ನವದೆಹಲಿ: ಭಾರತದಲ್ಲಿ ಧೂಮಪಾನೇತರರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುತ್ತಿವೆ. ವಾಯುಮಾಲಿನ್ಯ, ಪರೋಕ್ಷ ಧೂಮಕ್ಕೆ ಒಡ್ಡಿಕೊಳ್ಳುವುದು, ಔದ್ಯೋಗಿಕ ಅಪಾಯಗಳು ಮತ್ತು ಅಡುಗೆ ಕೋಣೆಯ ಹೊಗೆಯಂತಹ ಒಳಾಂಗಣ ಮಾಲಿನ್ಯಕಾರಕಗಳು ಇದಕ್ಕೆ ಪ್ರಮುಖ ಕಾರಣಗಳೆಂದು ತಜ್ಞರು ತಿಳಿಸಿದ್ದಾರೆ.
ಲ್ಯಾನ್ಸೆಟ್ನ ಇ ಕ್ಲಿನಿಕಲ್ ಮೆಡಿಸಿನ್ ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನದ ಅನುಸಾರ, ಜಾಗತಿಕ ಶ್ವಾಸಕೋಶ ಕ್ಯಾನ್ಸರ್ನಲ್ಲಿ ಭಾರತದ ದರ ಶೇ 0.51 ರಷ್ಟಿದೆ. ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದಾಗ ಭಾರತದಲ್ಲಿ ಶ್ವಾಸಕೋಶದ ಕ್ಯಾನ್ಸರ್ 10 ವರ್ಷಗಳ ಮುಂಚೆಯೇ ಬೆಳವಣಿಗೆಯಾಗುತ್ತದೆ.
ಭಾರತದಲ್ಲಿ ಚಿಕ್ಕ ವಯಸ್ಸಿನ ಜನಸಂಖ್ಯೆಯಲ್ಲಿ ಕ್ಯಾನ್ಸರ್ ಪ್ರಕರಣಗಳು ವರದಿಯಾಗುತ್ತಿವೆ. ಇಲ್ಲಿನ ಕ್ಯಾನ್ಸರ್ ಬಾಧಿಸುವ ಸರಾಸರಿ ವಯಸ್ಸು 28.2 ವರ್ಷ. ಈ ಪ್ರಮಾಣ ಅಮೆರಿಕದಲ್ಲಿ 38 ವರ್ಷವಾದರೆ, ಚೀನಾದಲ್ಲಿ 39 ವರ್ಷ ಎಂದು ಅಧ್ಯಯನ ಹೇಳುತ್ತದೆ.
ಆಗ್ನೇಯ ಏಷ್ಯಾದಲ್ಲಿ ಧೂಮಪಾನ ಮಾಡದವರಲ್ಲೂ ಶ್ವಾಸಕೋಶದ ಕ್ಯಾನ್ಸರ್ ಹೆಚ್ಚಳಕ್ಕೆ ಕಾರಣ ವಾಯುಮಾಲಿನ್ಯ ಮಟ್ಟ ಪಿಎಂ 2.5 ಆಗಿರುವುದು ಎಂದು ಫೋರ್ಟಿಸ್ ಮೆಮೋರಿಯಲ್ ರಿಸರ್ಚ್ ಇನ್ಸಿಟಿಟ್ಯೂಟ್ನ ಡಾ.ಶ್ರೀನಿಧಿ ನತನ್ಯಾ ಮಾಹಿತಿ ನೀಡಿದ್ದಾರೆ.
ಭಾರತದಲ್ಲಿ ಶ್ವಾಸಕೋಶ ಕ್ಯಾನ್ಸರ್ಗೆ ಪ್ರಮುಖ ಕಾರಣ ಅಧಿಕ ಧೂಮಪಾನ ಮತ್ತು ಆನುವಂಶಿಕ ಒಳಗಾಗುವಿಕೆ. ಮಾಲಿನ್ಯ ರಾಜಧಾನಿ ಎಂದೇ ಗುರುತಿಸಿಕೊಂಡಿರುವ ದೆಹಲಿ ಮತ್ತು ದೇಶದ ಇತರೆ ನಗರಗಳಲ್ಲಿ ವಾಯುಮಾಲಿನ್ಯ ಮಟ್ಟ ಪಿ.ಎಂ 2.5 ಇದ್ದು, ಇದೂ ಕೂಡ ಕ್ಯಾನ್ಸರ್ಗೆ ಕೊಡುಗೆ ನೀಡುತ್ತಿದೆ ಎಂದು ಅವರು ತಿಳಿಸಿದರು.
ಭಾರತದಲ್ಲಿ ಶ್ವಾಸಕೋಶ ಕ್ಯಾನ್ಸರ್ ಎಚ್ಚರಿಕೆ ಗಂಟೆಯಂತೆ ಏರುತ್ತಿದೆ. ಇದಕ್ಕೆ ಪ್ರಮುಖ ಕಾರಣಗಳೆಂದರೆ, ಮಾಲಿನ್ಯ, ಪರೋಕ್ಷ ಧೂಮಪಾನ, ಔದ್ಯೋಗಿಕ ಕ್ಷೇತ್ರದಲ್ಲಿನ ಅಪಾಯ, ಮನೆಯಲ್ಲಿನ ಹೊಗೆಯಂತಹ ಒಳಾಂಗಣ ಮಾಲಿನ್ಯ ಎಂದು ಯುನಿಕ್ ಹಾಸ್ಪಿಟಲ್ ಕ್ಯಾನ್ಸರ್ ಸೆಂಟರ್ನ ಆಂಕಾಲಜಿ ವೈದ್ಯ ಡಾ.ಆಶೀಶ್ ಗುಪ್ತಾ ಹೇಳಿದ್ದಾರೆ.
ಕ್ಯಾನ್ಸರ್ನಂತಹ ಮಾರಕ ಆರೋಗ್ಯ ಸಮಸ್ಯೆಯನ್ನು ತಡೆಯುವ ನಿಟ್ಟಿನಲ್ಲಿ ಕಟ್ಟುನಿಟ್ಟಾದ ಗಾಳಿಯ ಗುಣಮಟ್ಟದ ನಿಯಮಗಳನ್ನು ಜಾರಿಗೊಳಿಸಬೇಕು. ಪರೋಕ್ಷ ಹೊಗೆ ಮತ್ತು ಪರಿಸರ ಮಾಲಿನ್ಯಕಾರಕಗಳ ಅಪಾಯಗಳ ಬಗ್ಗೆ ಸಾರ್ವಜನಿಕ ಜಾಗೃತಿ ಮೂಡಿಸಬೇಕು. ಇದರ ಜೊತೆಗೆ, ಹೆಚ್ಚಿನ ಅಪಾಯದ ಗುಂಪುಗಳಿಗೆ ನಿಯಮಿತ ಸ್ಕ್ರೀನಿಂಗ್ ಮಾಡಬೇಕು. ಈ ಮೂಲಕ ಭಾರತದಲ್ಲಿ ಧೂಮಪಾನಿಗಳಲ್ಲದವರನ್ನೂ ಬಾಧಿಸುವ ಶ್ವಾಸಕೋಶದ ಕ್ಯಾನ್ಸರ್ ಪ್ರಕರಣಗಳನ್ನು ಕಡಿಮೆ ಮಾಡಬಹುದು ಎಂದು ತಜ್ಞರು ಸಲಹೆ ನೀಡಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ:ಭಾರತದಲ್ಲಿ ಸಾವಿನ ದರ ಹೆಚ್ಚಿಸುತ್ತಿದೆ ಶ್ವಾಸಕೋಶದ ಕ್ಯಾನ್ಸರ್: ಆರಂಭದಲ್ಲೇ ಮಾಡಬೇಕಿದೆ ಪತ್ತೆ