ರೆಫ್ರಿಜರೇಟರ್ ಅಥವಾ ಸಾಧಾರಣ ಭಾಷೆಯಲ್ಲಿ ತಂಪಾದ ಪೆಟ್ಟಿಗೆ ಇನ್ನೂ ಲೋಕಲ್ ಭಾಷೆಯಲ್ಲಿ ತಂಗಳನ್ನದ ಪೆಟ್ಟಿಗೆ ಎಂದು ಕರೆಸಿಕೊಳ್ಳುವ ಆಳೆತ್ತರದ ಡಬ್ಬಿ ಈಗಿನ ಕಾಲದಲ್ಲಂತೂ ಎಲ್ಲರ ಮನೆಯಲ್ಲಿ ಇದ್ದೇ ಇರುತ್ತದೆ. ತರಕಾರಿಗಳು, ಹಣ್ಣುಗಳು ಮತ್ತು ಆಹಾರವನ್ನು ಸಂಗ್ರಹಿಸಲು ಮತ್ತು ತಾಜಾವಾಗಿಡಲು ಫ್ರಿಡ್ಜ್ ಅನ್ನು ಬಳಸಲಾಗುತ್ತದೆ.
ಒಮ್ಮೆ ಬಂಡವಾಳ ಹಾಕಿ ಮನೆಗೆ ತಂದರೆ ನಮ್ಮ ಎಲ್ಲ ಆಹಾರ ಪದಾರ್ಥಗಳ ಜವಾಬ್ದಾರಿಯನ್ನು ರೆಫ್ರಿಜರೇಟರ್ ಸರಾಗವಾಗಿ ವಹಿಸಿಕೊಳ್ಳುತ್ತದೆ. ಕೇವಲ ಕೆಲವೊಂದು ಆಂತರಿಕ ಸಮಸ್ಯೆಗಳಿಂದ ಅಥವಾ ವಿದ್ಯುತ್ತಿನ ಅಭಾವದಿಂದ ನಾವು ಇಟ್ಟಂತಹ ಆಹಾರ ಪದಾರ್ಥಗಳು ಹಾಳಾಗಿ ವಾಸನೆ ಬೀರಲು ಪ್ರಾರಂಭ ಮಾಡುತ್ತವೆಯೇ ಹೊರತು ಇತರ ಸಮಯದಲ್ಲಿ ಫ್ರಿಡ್ಜ್‌ನ ಕಾರ್ಯಕ್ಷಮತೆಗೆ ಸಾಟಿಯೇ ಇಲ್ಲ. ಹಾಳಾದ ಆಹಾರಗಳು ತಮ್ಮ ಕೆಟ್ಟ ವಾಸನೆಯನ್ನು ಪಕ್ಕದಲ್ಲಿರುವ ಇತರ ಆಹಾರಗಳಿಗೂ ಹಬ್ಬಿಸುತ್ತವೆ. ಜೊತೆಗೆ ಫ್ರಿಡ್ಜ್‌ನ ಎಲ್ಲ ಭಾಗಗಳಲ್ಲಿಯೂ ದುರ್ವಾಸನೆ ಉಂಟು ಮಾಡುತ್ತವೆ. ಆದ್ದರಿಂದ ಮೊದಲು ಅಂತಹ ಆಹಾರಗಳನ್ನು ತೆಗೆದು ಬೇರ್ಪಡಿಸುವುದರ ಜೊತೆಗೆ ಫ್ರಿಡ್ಜ್ ಸ್ವಚ್ಛ ಮಾಡುವ ಕಡೆಗೆ ಕೂಡ ಗಮನ ಹರಿಸಬೇಕು. ಎಷ್ಟೋ ಜನ ಅದರ ಶುಚಿತ್ವದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಕೆಲವರು ಸ್ವಚ್ಛತೆ ಮಾಡಿದರೂ ಮೇಲ್ನೋಟಕ್ಕೆ ಮಾತ್ರ ಮಾಡುತ್ತಾರೆ. ಹಾಗಾಗಿ ಅನೇಕರ ಮನೆಗಳಲ್ಲಿನ ಫ್ರಿಡ್ಜ್‌ಗಳು ದುರ್ವಾಸನೆ ಸೂಸುತ್ತಿವೆ. ಆದರೆ, ಫ್ರಿಡ್ಜ್ ಒಳಗೆ ಬ್ಯಾಕ್ಟೀರಿಯಾಗಳು ಶೇಖರಣೆಯಾಗುತ್ತಿರುವುದೇ ಈ ದುರ್ವಾಸನೆಗೆ ಕಾರಣ ಎನ್ನುತ್ತಾರೆ ತಜ್ಞರು. ಫ್ರಿಡ್ಜ್‌ನಿಂದ ಕೆಟ್ಟ ವಾಸನೆ ಬರದಂತೆ ಕ್ಲೀನಿಂಗ್ ಟಿಪ್ಸ್ ನೀಡಲಾಗಿದೆ. ಅದನ್ನು ಈಗ ನೋಡೋಣ.
ಸ್ವಚ್ಛಗೊಳಿಸುವ ಮೊದಲು ಫ್ರಿಡ್ಜ್ ಅನ್ನು ಆಫ್ ಮಾಡಿ. ನಂತರ ಸ್ವಚ್ಛಗೊಳಿಸಲು ಪ್ರಾರಂಭಿಸಿ. ಮೊದಲು ಫ್ರಿಡ್ಜ್‌ನಿಂದ ಎಲ್ಲ ಪದಾರ್ಥಗಳನ್ನು ತೆಗೆದುಹಾಕಿ ಮತ್ತು ಪಕ್ಕಕ್ಕೆ ಇರಿಸಿ. ನಂತರ ಎಲ್ಲ ಕಪಾಟನ್ನು ತೆಗೆದುಹಾಕಿ ಮತ್ತು ಅವುಗಳನ್ನು ಪಕ್ಕಕ್ಕೆ ಇರಿಸಿ. ನಂತರ ಬೆಚ್ಚಗಿನ ನೀರಿನಿಂದ ಕಪಾಟನ್ನು ತೊಳೆಯಿರಿ. ನಂತರ ಒಣ ಬಟ್ಟೆಯಿಂದ ಕಪಾಟನ್ನು ಸ್ವಚ್ಛವಾಗಿ ಒರೆಸಿ. ಹೀಗೆ ಮಾಡುವುದರಿಂದ ಕಪಾಟಿನಲ್ಲಿರುವ ಎಲ್ಲ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ.