ಕರ್ನಾಟಕ

karnataka

ದಾನಕ್ಕಾಗಿ ಮಿಡಿಯುತ್ತಿರುವ 283 ಜನರ ಹೃದಯ: ಮರಣದ ನಂತರವೂ ಜೀವಿಸಲು ಇಲ್ಲಿದೆ ಮಾರ್ಗ! - organ donation

By ETV Bharat Karnataka Team

Published : Aug 17, 2024, 9:41 PM IST

ಉತ್ತರ ಕನ್ನಡ ಜಿಲ್ಲೆಯಲ್ಲಿ 18 ವರ್ಷದಿಂದ 60 ವರ್ಷ ಮೇಲ್ಪಟ್ಟ ವಯೋಮಿತಿಯವರು ಅಂಗಾಂಗ ದಾನ ಮಾಡಲು ಈವರೆಗೆ 483 ಜನ ನೋಂದಾಯಿಸಿಕೊಂಡಿದ್ದಾರೆ. ಇವರಲ್ಲಿ ಮಹಿಳೆಯರ ಸಂಖ್ಯೆಯೇ ಅತ್ಯಧಿಕವಾಗಿದೆ. 283 ಜನರು ಹೃದಯ ದಾನ ಮಾಡಲು ಒಪ್ಪಿಗೆ ನೀಡಿದ್ದಾರೆ.

Uttara Kannada  organ donation  agree for organ donation
ಸಾಂದರ್ಭಿಕ ಚಿತ್ರ (ETV Bharat)

ಕಾರವಾರ:ಜಗತ್ತಿನಲ್ಲಿ ಜನಿಸಿದ ಪ್ರತೀ ಜೀವಿಯೂ ಮರಣ ಹೊಂದಲೇಬೇಕು ಎನ್ನುವುದು ನಿಸರ್ಗ ನಿಯಮ. ಯಾವುದೇ ಸಾಧನೆಗಳನ್ನು ಮಾಡಲು ದೇಹ ಅಗತ್ಯ. ಆದರೆ, ಜೀವಿತಾವಧಿಯಲ್ಲಿ ಯಾವುದೇ ಸಾಧನೆ ಮಾಡದೇ ಇದ್ದರೂ ವ್ಯರ್ಥವಾಗಿ ಸಾಯುವ ಬದಲು, ಮರಣದ ನಂತರವಾದರೂ ತಮ್ಮ ಅಂಗಾಂಗಗಳನ್ನು ದಾನ ಮಾಡುವುದರ ಮೂಲಕ ಮತ್ತೊಬ್ಬರ ದೇಹದ ಮೂಲಕ ಸದಾ ಜೀವಂತವಾಗಿರಬಹುದು.

ಪ್ರತಿವರ್ಷ ಅನೇಕ ಜನರು ಅಂಗಾಂಗ ವೈಫಲ್ಯದಿಂದ ಮರಣ ಹೊಂದುತ್ತಿದ್ದು, ಭಾರತದಾದ್ಯಂತ ಪ್ರತಿವರ್ಷ ಅಂದಾಜು 5 ಲಕ್ಷ ಅಂಗಾಂಗಗಳ ಅಗತ್ಯವಿದೆ. ಆದರೆ, ಪ್ರಸ್ತುತ ಕೇವಲ 2 ರಿಂದ 3 ಪ್ರತಿಶತದಷ್ಟು ಬೇಡಿಕೆಯನ್ನು ಮಾತ್ರ ಪೂರೈಸಲಾಗುತ್ತಿದೆ. ಮೆದುಳು ನಿಷ್ಕ್ರಿಯಗೊಂಡ ಯಾವುದೇ ವ್ಯಕ್ತಿಯ ಕುಟುಂಬದ ಸದಸ್ಯರ ಒಪ್ಪಿಗೆಯ ಮೇರೆಗೆ ಅಂಗಾಂಗ ದಾನ ಮಾಡಬಹುದಾಗಿದ್ದು, ಇದು ಕಾನೂನು ಬದ್ಧವಾಗಿದೆ. ಯಾವುದೇ ವಯಸ್ಸು ಅಥವಾ ಲಿಂಗ ಭೇದವಿಲ್ಲದೇ ಅಂಗಾಂಗ ಮತ್ತು ಅಂಗಾಂಶಗಳನ್ನು ದಾನ ಮಾಡಬಹುದಾಗಿದೆ.

ಅಂಗಾಂಗ ದಾನಕ್ಕೆ 483 ಜನ ನೋಂದಣಿ:ಜಿಲ್ಲಾ ಆರೋಗ್ಯ ಇಲಾಖೆಯ ಮಾಹಿತಿಯಂತೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಅಂಗಾಂಗ ದಾನ ಮಾಡಲು ಇದುವರೆಗೆ 483 ಜನ ನೋಂದಾಯಿಸಿಕೊಂಡಿದ್ದು, ಇದರಲ್ಲಿ 18 ವರ್ಷದಿಂದ 60 ವರ್ಷ ಮೇಲ್ಪಟ್ಟ ವಯೋಮಿತಿಯವರೂ ಕೂಡಾ ಇದ್ದಾರೆ. ನೋಂದಣಿ ಮಾಡಿದವರಲ್ಲಿ ಮಹಿಳೆಯರ ಸಂಖ್ಯೆಯೇ ಅತ್ಯಧಿಕವಾಗಿರುವುದು ವಿಶೇಷ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಅಂಗಾಂಗ ದಾನಕ್ಕೆ ನೋಂದಣಿ ಮಾಡಿಕೊಂಡಿರುವವರಲ್ಲಿ 283 ಸಂಖ್ಯೆಯ ಹೃದಯ ದಾನ ಮಾಡಲು ಒಪ್ಪಿಗೆ ನೀಡಿದ್ದಾರೆ. ಅಲ್ಲದೆ 209 ಮಂದಿ ಕರುಳು, 278 ಕಿಡ್ನಿ, 243 ಲಿವರ್, 221 ಶ್ವಾಸಕೋಶ, 211 ಮೇದೋಜೀರಕ ಗ್ರಂಥಿಗಳನ್ನು ದಾನ ಮಾಡಲು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಇದರ ಜೊತೆಗೆ ಈ ಅಂಗಗಳ ಅಂಗಾಂಶಗಳಾದ ರಕ್ತನಾಳಗಳು 179, ಮೂಳೆ 167, ಕಾರ್ಟಿಲೇಜ್ 167, ಎರಡು ಕಣ್ಣುಗಳ ಕಾರ್ನಿಯಾ 433, ಹೃದಯದ ಕವಾಟಗಳು 188 ಮತ್ತು 177 ಸಂಖ್ಯೆಯ ಚರ್ಮವನ್ನೂ ಕೂಡಾ ದಾನವಾಗಿ ನೀಡಲು ತಮ್ಮ ಒಪ್ಪಿಗೆ ಸೂಚಿಸಿದ್ದಾರೆ.

ಮೂತ್ರಪಿಂಡ ಮತ್ತು ಯಕೃತ್ತನ್ನು ಜೀವಂತ ದಾನಿಗಳು ಮೂಲಕ ಮತ್ತೊಬ್ಬರಿಗೆ ಕಸಿ ಮಾಡಬಹುದಾಗಿದ್ದು, ಹೃದಯ, ಶ್ವಾಸಕೋಶ ಮತ್ತು ಮೇದೋಜೀರಕ ಗ್ರಂಥಿಯ ದಾನಗಳನ್ನು ಮೆದುಳು ಮರಣ ಹೊಂದಿದ ದಾನಿಗಳ ಮೂಲಕ ಮಾತ್ರ ಪಡೆಯಬಹುದಾಗಿದೆ. ಜೀವಂತ ದಾನಿಯು, ತನ್ನ ಹತ್ತಿರದ ಸಂಬಂಧಿ ಅಥವಾ ದೂರದ ಸಂಬಂಧಿ, ಸಂಗಾತಿ, ಮಗ, ಮಗಳು, ಸಹೋದರ, ಸಹೋದರಿ, ಪೋಷಕರು, ಅಜ್ಜಿ-ತಾತ ಮತ್ತು ಮೊಮ್ಮಕ್ಕಳು ಮತ್ತು ನಿಕಟ ಸ್ನೇಹಿತರಿಗೆ ಮಾತ್ರ ಅಂಗಾಂಗ ದಾನ ಮಾಡಬಹುದಾಗಿದ್ದು, ಇವರು ತಮ್ಮ ಅಂಗಾಂಗ ದಾನ ಮಾಡಲು ರಾಜ್ಯ ಅಧಿಕಾರ ಸಮಿತಿಯಿಂದ ಅನುಮೋದನೆ ಪಡೆಯಬೇಕು.

ಮೃತ ದಾನಿಯು ಸಾಮಾನ್ಯವಾಗಿ ತಲೆಗೆ ಮಾರಣಾಂತಿಕ ಗಾಯವನ್ನು ಅನುಭವಿಸಿ, ಮೆದುಳು ನಿಷ್ಕ್ರಿಯಯಾಗಿದೆ ಎಂದು ಘೋಷಿಸಿದರೆ, ದಾನಿಗಳ ಕುಟುಂಬವು ದಾನಕ್ಕೆ ಒಪ್ಪಿಗೆ ನೀಡಲು ಆಯ್ಕೆ ಮಾಡಬಹುದು. ಅಂಗಾಂಗಗಳನ್ನು ಪಡೆದ ನಂತರ ದಾನಿಯ ದೇಹವನ್ನು ಗೌರವಯುತವಾಗಿ ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗುತ್ತದೆ. ಮತ್ತು ದಾನಿಯ ಅಂಗಗಳನ್ನು, ಅದನ್ನು ಸ್ವೀಕರಿಸುವ ರೋಗಿ ದಾಖಲಾಗಿರುವ ಆಸ್ಪತ್ರೆಗಳಿಗೆ ನಿಗದಿತ ಅವಧಿಯೊಳಗೆ ತಲುಪುವಂತೆ ಸುರಕ್ಷಿತವಾಗಿ ಸಾಗಿಸಲಾಗುತ್ತದೆ.

''ನೀ ನಾರಿಗಾದೆಯೋ ಎಲೆ ಮಾನವ'' ಎಂಬ ನುಡಿಗೆ ತದ್ದಿರುದ್ಧವಾಗಿ, ಯಾವುದೇ ವ್ಯಕ್ತಿ ತನ್ನ ಮರಣದ ನಂತರವೂ ಅಂಗಾಂಗ ದಾನದ ಮೂಲಕ ಹಲವರ ಜೀವ ಉಳಿಸುವ ಮತ್ತು ಹಲವು ಮಂದಿಯ ಜೀವಕ್ಕೆ ಬೆಳಕಾಗಬಹುದಾದ ಕಾರ್ಯಕ್ಕೆ ಪ್ರತಿಜ್ಞೆ ಮಾಡುವ ಮೂಲಕ ಮಣ್ಣಲ್ಲಿ ಮಣ್ಣಾಗುವ ತನ್ನ ದೇಹವನ್ನು, ಹಲವಾರು ಜೀವಗಳನ್ನು ಉಳಿಸುವ ಸಾರ್ಥಕ ಬದುಕನ್ನಾಗಿ ಪರಿವರ್ತಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಆರೋಗ್ಯ ಇಲಾಖೆಯ '24*7 ಕಾರ್ಯ ನಿರ್ವಹಿಸುವ ಮೊಬೈಲ್ ಸಂಖ್ಯೆ- 9845006768 ಅನ್ನು ಅಥವಾ ಸಮೀಪದ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.

ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಂಗಾಂಗ ದಾನಕ್ಕೆ ನೋಂದಣಿ ಮಾಡಿಕೊಂಡಿರುವವರ ಸಂಖ್ಯೆ ಕಡಿಮೆ ಇದೆ. ಆರೋಗ್ಯ ಇಲಾಖೆಯ ಮೂಲಕ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಆರಂಭಗೊಂಡು ಜಿಲ್ಲಾಸ್ಪತ್ರೆಯವರೆಗೂ ಕೂಡಾ ಅಂಗಾಂಗ ದಾನದ ಪ್ರಾಮುಖ್ಯತೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಸಾರ್ವಜನಿಕರು ಮೂಢನಂಬಿಕೆಗಳಿಗೆ ಒಳಪಟ್ಟು ಅಂಗಾಂಗ ದಾನದಂತಹ ಮಹಾನ್ ಕಾರ್ಯದಿಂದ ಹಿಂದೆ ಸರಿಯಬಾರದು. ವ್ಯಕ್ತಿಯು ಸಹಜ ಸಾವಿನ ನಂತರ ಅತನ ಅಂಗಾಂಗಗಳಿಂದ 8 ಜನರ ಜೀವ ಉಳಿಸಬಹುದು ಮತ್ತು ಅಂದಾಜು 50 ಜನರ ಜೀವಕ್ಕೆ ಬೆಳಕಾಗಬಹುದು ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಅರ್ಚನಾ ನಾಯಕ್ ತಿಳಿಸಿದ್ದಾರೆ.

ಇದನ್ನೂ ಓದಿ:ಮಲೇರಿಯಾದ ವಿರುದ್ಧ ಮೊದಲ ಲಸಿಕೆ ಪ್ರಯೋಗ; ಗರ್ಭಿಣಿಯರಿಗೆ ಭರವಸೆಯ ಆಶಾಕಿರಣ - protection for pregnant women

ABOUT THE AUTHOR

...view details