ನವದೆಹಲಿ: ಮೊದಲ ಬಾರಿಯ ಡೆಂಗ್ಯೂ ಎರಡನೇ ಬಾರಿಯ ಸೋಂಕಿಗಿಂತ ಮಾರಣಾಂತಿಕವಾಗಬಹುದಾಗಿದೆ ಎಂದು ಅಧ್ಯಯನವೊಂದು ತಿಳಿಸಿದೆ. ಈ ಮೂಲಕ ಮೊದಲ ಬಾರಿಗಿಂತ ಎರಡನೇ ಬಾರಿ ಡೆಂಗ್ಯೂ ಸೋಂಕು ಮಾರಾಣಾಂತಿಕ ಎಂಬ ನಂಬಿಕೆಗೆ ಈ ಅಧ್ಯಯನ ಸವಾಲು ಹಾಕಿದೆ.
ಜರ್ನಲ್ ನೇಚರ್ ಮೆಡಿಸಿನ್ನಲ್ಲಿ ಪ್ರಕಟವಾದ ಅಧ್ಯಯನ ಅನುಸಾರ, ಭಾರತದ ಮಕ್ಕಳಲ್ಲಿ ಡೆಂಗ್ಯೂ ಪ್ರಕರಣಗಳ ತೀವ್ರತೆ ಹೆಚ್ಚಿದೆ. ಇವರಲ್ಲಿ ಎರಡನೇ ಬಾರಿಗಿಂತ ಮೊದಲ ಬಾರಿ ತುತ್ತಾದವರಲ್ಲಿ ಗಂಭೀರತೆ ಹೆಚ್ಚಿದೆ. ಈ ಹಿನ್ನೆಲೆ ವಿಜ್ಞಾನಿಗಳು ಮಕ್ಕಳ ಮೇಲೆ ಡೆಂಗ್ಯೂವಿನ ತೀವ್ರ ಪರಿಣಾಮಗಳ ಕುರಿತು ಅಧ್ಯಯನ ನಡೆಸಿದ್ದು, ಮೊದಲ ಬಾರಿ ಸೋಂಕಿಗೆ ತುತ್ತಾದವರಲ್ಲಿ ಭಾರೀ ಪರಿಣಾಮ ಕಾಣಬಹುದಾಗಿದೆ.
ಭಾರತದಲ್ಲಿ ಕಳೆದೆರಡು ದಶಕಗಳಿಂದ ಡೆಂಗ್ಯೂ ಗಣನೀಯ ಪ್ರಮಾಣದಲ್ಲಿ ಹೆಚ್ಚಳ ಕಂಡು ಬಂದಿದೆ. ಈ ಲೆಕ್ಕದಲ್ಲಿ ಭಾರತವೂ ಜಗತ್ತಿನಲ್ಲಿಯೇ ಡೆಂಗ್ಯೂ ಪ್ರಕರಣದಲ್ಲಿ ಮೊದಲಿದೆ.
ಡೆಂಗ್ಯೂ ರೋಗಿಗಳಲ್ಲಿ ಎರಡು ವರ್ಗವಿದೆ. ಮೊದಲ ಬಾರಿಗೆ ಸೋಂಕಿಗೆ ಒಳಗಾದವರು ಮತ್ತು ಎರಡನೇ ಬಾರಿ ಸೋಂಕಿಗೆ ಒಳಗಾದವರು. ನಂಬಿಕೆ ಪ್ರಕಾರ ಎರಡನೇ ಬಾರಿ ಸೋಂಕಿಗೆ ಒಳಗಾದವರು ಗಮನಾರ್ಹ ಅಪಾಯಕ್ಕೆ ಗುರಿಯಾಗುತ್ತಾರೆ ಎಂಬುದು. ಈ ಹಿನ್ನೆಲೆ ಈ ಗುಂಪಿನ ಮೇಲೆ ಹೆಚ್ಚಿನ ಗಮನ ಹರಿಸಿ, ಲಸಿಕೆ ಅಭಿವೃದ್ಧಿ ಮತ್ತು ಚಿಕಿತ್ಸೆಗಳ ಸಂಶೋಧನೆ ನಡೆದಿದೆ.