Fruits To Eat In Winter Season: ಸೂರ್ಯನ ಬಿಸಿಲಿಗೆ ಸರಿಯಾಗಿ ದೇಹವನ್ನು ಒಡ್ಡದಿದ್ದರೆ ವಿಟಮಿನ್ ಡಿ ಕೊರತೆಯಾಗಿ ರೋಗನಿರೋಧಕ ಶಕ್ತಿ ಕುಂದುತ್ತದೆ ಎಂದು ತಜ್ಞರು ತಿಳಿಸುತ್ತಾರೆ. ಇದರಿಂದಾಗಿ ನಾನಾ ರೀತಿಯ ಕಾಯಿಲೆಗಳೂ ಬರುತ್ತವೆ. ಇಂಥ ತೊಂದರೆಗಳನ್ನು ತಡೆಯಬೇಕಾದರೆ ಚಳಿಗಾಲದ ಅವಧಿಯಲ್ಲಿ ಸಿಗುವ ಕೆಲವು ಆಹಾರ ಪದಾರ್ಥಗಳನ್ನು ಸೇವಿಸಬೇಕು ಎನ್ನುತ್ತಾರೆ ಪೌಷ್ಟಿಕ ಆಹಾರ ತಜ್ಞರು.
ನೆಲ್ಲಿಕಾಯಿ:ಚಳಿಗಾಲದಲ್ಲಿ ಹೇರಳವಾಗಿ ದೊರೆಯುವ ನೆಲ್ಲಿಕಾಯಿಯನ್ನು ನೇರವಾಗಿ ಅಥವಾ ಜ್ಯೂಸ್ ಮತ್ತು ಉಪ್ಪಿನಕಾಯಿ ರೂಪದಲ್ಲೂ ಸೇವಿಸಬಹುದು. ಫುಡ್ ಫಂಕ್ಷನ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ, ಆಮ್ಲಾವನ್ನು ಆಗಾಗ್ಗೆ ಸೇವಿಸುವುದರಿಂದ ಈ ಅವಧಿಯಲ್ಲಿ ಸೋಂಕು ತಡೆಯಬಹುದು ಎಂದು ಹೇಳುತ್ತದೆ. ಚೀನಾದ ಕೃಷಿ ವಿಶ್ವವಿದ್ಯಾಲಯದ ಖ್ಯಾತ ಪೌಷ್ಟಿಕ ತಜ್ಞ ಡಾ.ಜಿಯಾನ್ ಶು ಈ ಸಂಶೋಧನೆಯಲ್ಲಿ ಭಾಗವಹಿಸಿದ್ದರು. ಇದರಲ್ಲಿ ಹೇರಳವಾಗಿರುವ ವಿಟಮಿನ್ ಸಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಮಲಬದ್ಧತೆ ಮತ್ತು ಇತರ ಜೀರ್ಣಕಾರಿ ಸಮಸ್ಯೆಗಳಿಗೂ ಆಮ್ಲಾ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಕಬ್ಬು:ಚಳಿಗಾಲದಲ್ಲಿ ಚಯಾಪಚಯ ಕ್ರಿಯೆ ನಿಧಾನವಾಗುವುದರಿಂದ ದೇಹದಿಂದ ಹೊರಹೋಗಬೇಕಿರುವ ಹೆಚ್ಚುವರಿ ಕೊಬ್ಬು ಮತ್ತು ವಿಷಕಾರಿ ಅಂಶಗಳು ಅಲ್ಲಿಯೇ ಉಳಿಯುತ್ತವೆ. ಪರಿಣಾಮ, ಇದು ಯಕೃತ್ತಿನ ಮೇಲೆ ಪರಿಣಾಮ ಬೀರುತ್ತದೆ. ದೇಹದಿಂದ ವಿಷ ತೆಗೆದುಹಾಕುತ್ತದೆ. ಯಕೃತ್ತಿನ ಕಾರ್ಯವನ್ನು ಸುಧಾರಿಸುವಲ್ಲಿ ಕಬ್ಬಿನ ರಸ ಪ್ರಮುಖ ಪಾತ್ರ ವಹಿಸುತ್ತದೆ. ಇದರಲ್ಲಿರುವ ಕ್ಷಾರೀಯ ಸಂಯುಕ್ತಗಳು ದೇಹದಲ್ಲಿ ಆಮ್ಲ ಮಟ್ಟವನ್ನು ನಿಯಂತ್ರಿಸಲು ಸಹಾಯಕ. ಇದು ಶೀತ ಗಾಳಿಯಿಂದ ಚರ್ಮವನ್ನು ರಕ್ಷಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.
ಬಾರೆಹಣ್ಣು:ಚಳಿಗಾಲದಲ್ಲಿ ಮಕ್ಕಳು ಹೆಚ್ಚಾಗಿ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಇದಕ್ಕೆ ಕಾರಣ ಅವರಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗಿರುವುದು. ಬಾರೆಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಮಲಬದ್ಧತೆಯ ಸಮಸ್ಯೆಯನ್ನೂ ಸಹ ದೂರ ಮಾಡುತ್ತದೆ. ವಯಸ್ಕರಲ್ಲಿಯೂ ಚಳಿಗಾಲದಲ್ಲಿ ಕೀಲು ಬಿಗಿತದಂತಹ ಸಮಸ್ಯೆಗಳನ್ನು ದೂರ ಮಾಡಲು ಬಾರೆಹಣ್ಣು ಉತ್ತಮವಾಗಿ ಕೆಲಸ ಮಾಡುತ್ತದೆ. ಇದರಲ್ಲಿರುವ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ, ರಂಜಕ ಮತ್ತು ಕಬ್ಬಿಣವು ಮೂಳೆಗಳ ಶಕ್ತಿ ಹೆಚ್ಚಿಸುತ್ತದೆ ಎಂದು ತಜ್ಞರು ತಿಳಿಸುತ್ತಾರೆ.
ಹುಣಸೆಹಣ್ಣು:ಚಳಿಗಾಲದಲ್ಲಿ ಅಜೀರ್ಣಕ್ಕೆ ಹುಣಸೆಹಣ್ಣು ಉತ್ತಮ ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿರುವ ಹೆಚ್ಚಿನ ಪ್ರಮಾಣದ ಮೆಗ್ನೀಸಿಯಂ ಮತ್ತು ಕ್ಯಾಲ್ಸಿಯಂ ಮೂಳೆಗಳನ್ನು ಬಲಪಡಿಸುತ್ತದೆ. ಮೂಳೆ ಮುರಿತ ತಡೆಯುತ್ತದೆ. ಭವಿಷ್ಯದಲ್ಲಿ ಆಸ್ಟಿಯೊಪೊರೋಸಿಸ್ ಸಮಸ್ಯೆಯನ್ನೂ ತಡೆಯಬಹುದು. ಹುಣಸೆ ಹಣ್ಣಿನಲ್ಲಿರುವ ಫ್ಲೇವನಾಯ್ಡ್ ಹಾಗೂ ಪಾಲಿಫಿನಾಲ್ ತೂಕವನ್ನು ನಿಯಂತ್ರಣದಲ್ಲಿಡಲು ಇದು ಸಹಕಾರಿ. ಪಾಲಿಫಿನಾಲಿಕ್ ಸಂಯುಕ್ತಗಳು ಕರುಳಿನಲ್ಲಿ ಹುಣ್ಣುಗಳ ರಚನೆಯ ವಿರುದ್ಧ ರಕ್ಷಿಸುತ್ತದೆ. ಹುಣಸೆಬೀಜವನ್ನು ಪುಡಿ ಮಾಡಿ ಮಜ್ಜಿಗೆಯೊಂದಿಗೆ ಬೆರೆಸಿ ಸೇವಿಸಿದರೆ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ ಎಂದು ತಜ್ಞರು ಹೇಳುತ್ತಾರೆ.
ಎಳ್ಳು:ಎಳ್ಳಿನಲ್ಲಿರುವ ಅಗತ್ಯ ಕೊಬ್ಬು ಮೂಳೆಗಳು ಮತ್ತು ಕೀಲುಗಳನ್ನು ಬಲಪಡಿಸುತ್ತದೆ. ಚಳಿಗಾಲದಲ್ಲಿ ಕೀಲು ನೋವುಗಳು ಮತ್ತು ಮೂಳೆ ಮುರಿತಗಳನ್ನು ತಡೆಯಲು ಸಹಕಾರಿಯಾಗಿದೆ. ಬೆಲ್ಲದೊಂದಿಗೆ ಬೆರೆಸಿ ಎಳ್ಳು ಸೇವಿಸಿದರೆ, ದೇಹವನ್ನು ಬೆಚ್ಚಗಾಗಿಸುತ್ತದೆ. ಜೀರ್ಣಕಾರಿ ಸಮಸ್ಯೆಗಳನ್ನು ಕಡಿಮೆ ಮಾಡಲು ಮತ್ತು ದೇಹದಲ್ಲಿನ ರಕ್ತಹೀನತೆಯನ್ನು ತಡೆಯಲು ಎಳ್ಳಿಗಿಂತ ಉತ್ತಮವಾದುದು ಬೇರೆ ಇಲ್ಲ ಎಂದು ತಜ್ಞರು ತಿಳಿಸುತ್ತಾರೆ.
ಈ ಆಹಾರಗಳನ್ನು ಮಿತವಾಗಿ ಸೇವಿಸಬಹುದು:
- ಚಳಿಗಾಲದಲ್ಲಿ ಉಂಟಾಗುವ ಜೀರ್ಣಕ್ರಿಯೆ ಸಮಸ್ಯೆಗಳಿಂದ ಮುಕ್ತಿ ಪಡೆಯಲು ತುಪ್ಪವನ್ನು ಉತ್ತಮ ಔಷಧವಾಗಿಯೂ ಬಳಸಬಹುದು. ಇದನ್ನು ಮಿತವಾಗಿ, ಅಂದರೆ ದಿನಕ್ಕೆ ಒಂದು ಅಥವಾ ಎರಡು ಟೀಸ್ಪೂನ್ ಸೇವಿಸುವುದು ಉತ್ತಮ ಎನ್ನುತ್ತಾರೆ ತಜ್ಞರು.
- ಹೇರಳವಾಗಿ ದೊರೆಯುವ ಸಿಹಿ ಗೆಣಸು/ಬೀಟ್ಗೆಡ್ಡೆ ಮಲಬದ್ಧತೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತವೆ ಎಂಬ ಅಂಶವನ್ನು ತಜ್ಞರು ಬಹಿರಂಗಪಡಿಸಿದ್ದಾರೆ.
- ದಿನನಿತ್ಯ ಖರ್ಜೂರ ಸೇವಿಸುವುದರಿಂದ ಚರ್ಮಕ್ಕೆ ತೇವಾಂಶ ಸಿಗುತ್ತದೆ. ಇದು ಚರ್ಮವನ್ನು ಶುಷ್ಕತೆಯಿಂದ ರಕ್ಷಿಸುತ್ತದೆ.
- ನಾರಿನಂಶವಿರುವ ತಿಂಡಿಗಳನ್ನು ದಿನನಿತ್ಯ ಸೇವಿಸುವುದರಿಂದ ಚಳಿಗಾಲದಲ್ಲಿ ದೇಹವು ಬೆಚ್ಚಗಿರುತ್ತದೆ ಎನ್ನುತ್ತಾರೆ ತಜ್ಞರು.
ಓದುಗರಿಗೆ ವಿಶೇಷ ಸೂಚನೆ:ಈ ಲೇಖನದಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ, ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ನಿಮ್ಮ ವೈಯಕ್ತಿಕ ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳುವುದು ಉತ್ತಮ.
ಇದನ್ನೂ ಓದಿ:ಹೊಟ್ಟೆಯಲ್ಲಿ ಉರಿಯೂತ, ಗ್ಯಾಸ್ಟ್ರಿಕ್ ತೊಂದರೆಯೇ? ಒಂದು ಚಿಕ್ಕ ಬೆಲ್ಲದ ತುಂಡಿನಿಂದ ಪರಿಹಾರ; ಹೇಗೆ ಗೊತ್ತೇ?