ಕರ್ನಾಟಕ

karnataka

ETV Bharat / health

ಸ್ಥೂಲಕಾಯದ ನಿರ್ಲಕ್ಷ್ಯ ಬೇಡ: ಈ ಕಾಯಿಲೆಗಳ ಬಗ್ಗೆ ಗೊತ್ತಿದೆಯೇ? ಪರಿಹಾರ ಹೀಗಿರಲಿ - ವಿಶ್ವ ಸ್ಥೂಲಕಾಯ ದಿನ

ಸ್ಥೂಲಕಾಯತೆಯ ಗಂಭೀರ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಲು ಪ್ರಪಂಚದಾದ್ಯಂತ ಇಂದು 'ವಿಶ್ವ ಸ್ಥೂಲಕಾಯ ದಿನ' ಆಚರಿಸಲಾಗುತ್ತದೆ.

world obesity day
ವಿಶ್ವ ಸ್ಥೂಲಕಾಯ ದಿನ

By ETV Bharat Karnataka Team

Published : Mar 4, 2024, 6:33 AM IST

ಹೈದರಾಬಾದ್:ಇಂದು ವಿಶ್ವ ಸ್ಥೂಲಕಾಯ ದಿನ. ಸ್ಥೂಲಕಾಯತೆಯನ್ನು ಪ್ರಸ್ತುತ ದೇಶ ಮತ್ತು ಪ್ರಪಂಚದೆಲ್ಲೆಡೆ ಗಂಭೀರ ಕಾಯಿಲೆ ಎಂದೇ ಪರಿಗಣಿಸಲಾಗಿದೆ. ವಾಸ್ತವವಾಗಿ, ಇದು ಅನೇಕ ಗಂಭೀರ ಕಾಯಿಲೆಗಳಿಗೆ ಮುಖ್ಯ ಕಾರಣಗಳಲ್ಲಿ ಒಂದು.

ಉದ್ದೇಶ: ಸ್ಥೂಲಕಾಯತೆಯ ಗಂಭೀರ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡುವ ಮತ್ತು ಎಲ್ಲಾ ವಯಸ್ಸಿನವರಲ್ಲಿಯೂ ಅದನ್ನು ತಡೆಗಟ್ಟಲು ಜನರನ್ನು ಪ್ರೇರೇಪಿಸುವ ಉದ್ದೇಶದಿಂದ ಪ್ರತಿ ವರ್ಷ ಮಾರ್ಚ್ 4ರಂದು ವಿಶ್ವ ಸ್ಥೂಲಕಾಯ ದಿನ ಆಚರಣೆ ನಡೆಯುತ್ತದೆ.

ಸ್ಥೂಲಕಾಯ ಎಂದರೇನು?: ಸ್ಥೂಲಕಾಯವನ್ನು ದೇಹದ ಹೆಚ್ಚುವರಿ ಕೊಬ್ಬಿನ ಸಂಗ್ರಹ ಎಂದು ಕರೆಯಲಾಗುತ್ತದೆ. ಇದು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ವ್ಯಕ್ತಿಯ ತೂಕವನ್ನು ವ್ಯಕ್ತಿಯ ಎತ್ತರದಿಂದ ವಿಭಜಿಸುವ ಮೂಲಕ ಪಡೆದ ಮಾಪನವಾದ ಬಾಡಿ ಮಾಸ್ ಇಂಡೆಕ್ಸ್ (ಬಿಎಂಐ) 30 ಕೆ.ಜಿ/ಮೀ 2ಗಿಂತ ಹೆಚ್ಚಿದ್ದಾಗ, 25-30 ಕೆ.ಜಿ/ಮೀ 2 ವ್ಯಾಪ್ತಿಯನ್ನು ಅಧಿಕ ತೂಕ ಎಂದು ಪರಿಗಣಿಸಿ ಸ್ಥೂಲಕಾಯವನ್ನು ನಿರ್ಧರಿಸಲಾಗುತ್ತದೆ.

ಸ್ಥೂಲಕಾಯದಿಂದ ಉಂಟಾಗುವ ಕಾಯಿಲೆಗಳು ಯಾವುವು?: ಸ್ಥೂಲಕಾಯ ವಿವಿಧ ಕಾಯಿಲೆಗಳಿಗೆ ಕಾರಣವಾಗುತ್ತದೆ. ವಿಶೇಷವಾಗಿ ಹೃದ್ರೋಗ, ಟೈಪ್ 2 ಮಧುಮೇಹ, ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ ಹಾಗು ಕೆಲವು ರೀತಿಯ ಕ್ಯಾನ್ಸರ್ ಮತ್ತು ಆಸ್ಟಿಯೋಆರ್ಥ್ರೈಟಿಸ್ ಸೇರಿದೆ.

ಇತಿಹಾಸ: ಇದನ್ನು ಪ್ರತಿ ಮಾರ್ಚ್ 4ರಂದು ಆಚರಿಸಲಾಗುತ್ತದೆ. ವಿಶ್ವ ಸ್ಥೂಲಕಾಯ ಒಕ್ಕೂಟವು ತನ್ನ ಜಾಗತಿಕ ಸದಸ್ಯರ ಸಹಯೋಗದೊಂದಿಗೆ ಇದನ್ನು ಆಯೋಜಿಸುತ್ತದೆ. ನೂರಾರು ವ್ಯಕ್ತಿಗಳು, ಸಂಸ್ಥೆಗಳು ವಿಶ್ವ ಸ್ಥೂಲಕಾಯ ದಿನಕ್ಕೆ ತಮ್ಮದೇ ರೀತಿಯಲ್ಲಿ ಕೊಡುಗೆ ನೀಡುತ್ತಿದ್ದಾರೆ. ವಿಶ್ವದಾದ್ಯಂತ ಲಕ್ಷಾಂತರ ಜನರು ಈ ದಿನ ತೊಡಗಿಸಿಕೊಳ್ಳುತ್ತಾರೆ. ಈ ದಿನವು ಆರೋಗ್ಯಕರ ತೂಕವನ್ನು ಸಾಧಿಸಲು ಮತ್ತು ನಿರ್ವಹಿಸಲು, ಸರಿಯಾದ ಚಿಕಿತ್ಸೆಯನ್ನು ತೆಗೆದುಕೊಳ್ಳಲು ಮತ್ತು ಸ್ಥೂಲಕಾಯ ತಡೆಗಟ್ಟಲು ಜನರಿಗೆ ಸಹಾಯ ಮಾಡುವ ಪ್ರಾಯೋಗಿಕ ಪರಿಹಾರಗಳನ್ನು ಪ್ರೋತ್ಸಾಹಿಸುತ್ತದೆ. ಈ ವರ್ಷದ ಅಭಿಯಾನದ ಥೀಮ್ 'ಸ್ಥೂಲಕಾಯತೆಯ ಬಗ್ಗೆ ಮಾತನಾಡೋಣ ಮತ್ತು..' ಎಂಬುದಾಗಿದೆ.

1990ರಿಂದ 2022ರವರೆಗೆ ವಿಶ್ವಾದ್ಯಂತ ಮಕ್ಕಳು ಮತ್ತು ಹದಿಹರೆಯದವರಲ್ಲಿ ಸ್ಥೂಲಕಾಯ ಪ್ರಮಾಣವು ನಾಲ್ಕು ಪಟ್ಟು ಹೆಚ್ಚಾಗಿದೆ. ಆದರೆ ವಯಸ್ಕರಲ್ಲಿ ಸ್ಥೂಲಕಾಯ ಪ್ರಮಾಣವು ದ್ವಿಗುಣಗೊಂಡಿದೆ ಎಂದು ದಿ ಲ್ಯಾನ್ಸೆಟ್​ನಲ್ಲಿ ಪ್ರಕಟವಾದ ಹೊಸ ಅಧ್ಯಯನ ಬಹಿರಂಗಪಡಿಸಿದೆ. ವಿಶ್ವಾದ್ಯಂತ ಸ್ಥೂಲಕಾಯತೆಯೊಂದಿಗೆ ಬದುಕುತ್ತಿರುವ ಮಕ್ಕಳು, ಹದಿಹರೆಯದವರು ಮತ್ತು ವಯಸ್ಕರ ಒಟ್ಟು ಸಂಖ್ಯೆ ಒಂದು ಬಿಲಿಯನ್ ಮೀರಿದೆ.

ಒಟ್ಟಾರೆಯಾಗಿ, 2022ರಲ್ಲಿ 159 ಮಿಲಿಯನ್ ಮಕ್ಕಳು, ಹದಿಹರೆಯದವರು ಮತ್ತು 879 ಮಿಲಿಯನ್ ವಯಸ್ಕರು ಸ್ಥೂಲಕಾಯ ಹೊಂದಿದ್ದರು. ವಿಶ್ವ ಆರೋಗ್ಯ ಸಂಸ್ಥೆಯ ಸಹಯೋಗದೊಂದಿಗೆ ಎನ್ಸಿಡಿ ರಿಸ್ಕ್ ಫ್ಯಾಕ್ಟರ್ ಕೊಲಾಬರೇಶನ್ (NCD-RisC) ಈ ಅಧ್ಯಯನ ನಡೆಸಿದೆ. 190ಕ್ಕೂ ಹೆಚ್ಚು ದೇಶಗಳಲ್ಲಿ 1,500ಕ್ಕೂ ಹೆಚ್ಚು ಸಂಶೋಧಕರು ಐದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ 220 ಮಿಲಿಯನ್ ಜನರ ತೂಕ ಮತ್ತು ಎತ್ತರ ಮಾಪನಗಳನ್ನು ವಿಶ್ಲೇಷಿಸಿದ್ದಾರೆ. 1990ರಿಂದ 2022ರವರೆಗೆ ವಿಶ್ವಾದ್ಯಂತ ಸ್ಥೂಲಕಾಯ ಮತ್ತು ಕಡಿಮೆ ತೂಕ ಹೇಗೆ ಬದಲಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಅವರು ಬಾಡಿ ಮಾಸ್ ಇಂಡೆಕ್ಸ್ (ಬಿಎಂಐ) ಪರಿಶೀಲಿಸಿದ್ದಾರೆ ಎಂದು ವರದಿಯಾಗಿದೆ.

ಭಾರತದಲ್ಲಿ ಸ್ಥೂಲಕಾಯತೆಯ ಪ್ರಮಾಣ: ದಿ ಲ್ಯಾನ್ಸೆಟ್ ಪ್ರಕಟಿಸಿದ ಹೊಸ ಜಾಗತಿಕ ವಿಶ್ಲೇಷಣೆಯು, ದೇಶದಲ್ಲಿ 5ರಿಂದ 19 ವರ್ಷದೊಳಗಿನ 12.5 ಮಿಲಿಯನ್ ಮಕ್ಕಳು (7.3 ಮಿಲಿಯನ್ ಹುಡುಗರು ಮತ್ತು 5.2 ಮಿಲಿಯನ್ ಹುಡುಗಿಯರು) 2022ರಲ್ಲಿ ಸಂಪೂರ್ಣ ಅಧಿಕ ತೂಕವನ್ನು ಹೊಂದಿದ್ದಾರೆ ಎಂದು ಕಂಡುಹಿಡಿದಿದೆ. ಈ ವರದಿಯು ಮಕ್ಕಳು ಮತ್ತು ಹದಿಹರೆಯದವರಲ್ಲಿ ಶೇಕಡಾ 3ಕ್ಕಿಂತ ಹೆಚ್ಚು ಹರಡುವಿಕೆಯನ್ನು ತೋರಿಸಿದೆ. ಇದು 1990ಕ್ಕೆ ಹೋಲಿಸಿದರೆ ಶೇಕಡಾ 3ಕ್ಕಿಂತ ಹೆಚ್ಚು. ಈ ವರದಿಯನ್ನು ಫೆಬ್ರವರಿ 29, 2024ರಂದು ಪ್ರಕಟಿಸಲಾಯಿತು. ಜಾಗತಿಕವಾಗಿ, ಭಾರತ 2022ರಲ್ಲಿ ಮಹಿಳೆಯರಲ್ಲಿ ಸ್ಥೂಲಕಾಯತೆಗೆ 182ನೇ ಸ್ಥಾನ ಮತ್ತು ಪುರುಷರಿಗೆ 180ನೇ ಸ್ಥಾನದಲ್ಲಿದೆ ಮತ್ತು ಬಾಲಕಿಯರು ಮತ್ತು ಬಾಲಕರಿಗೆ 174ನೇ ಸ್ಥಾನದಲ್ಲಿದೆ.

ಮಹಿಳೆಯರ ಸ್ಥೂಲಕಾಯತೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಸ್ಥೂಲಕಾಯ ಹೊಂದಿರುವ ಮಹಿಳೆಯರು ಈಗ ಶೇಕಡಾ 9.8ರಷ್ಟಿದ್ದಾರೆ. (1990ರಿಂದ ಶೇಕಡಾ 8.6ರಷ್ಟು ಹೆಚ್ಚಾಗಿದೆ). ಪುರುಷರು ಶೇಕಡಾ 5.4 (ಶೇಕಡಾ 4.9 ಪಾಯಿಂಟ್​ಗಳು ಏರಿಕೆಯಾಗಿದೆ).

ಪರಿಹಾರವೇನು?:ಸ್ಥೂಲಕಾಯತೆಗೆ ಚಿಕಿತ್ಸೆ ನೀಡಲು ಉತ್ತಮ ಮಾರ್ಗವೆಂದರೆ ಆರೋಗ್ಯಕರ, ಕಡಿಮೆ ಕ್ಯಾಲೊರಿ ಆಹಾರವನ್ನು ಸೇವಿಸುವುದು. ನಿಯಮಿತವಾಗಿ ವ್ಯಾಯಾಮ ಮಾಡುವುದು. ತೂಕ ನಷ್ಟ ನಿರ್ವಹಣೆಗೆ ಆರೋಗ್ಯ ವೃತ್ತಿಪರರು ಅಥವಾ ಆಹಾರ ತಜ್ಞರು ಶಿಫಾರಸು ಮಾಡಿದಂತೆ ಸಮತೋಲಿತ, ಕ್ಯಾಲೊರಿ-ನಿಯಂತ್ರಿತ ಆಹಾರವನ್ನು ಸೇವಿಸುವುದು. ವಾರಕ್ಕೆ 150ರಿಂದ 300 ನಿಮಿಷಗಳ ಕಾಲ ವೇಗದ ವಾಕಿಂಗ್, ಜಾಗಿಂಗ್, ಈಜು ಅಥವಾ ಟೆನಿಸ್‌ನಂತಹ ಚಟುವಟಿಕೆಗಳನ್ನು ಮಾಡುವುದು. ನಿಧಾನವಾಗಿ ತಿನ್ನುವುದು ಮತ್ತು ಅತಿಯಾಗಿ ತಿನ್ನುವುದನ್ನು ತಪ್ಪಿಸುವುದು. ಜೀವನಶೈಲಿಯ ಬದಲಾವಣೆಗಳು ಮಾತ್ರ ತೂಕ ಇಳಿಸಿಕೊಳ್ಳಲು ನಿಮಗೆ ಸಹಾಯ ಮಾಡದಿದ್ದರೆ, ಆರ್ಲಿಸ್ಟಾಟ್ ಎಂಬ ಔಷಧಿಯನ್ನು ತೆಗೆದುಕೊಳ್ಳಬಹುದು. ಅನಿವಾರ್ಯ ಸಂದರ್ಭಗಳಲ್ಲಿ ತೂಕ ಇಳಿಸುವ ಶಸ್ತ್ರಚಿಕಿತ್ಸೆಯನ್ನು ತಜ್ಞ ವೈದ್ಯರ ಸಲಹೆಯೊಂದಿಗೆ ಪಡೆದುಕೊಳ್ಳಬಹುದು.

ಇದನ್ನೂ ಓದಿ:ಗಮನ ಮತ್ತು ಕಣ್ಣಿನ ನಿಕಟ ಸಂಬಂಧದ ಕುರಿತು ಐಐಎಸ್ಸಿ ಎರಡು ಹೊಸ ಅಧ್ಯಯನ

ABOUT THE AUTHOR

...view details