ಸ್ಪಷ್ಟೀಕರಣ - US Elections

By ETV Bharat Karnataka Team

Published : Jul 19, 2024, 4:57 PM IST

ಅಮೆರಿಕ​ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್​ ಟ್ರಂಪ್ ಅವರಿಗೆ ತಿಂಗಳಿಗೆ 45 ಮಿಲಿಯನ್ ಡಾಲರ್ ಫಂಡಿಂಗ್ ನೀಡುವುದಾಗಿ ವಾಗ್ದಾನ ಮಾಡಿಲ್ಲ ಎಂದು ಎಲೋನ್ ಮಸ್ಕ್ ಹೇಳಿದ್ದಾರೆ.

ಎಲೋನ್ ಮಸ್ಕ್​ ಮತ್ತು ಡೊನಾಲ್ಡ್​ ಟ್ರಂಪ್
ಎಲೋನ್ ಮಸ್ಕ್​ ಮತ್ತು ಡೊನಾಲ್ಡ್​ ಟ್ರಂಪ್ (IANS)

ಸ್ಯಾನ್ ಫ್ರಾನ್ಸಿಸ್ಕೋ: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಪ್ರತಿ ತಿಂಗಳು 45 ಮಿಲಿಯನ್ ಡಾಲರ್ ದೇಣಿಗೆ ನೀಡುವ ವಾಗ್ದಾನ ಮಾಡಿಲ್ಲ ಎಂದು ಟೆಸ್ಲಾ ಮತ್ತು ಸ್ಪೇಸ್ ಎಕ್ಸ್ ಸಿಇಒ ಎಲೋನ್ ಮಸ್ಕ್ ಶುಕ್ರವಾರ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಎರಡನೇ ಬಾರಿಗೆ ಇಂಥ ವರದಿಗಳನ್ನು ಅವರು ನಿರಾಕರಿಸಿದ್ದಾರೆ.

ಮಸ್ಕ್ ಟ್ರಂಪ್​ಗೆ ಪ್ರತಿ ತಿಂಗಳು 45 ಮಿಲಿಯನ್ ಡಾಲರ್ ದೇಣಿಗೆ ನೀಡುವುದಾಗಿ ವಾಗ್ದಾನ ಮಾಡಿದ್ದಾರೆ ಮತ್ತು ಈಗ ಟ್ರಂಪ್ ಅವರ ಅಧ್ಯಕ್ಷೀಯ ಪ್ರಚಾರದ ತಂಡ ಟೀಮ್ ಎಂಎಜಿಎ (ಮೇಕ್ ಅಮೆರಿಕ ಗ್ರೇಟ್ ಎಗೇನ್) ದಲ್ಲಿದ್ದಾರೆ ಎಂದು ಬರೆಯಲಾದ ಪೋಸ್ಟ್​ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ವೈರಲ್ ಟಿಪ್ಪಣಿಗೆ ಪ್ರತಿಕ್ರಿಯಿಸಿದ ಮಸ್ಕ್, "ಈ ಪೋಸ್ಟ್​ ಸುಳ್ಳು" ಎಂದು ಹೇಳಿದರು.

"ನಾನು ಯಾರಿಗೂ ಏನನ್ನೂ ಭರವಸೆ ನೀಡಿಲ್ಲ. ಅರ್ಹತೆ ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ಬೆಂಬಲಿಸುವ ಅಭ್ಯರ್ಥಿಗಳನ್ನು ಬೆಂಬಲಿಸುವಂಥ ಪಿಎಸಿಯನ್ನು ನಾನು ರಚಿಸಿದ್ದೇನೆ. ಆದರೆ, ಈ ಪಿಎಸಿಗೆ ಇಲ್ಲಿಯವರೆಗೆ ತುಂಬಾ ಕಡಿಮೆ ಧನಸಹಾಯ ಬಂದಿದೆ" ಎಂದು ಟೆಕ್ ಬಿಲಿಯನೇರ್ ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

ಇತ್ತೀಚೆಗಷ್ಟೇ ಕೋವಿಡ್​ ಸೋಂಕಿಗೆ ತುತ್ತಾಗಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್ ಗುರುವಾರ ಟ್ರಂಪ್ ಮತ್ತು ಮಸ್ಕ್ ವಿರುದ್ಧ ವಾಗ್ದಾಳಿ ನಡೆಸಿದರು. "ನಾನು ಅನಾರೋಗ್ಯದಿಂದ ಬಳಲುತ್ತಿದ್ದೇನೆ. ಇದರ ಮಧ್ಯೆ ಎಲೋನ್ ಮಸ್ಕ್ ಮತ್ತು ಅವರ ಶ್ರೀಮಂತ ಸ್ನೇಹಿತರು ಈ ಚುನಾವಣೆಯನ್ನೇ ಖರೀದಿಸಲು ಪ್ರಯತ್ನಿಸುತ್ತಿದ್ದಾರೆ." ಎಂದು ಅವರು ಹೇಳಿದರು. ಬೈಡನ್ ಅವರ ವಲಸೆ ನೀತಿಗಳು ಮತ್ತು ಅವರ ವಯಸ್ಸಿನ ಬಗ್ಗೆ ಮಸ್ಕ್ ಆಗಾಗ ವಾಗ್ದಾಳಿ ನಡೆಸುತ್ತಿರುತ್ತಾರೆ.

ಪೊಲಿಟಿಕಲ್ ಆಕ್ಷನ್ ಕಮಿಟಿ (ಪಿಎಸಿ) ಇದು ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಮತ್ತು ಸೋಲಿಸಲು ಹಣ ಸಂಗ್ರಹಿಸುವ ಮತ್ತು ಖರ್ಚು ಮಾಡುವ ಉದ್ದೇಶಕ್ಕಾಗಿ ಆಯೋಜಿಸಲಾದ ರಾಜಕೀಯ ಸಮಿತಿಯಾಗಿದೆ. ಹೆಚ್ಚಿನ ಪಿಎಸಿಗಳು ವ್ಯಾಪಾರ, ಕಾರ್ಮಿಕ ಅಥವಾ ಸೈದ್ಧಾಂತಿಕ ಹಿತಾಸಕ್ತಿಗಳನ್ನು ಪ್ರತಿನಿಧಿಸುತ್ತವೆ. ಪಿಎಸಿಗಳು ಪ್ರತಿ ಚುನಾವಣೆಗೆ (ಪ್ರಾಥಮಿಕ, ಸಾಮಾನ್ಯ ಅಥವಾ ವಿಶೇಷ) ಅಭ್ಯರ್ಥಿ ಸಮಿತಿಗೆ $ 5,000 ನೀಡಬಹುದು.

ಪಿಎಸಿಗಳು ಯಾವುದೇ ರಾಷ್ಟ್ರೀಯ ಪಕ್ಷದ ಸಮಿತಿಗೆ ವಾರ್ಷಿಕವಾಗಿ $ 15,000 ಮತ್ತು ಇತರ ಯಾವುದೇ ಪಿಎಸಿಗೆ ವಾರ್ಷಿಕವಾಗಿ $ 5,000 ವರೆಗೆ ನೀಡಬಹುದು. ಪಿಎಸಿಗಳು ಕ್ಯಾಲೆಂಡರ್ ವರ್ಷಕ್ಕೆ ಯಾವುದೇ ಒಬ್ಬ ವ್ಯಕ್ತಿ, ಪಿಎಸಿ ಅಥವಾ ಪಕ್ಷದ ಸಮಿತಿಯಿಂದ $ 5,000 ವರೆಗೆ ಪಡೆಯಬಹುದು. ಪಿಎಸಿ ರಚನೆಯಾದ 10 ದಿನಗಳ ಒಳಗೆ ಎಫ್ಇಸಿಯಲ್ಲಿ ನೋಂದಾಯಿಸಿಕೊಳ್ಳಬೇಕು. ಪಿಎಸಿ, ಅದರ ಖಜಾಂಚಿ ಮತ್ತು ಯಾವುದೇ ಸಂಬಂಧಿತ ಸಂಸ್ಥೆಗಳಿಗೆ ಹೆಸರು ಮತ್ತು ವಿಳಾಸವನ್ನು ಒದಗಿಸಬೇಕು. ಕೊಡುಗೆ ಮಿತಿಗಳ ಉದ್ದೇಶಕ್ಕಾಗಿ ಸಂಯೋಜಿತ ಪಿಎಸಿಗಳನ್ನು ಒಬ್ಬ ದಾನಿ ಎಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ :'ಅವತ್ತು ದೇವರು ನನ್ನ ಜೊತೆಗಿದ್ದ': ಗುಂಡಿನ ದಾಳಿಯ ನಂತರ ಟ್ರಂಪ್ ಮೊದಲ ಮಾತು - Donald Trump

ABOUT THE AUTHOR

...view details