ವದೆಹಲಿ:ಭಾರತದಲ್ಲಿ ಸಮುದ್ರ ಮಟ್ಟಕ್ಕಿಂತ 2 ಸಾವಿರ ಮೀಟರ್ ಎತ್ತರ ಪ್ರದೇಶಗಳಲ್ಲಿ ವಾಸಿಸುತ್ತಿರುವ ಐದು ವರ್ಷದೊಳಗಿನ ಮಕ್ಕಳಲ್ಲಿ ಶೇ 40ರಷ್ಟು ದೈಹಿಕ ಬೆಳವಣಿಗೆ ಕುಂಠಿತವಾಗಿದೆ ಎಂದು ಅಧ್ಯಯನ ತಿಳಿಸಿದೆ. ಬಿಎಂಜೆ ನ್ಯೂಟ್ರಿಷಿಯನ್ ಪ್ರಿವೆನ್ಶನ್ ಮತ್ತು ಹೆಲ್ತ್ನಲ್ಲಿ ಈ ಅಧ್ಯಯನ ವರದಿಯನ್ನು ಪ್ರಕಟಿಸಲಾಗಿದೆ.
ಸರ್ಕಾರದ ಅನೇಕ ಉಪಕ್ರಮಗಳ ಹೊರತಾಗಿಯೂ ದೀರ್ಘಕಾಲದ ಅಪೌಷ್ಟಿಕತೆ ಬಾಲ್ಯದಲ್ಲಿನ ಬೆಳವಣಿಗೆಗೆ ಕುಂಠಿತಗೊಳ್ಳಲು ಕಾರಣವಾಗುತ್ತಿದೆ. ಇದು ಭಾರತದ ಸಾರ್ವಜನಿಕ ಆರೋಗ್ಯಕ್ಕೆ ಸವಾಲಾಗಿದೆ. ಐದು ವರ್ಷದೊಳಗಿನ ಮೂರನೇ ಒಂದರಷ್ಚು ಮಕ್ಕಳು ಈ ಸಮಸ್ಯೆಗೆ ತುತ್ತಾಗುತ್ತಿದ್ದಾರೆ.
ಈ ಹಿಂದಿನ ಪರಿಸ್ಥಿತಿಗೆ ಹೋಲಿಸಿದಾಗ ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಸಾರ್ವಜನಿಕ ಆರೋಗ್ಯದ ಮಧ್ಯಸ್ಥಿಕೆಯನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಲಾಗುತ್ತಿದೆ. ಐಯೋಡಿನ್ ಕೊರತೆ ಅತಿ ಎತ್ತರ ಪ್ರದೇಶದಲ್ಲಿ ವಾಸಿಸುವ ಮಕ್ಕಳಲ್ಲಿ ಕಂಡುಬರುತ್ತಿರುವ ಸಾಮಾನ್ಯ ಸಮಸ್ಯೆಯಾಗಿದ್ದು, ನಿರ್ವಹಣೆ ಮಾಡಲಾಗುತ್ತಿದೆ ಎಂದು ನ್ಯೂಟ್ರಿಷಿಯನ್ ಆ್ಯಂಡ್ ಹೆಲ್ತ್ನ ಪ್ರೊ.ಸುಮಂತ್ರಾ ರೇ ತಿಳಿಸಿದ್ದಾರೆ.
ಆದರೆ, ಈ ಅಧ್ಯಯನವು ಗುಡ್ಡಗಾಡಿನಂತಹ ಎತ್ತರದ ಪ್ರದೇಶದಲ್ಲಿ ವಾಸಿಸುವ ಮಕ್ಕಳಲ್ಲಿ ಅಪೌಷ್ಠಿಕತೆಯಂತಹ ಸಂಕೀರ್ಣ ಸಮಸ್ಯೆಯನ್ನು ತೋರಿಸುತ್ತಿದೆ. ಇದರಲ್ಲಿ ವಂಶವಾಹಿನಿ, ಪರಿಸರ, ಜೀವನಶೈಲಿ ಮತ್ತು ಸಾಮಾಜಿಕ ಆರ್ಥಿಕ ಅಂಶಗಳನ್ನು ಅಧ್ಯಯನ ಗಮನಿಸಿದೆ ಎಂದಿದ್ದಾರೆ.