ಬಾಗ್ದಾದ್: ಬಾಗ್ದಾದ್‌ನ ಉತ್ತರ ಭಾಗದಲ್ಲಿರುವ ಸಲಾಹುದ್ದೀನ್ ಪ್ರಾಂತ್ಯದಲ್ಲಿ ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರರ ಅಡಗುತಾಣಗಳ ಮೇಲೆ ನಡೆಸಲಾದ ಎರಡು ವೈಮಾನಿಕ ದಾಳಿಯಲ್ಲಿ ಏಳು ಐಸಿಸ್ ಉಗ್ರರು ಸಾವನ್ನಪ್ಪಿದ್ದಾರೆ ಎಂದು ಇರಾಕ್ ಸೇನೆ ತಿಳಿಸಿದೆ.
ಗುಪ್ತಚರ ವರದಿಗಳ ಆಧಾರದ ಮೇಲೆ, ಇರಾಕಿ ಯುದ್ಧ ವಿಮಾನಗಳು ಪ್ರಾಂತ್ಯದ ಈಶಾನ್ಯ ಭಾಗದ ಪರ್ವತ ಪ್ರದೇಶದಲ್ಲಿನ ಐಸಿಸ್ ಅಡಗುತಾಣಗಳು ಮತ್ತು ಉಗ್ರಗಾಮಿಗಳು ಬಳಸುವ ಸುರಂಗದ ಮೇಲೆ ಎರಡು ವೈಮಾನಿಕ ದಾಳಿಗಳನ್ನು ನಡೆಸಿವೆ ಎಂದು ಇರಾಕ್ ಜಂಟಿ ಕಾರ್ಯಾಚರಣೆ ಕಮಾಂಡ್ಗೆ ಸಂಯೋಜಿತವಾಗಿರುವ ಮಾಧ್ಯಮ ಸಂಸ್ಥೆ ಸೆಕ್ಯುರಿಟಿ ಮೀಡಿಯಾ ಸೆಲ್ ಶನಿವಾರ ಹೇಳಿಕೆಯಲ್ಲಿ ತಿಳಿಸಿದೆ.
ಆರಂಭಿಕ ವರದಿಗಳ ಪ್ರಕಾರ, ವೈಮಾನಿಕ ದಾಳಿಯ ಪರಿಣಾಮವಾಗಿ ಐಸಿಸ್ ಸಂಘಟನೆಯ ಪ್ರಮುಖ ನಾಯಕ ಸೇರಿದಂತೆ ಏಳು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ ಎಂದು ಕ್ಸಿನ್ಹುವಾ ಸುದ್ದಿಸಂಸ್ಥೆ ವರದಿ ಮಾಡಿದೆ. 2017ರಲ್ಲಿ ಐಸಿಸ್ ಅನ್ನು ಇರಾಕ್ ಬಹುತೇಕ ನಿರ್ನಾಮಗೊಳಿಸಿದೆ. ಆದಾಗ್ಯೂ ಅಲ್ಲಲ್ಲಿ ಉಳಿದುಕೊಂಡಿರುವ ಸಂಘಟನೆಯ ಉಗ್ರವಾದಿಗಳು ಭದ್ರತಾ ಪಡೆಗಳು ಮತ್ತು ನಾಗರಿಕರ ವಿರುದ್ಧ ಆಗಾಗ ಗೆರಿಲ್ಲಾ ದಾಳಿಗಳನ್ನು ನಡೆಸುತ್ತಿರುತ್ತಾರೆ.
ಪ್ಯಾರಿಸ್ ಒಲಿಂಪಿಕ್ಸ್ ಮೇಲೆ ಐಸಿಸ್ ಆತಂಕ: 2017ರಲ್ಲಿ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ (ಐಸಿಸ್) ನಿರ್ಮೂಲನೆಯೊಂದಿಗೆ, ಜಗತ್ತು ಇಸ್ಲಾಮಿಕ್ ಉಗ್ರಗಾಮಿಗಳ ಭಯೋತ್ಪಾದನೆಯಿಂದ ಬಹುತೇಕ ಮುಕ್ತವಾಯಿತು ಎಂದುಕೊಳ್ಳಲಾಗಿತ್ತು. ಆದರೆ ಅದು ಹಾಗಾಗಲಿಲ್ಲ. ಇತ್ತೀಚಿನ ದಿನಗಳಲ್ಲಿ ಐಸಿಸ್ ಹಲವಾರು ದಾಳಿಗಳನ್ನು ನಡೆಸಿದ್ದು, ಇದರ ಜವಾಬ್ದಾರಿಯನ್ನು ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಪ್ರಾಂತ್ಯ ವಹಿಸಿಕೊಂಡಿದೆ. ಇದೇ ಭಯೋತ್ಪಾದಕ ಗುಂಪು ಮಾಸ್ಕೋದ ಸಂಗೀತ ಕಚೇರಿಯ ಸಭಾಂಗಣದ ಮೇಲೆ ದಾಳಿ ಮಾಡಿತ್ತು. ಈ ದಾಳಿಯಲ್ಲಿ ಸುಮಾರು ನೂರೈವತ್ತು ಜನ ಸಾವಿಗೀಡಾಗಿದ್ದರು.
ಇತ್ತೀಚಿನ ತಿಂಗಳುಗಳಲ್ಲಿ, ಐಸಿಸ್ ಯುರೋಪ್ನಲ್ಲಿ ನಡೆಯುವ ಕ್ರೀಡಾಕೂಟಗಳ ಮೇಲೆ ದಾಳಿ ನಡೆಸಲು ಯೋಜಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಅಕ್ಟೋಬರ್ 2023ರಲ್ಲಿ ಗಾಜಾ ಯುದ್ಧ ಪ್ರಾರಂಭವಾದಾಗಿನಿಂದ ಯುರೋಪ್ನಲ್ಲಿ ಇಸ್ಲಾಮಿಕ್ ಉಗ್ರಗಾಮಿಗಳ ಭಯೋತ್ಪಾದಕ ಚಟುವಟಿಕೆಗಳಲ್ಲಿ ಏರಿಕೆ ಕಂಡು ಬಂದಿದೆ. ಅಲ್ಲದೆ ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟಗಳ ಸಂದರ್ಭದಲ್ಲಿ ಐಸಿಸ್ ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಲು ಯೋಜಿಸುತ್ತಿದೆ ಎಂಬ ಗುಪ್ತಚರ ವರದಿಗಳ ಹಿನ್ನೆಲೆಯಲ್ಲಿ ಪ್ಯಾರಿಸ್ ಒಲಿಂಪಿಕ್ಸ್ನ ಭದ್ರತೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಇದನ್ನೂ ಓದಿ: ಹಜ್ ಯಾತ್ರೆ ವೇಳೆ ಬಿಸಿಲಿನ ತಾಪದಿಂದ 98 ಭಾರತೀಯರ ಸಾವು: ಯಾತ್ರಿಕರ ಸುರಕ್ಷತೆಗಾಗಿ 365 ವೈದ್ಯರ ನಿಯೋಜನೆ - annual Muslim pilgrimage of Haj