ನವದೆಹಲಿ: ಇಂದು ವಿಶ್ವ ಅಂಗಾಂಗ ದಿನ. ಇದೇ ದಿನ ಹಿಂದೂ ಕುಟುಂಬವೊಂದು ಮುಸ್ಲಿಂ ವ್ಯಕ್ತಿಯ ಬದುಕು ಬೆಳಗಿಸಿದ ಘಟನೆ ದೆಹಲಿಯಲ್ಲಿ ನಡೆದಿದೆ. ಲಿವರ್ ಸಿರೋಸಿಸ್ನಿಂದ ಬಳಲುತ್ತಿದ್ದ ಮುಸ್ಲಿಂ ವ್ಯಕ್ತಿಯ ಜೀವ ಉಳಿಸಲು ಮಿದುಳು ನಿಷ್ಕ್ರಿಯಗೊಂಡ ತಮ್ಮ ಮಗನ ಯಕೃತ್ ಅನ್ನು ಹಿಂದೂ ಕುಟುಂಬ ದಾನ ಮಾಡಿದೆ.
ಈ ಕುರಿತು ಮಾತನಾಡಿರುವ ಸರ್ ಗಂಗಾ ರಾಮ್ ಆಸ್ಪತ್ರೆಯ ವೈದ್ಯರು, ಮೊಹಮ್ಮದ್ ಅಬ್ರರ್ ಎಂಬಾತ ಹೆಪಟೈಟಿಸ್ ಬಿಯಿಂದ ಬಳಲುತ್ತಿದ್ದರು. ಆತನಲ್ಲಿ ಲಿವರ್ ಸಿರೋಸಿಸ್ ಅಂತಿಮ ಹಂತದಲ್ಲಿದ್ದು, ಆಂತರಿಕ ಸ್ತ್ರಾವವಾಗುತ್ತಿತ್ತು. ದೈಹಿಕ ಸವಾಲುಗಳ ನಡುವೆ ಅಬ್ರರ್ ಸಕ್ರಿಯ ಜೀವನ ನಡೆಸುತ್ತಿದ್ದರು. ಜೀವನ ನಿರ್ವಹಣೆಗೆ ಶಾಪ್ ಜೊತೆಗೆ ಸಾಮಾಜಿಕ ಕಾರ್ಯದಲ್ಲಿ ತೊಡಗಿದ್ದರು. ಆದರೆ, ಆರೋಗ್ಯ ತೀವ್ರವಾಗಿ ಹದಗೆಟ್ಟಿತ್ತು.
ಈ ಹಿನ್ನೆಲೆಯಲ್ಲಿ ತತ್ಕ್ಷಣದ ಯಕೃತ್ ಕಸಿ ಚಿಕಿತ್ಸೆ ಅವಶ್ಯಕವಾಗಿತ್ತು. ಯಕೃತ್ ಸಮಸ್ಯೆಯಿಂದಾಗಿ ಶ್ವಾಸಕೋಶ ಮತ್ತು ಹೃದಯ ಸಮಸ್ಯೆ ತಲೆದೋರಿತ್ತು. ಇದಕ್ಕೆ ಸರ್ಜರಿ ಕೂಡ ಬಹಳ ಕ್ಲಿಷ್ಟಕರವಾಗಿತ್ತು. ಪೋಲಿಯೋ ಪೀಡಿತರಾಗಿರುವ ಹಿನ್ನೆಲೆಯಲ್ಲೂ ಶಸ್ತ್ರಚಿಕಿತ್ಸೆ ನಡೆಸಲು ಪ್ರದೇಶ ಕೂಡ ಸೀಮಿತವಾಗಿತ್ತು.