ವಾಷಿಂಗ್ಟನ್ (ಅಮೆರಿಕ) :ಅಮೆರಿಕದ ಅಧ್ಯಕ್ಷೀಯ ಚುನಾವಣಾ ಕಣದಲ್ಲಿ ಹಾಲಿ ಅಧ್ಯಕ್ಷ ಜೋ ಬೈಡನ್ ಮತ್ತು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೋರಾಟ ನಿಕ್ಕಿಯಾಗಿದೆ. ಅಧ್ಯಕ್ಷೀಯ ಸ್ಪರ್ಧೆಗೆ ಈ ಇಬ್ಬರೂ ನಾಯಕರು ಅಂತಿಮಗೊಂಡಿದ್ದಾರೆ. ಅಮೆರಿಕ ಇತಿಹಾಸದಲ್ಲಿ ಅಧ್ಯಕ್ಷರುಗಳ ನಡುವಿನ 'ಮರು ಹೋರಾಟ' ಎರಡನೇ ಬಾರಿಯಾಗಿದೆ.
81 ವರ್ಷದ ಹಾಲಿ ಅಧ್ಯಕ್ಷ ಜೋ ಬೈಡನ್ ಅವರು ಡೆಮಾಕ್ರಟಿಕ್ ಪಕ್ಷದಿಂದ ಏಕಮಾತ್ರ ಅಭ್ಯರ್ಥಿಯಾಗಿ ನಾಮನಿರ್ದೇಶನಗೊಂಡಿದ್ದಾರೆ. ಇವರಿಗೆ 3,933 ಪ್ರತಿನಿಧಿಗಳು ಬೆಂಬಲ ನೀಡಿದ್ದರೆ, ಪಕ್ಷದ ಅಭ್ಯರ್ಥಿಯಾಗಿ ನಿಲ್ಲಲು ಬೇಕಾಗಿದ್ದು 1968 ಮತಗಳು. ಇದನ್ನು ಬೈಡನ್ ದಾಟಿದ್ದಾರೆ. ಪ್ರಾಥಮಿಕ ಅಧ್ಯಕ್ಷೀಯ ಅಭ್ಯರ್ಥಿ ಆಯ್ಕೆಯಲ್ಲಿ ಬೈಡನ್ ಅವರ ಪರವಾಗಿ ಭಾರೀ ಬೆಂಬಲ ವ್ಯಕ್ತವಾಗಿದೆ. ಆಗಸ್ಟ್ನಲ್ಲಿ ಚಿಕಾಗೋದಲ್ಲಿ ನಡೆಯುವ ಡೆಮಾಕ್ರಟಿಕ್ ನ್ಯಾಶನಲ್ ಕನ್ವೆನ್ಶನ್‌ನಲ್ಲಿ ಅವರನ್ನು ಪಕ್ಷದ ನಾಮನಿರ್ದೇಶಿತ ಅಭ್ಯರ್ಥಿಯಾಗಿ ಅಧಿಕೃತ ಘೋಷಣೆಯಾಗಲಿದ್ದಾರೆ.
ಇತ್ತ, 91 ಪ್ರಕರಣಗಳಲ್ಲಿ ಸಿಲುಕಿ ಕಾನೂನು ಹೋರಾಟ ನಡೆಸುತ್ತಿರುವ ಮಾಜಿ ಅಧ್ಯಕ್ಷ 77 ವರ್ಷದ ಡೊನಾಲ್ಡ್ ಟ್ರಂಪ್ ರಿಪಬ್ಲಿಕ್ ಪಕ್ಷದಿಂದ ಅಭ್ಯರ್ಥಿಯಾಗಿ ಸೂಚಿತರಾಗಿದ್ದಾರೆ. ಇವರು ಹಲವು ರಾಜ್ಯಗಳಿಂದ 1215 ಮತಗಳನ್ನು ಗಳಿಸಿದ್ದಾರೆ. ಈ ಮೂಲ ಸತತ ಮೂರನೇ ಬಾರಿಗೆ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷವನ್ನು ಮುನ್ನಡೆಸಲಿದ್ದಾರೆ. ಪ್ರಾಥಮಿಕ ಆಯ್ಕೆ ಟ್ರಯಲ್ನಲ್ಲಿ ಟ್ರಂಪ್ಗೆ ಅಷ್ಟೇನೂ ಬೆಂಬಲ ಇಲ್ಲವಾದರೂ, ಪಕ್ಷದ ಪ್ರಮುಖ ಹುರಿಯಾಳಾಗಿ ಕಣಕ್ಕಿಳಿಯಲಿದ್ದಾರೆ. ಜುಲೈನಲ್ಲಿ ಮಿಲ್ವಾಕಿಯಲ್ಲಿ ನಡೆಯಲಿರುವ ರಿಪಬ್ಲಿಕನ್ ರಾಷ್ಟ್ರೀಯ ಸಮಾವೇಶದಲ್ಲಿ ಟ್ರಂಪ್ ಅಧಿಕೃತ ಅಭ್ಯರ್ಥಿಯಾಗಿ ಪ್ರಕಟವಾಗಲಿದ್ದಾರೆ.
ಭಾರತೀಯ ಮೂಲದ ವಿಶ್ವಸಂಸ್ಥೆಯ ಮಾಜಿ ರಾಯಭಾರಿ ನಿಕ್ಕಿ ಹ್ಯಾಲೆ ಮತ್ತು ಫ್ಲೋರಿಡಾ ಗವರ್ನರ್ ರಾನ್ ಡಿಸಾಂಟಿಸ್ ಸೇರಿದಂತೆ ಹಲವಾರು ಅಭ್ಯರ್ಥಿಗಳನ್ನು ಟ್ರಂಪ್ ಪ್ರಾಥಮಿಕ ಚುನಾವಣೆಗಳಲ್ಲಿ ಸೋಲಿಸಿದ್ದಾರೆ. ಟ್ರಂಪ್ ಅವರ ಮಾಜಿ ಉಪಾಧ್ಯಕ್ಷ ಮೈಕ್ ಪೆನ್ಸ್ ಸೇರಿದಂತೆ ಇತರ ಅಭ್ಯರ್ಥಿಗಳು ಮತದಾರರ ಬೆಂಬಲದ ಕೊರತೆಯಿಂದಾಗಿ ಚುನಾವಣೆಯಿಂದ ಹಿಂದೆ ಸರಿದಿದ್ದರು.
2ನೇ ಸಲ ಅಧ್ಯಕ್ಷರುಗಳ ಫೈಟ್:ಅಮೆರಿಕ ಅಧ್ಯಕ್ಷೀಯ ಚುನಾವಣೆ ಇತಿಹಾಸದಲ್ಲಿ ಎರಡನೇ ಬಾರಿಗೆ ಅಧ್ಯಕ್ಷರುಗಳ ಮರು ಹೋರಾಟಕ್ಕೆ ವೇದಿಕೆ ಸಿದ್ಧವಾಗಿದೆ. ಜೋ ಬೈಡನ್ ಹಾಲಿ ಅಧ್ಯಕ್ಷರಾಗಿದ್ದರೆ, ಟ್ರಂಪ್ ಮಾಜಿ ಅಧ್ಯಕ್ಷರಾಗಿದ್ದಾರೆ. ಇದಕ್ಕೂ ಮೊದಲು 1956 ರಲ್ಲಿ ರಿಪಬ್ಲಿಕನ್ ಅಧ್ಯಕ್ಷ ಡ್ವೈಟ್ ಡಿ ಐಸೆನ್‌ಹೋವರ್ ಮತ್ತು ಡೆಮಾಕ್ರಟಿಕ್ ಪಕ್ಷದ ಅಡ್ಲೈ ಸ್ಟೀವನ್‌ಸನ್ ಅವರು ಚುನಾವಣೆಗೆ ಸ್ಪರ್ಧಿಸಿದ್ದರು. ಇಬ್ಬರೂ ಮಾಜಿ ಅಧ್ಯಕ್ಷರಾಗಿದ್ದರು. ಇದರಲ್ಲಿ ಸ್ಟೀವನ್‌ಸನ್ ಸೋಲು ಕಂಡಿದ್ದರು. ಇದೀಗ ಟ್ರಂಪ್ ಮತ್ತು ಬೈಡನ್ ಎರಡನೇ ಬಾರಿಗೆ ಮತ್ತೆ ಎದುರಾಗುತ್ತಿದ್ದಾರೆ. 2020ರಲ್ಲಿ ನಡೆದ ಚುನಾವಣೆಯಲ್ಲಿ ಟ್ರಂಪ್ ಅವರು ಬೈಡನ್ ಎದುರು ಸೋಲು ಕಂಡಿದ್ದರು.
ಟ್ರಂಪ್ಗೆ ಮುಳುವಾಗುತ್ತಾ ಕ್ರಿಮಿನಲ್ ಕೇಸ್?:ಮೂರನೇ ಬಾರಿಗೆ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುತ್ತಿರುವ ಡೊನಾಲ್ಡ್ ಟ್ರಂಪ್ 91 ಆರೋಪಗಳನ್ನು ಎದುರಿಸುತ್ತಿದ್ದಾರೆ. ಈ ಪೈಕಿ ನೀಲಿಚಿತ್ರ ತಾರೆಗೆ ಹಣ ನೀಡಿದ ಕ್ರಿಮಿನಲ್ ಅಪರಾಧದಲ್ಲಿ ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇದೆ. ಇದು ಮುಂದಿನ ಚುನಾವಣೆಗೆ ಅಡ್ಡಿಯಾಗುವ ಆತಂಕವೂ ಇದೆ. ಮಾರ್ಚ್ 25 ರಂದು ನ್ಯೂಯಾರ್ಕ್ ಕೋರ್ಟ್ನಲ್ಲಿ ಈ ಪ್ರಕರಣದ ಅಂತಿಮ ವಿಚಾರಣೆ ನಡೆಯಲಿದೆ.
ಇದನ್ನೂ ಓದಿ:ಆರ್ಥಿಕತೆ ಚೇತರಿಕೆಗೆ ಸಚಿವರಿಗೆ ಪಾಕ್ ಪ್ರಧಾನಿ ಷರೀಫ್ "ಮಾಡು ಇಲ್ಲವೇ ಮಡಿ" ಟಾಸ್ಕ್